

ಪಾಂಡವಪುರ: ಮಕ್ಕಳ ಪಾಲನೆಯಲ್ಲಿ ಪಾಲಕರು ಎಡವುತ್ತಿರುವ ಪರಿಣಾಮ ಈಗಿನ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮೇಲುಕೋಟೆ ಶಾಖೆಯ ಯೋಜನಾಧಿಕಾರಿ ಸರೋಜಾ ಹೇಳಿದರು.
ತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರದಡಿಯಲ್ಲಿ ಶನಿವಾರ ಆಯೋಜಿಸಿದ್ದ ಸೃಜನಾಶೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಅತ್ತರೆ ಪಾಲಕರಾದವರು ನಾಲ್ಕು ಪ್ರೀತಿಯ ಮಾತುಗಳನ್ನಾಡಿ ಸಮಾಧಾನ ಪಡಿಸಬೇಕು. ಇತ್ತೀಚೆಗೆ ಮಕ್ಕಳನ್ನು ಸಮಾಧಾನಪಡಿಸಲು ತಾಯಂದಿರು ಅನುಸರಿಸುತ್ತಿರುವ ಮಾರ್ಗ ಸರಿಯಿಲ್ಲ. ಮಕ್ಕಳಿಗೆ ಹಣ ನೀಡಿ ಕುರುಕಲು ತಿಂಡಿ ಖರೀದಿಸಲು, ಇಲ್ಲವೇ ಮೊಬೈಲ್ ಕೈಗೆ ಕೊಟ್ಟು ಅಳುವು ನಿಲ್ಲಿಸುತ್ತಾರೆ. ಮಕ್ಕಳಿಗೆ ಮನೆಯಲ್ಲಿ ಪ್ರೀತಿ, ವಿಶ್ವಾಸದ ಮಾತುಗಳು ಸಿಕ್ಕರೆ ಹೊರಗಿನ ಪ್ರಪಂಚಕ್ಕೆ ಹೋಗುವುದಿಲ್ಲ. ಒಂದರ್ಥದಲ್ಲಿ ಪಾಲಕರೇ ಮಕ್ಕಳನ್ನು ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿಯೇ ಮಕ್ಕಳು ಡ್ರಗ್ಸ್, ಅಫೀಮು ಮುಂತಾದ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಮಹಿಳೆಯರು ಒಳ್ಳೆಯ ವಿಚಾರಗಳನ್ನು ಗ್ರಹಿಸಲು ಹೆಚ್ಚು ಆಸಕ್ತಿ ತೋರುವುದಿಲ್ಲ. ಅದೇ ಸಿನಿಮಾ, ಧಾರಾವಾಹಿಗಳ ಬಗ್ಗೆ ಹೆಚ್ಚು ಒಲವು ತೋರುತ್ತಾರೆ. ಹಿಂದೆ ಕೂಡು ಕುಟುಂಬ ಇತ್ತು. ಮನೆಯ ಹಿರಿಯರ ಪ್ರೀತಿ, ವಿಶ್ವಾಸ, ಕಾಳಜಿಯಲ್ಲಿ ಮಕ್ಕಳು ಬೆಳೆಯುತ್ತಿದ್ದರು. ಈಗ ಮದುವೆಯಾದ ತಕ್ಷಣ ಬೇರೆ ಮನೆ ಮಾಡುವುದರಿಂದ ಕಿರಿಯ ವಯಸ್ಸಿನಲ್ಲಿ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಹಿರಿಯರು ಇಲ್ಲದೆ, ಕೋಪ, ಆಲೋಚನೆ ಮಾಡುವ ಶಕ್ತಿ ಎಲ್ಲವನ್ನೂ ಕಳೆದುಕೊಂಡು ಮಾನಸಿಕ ಒತ್ತಡಗಳಿಗೆ ಯುವ ಸಮುದಾಯ ಸಿಲುಕುತ್ತಿದೆ ಎಂದು ವಿಷಾದಿಸಿದರು.
ಅನೇಕ ಮಹಿಳೆಯರು ತಮ್ಮ ಗಂಡನ ವಿಚಾರದಲ್ಲಿ ಧೈರ್ಯ ಮಾಡದೆ ತಪ್ಪುಗಳನ್ನು ಮುಚ್ಚಿಟ್ಟುಕೊಂಡು ಬರುತ್ತಿದ್ದಾರೆ. ಗಂಡ ಕುಡಿದು ಬಂದು ಗಲಾಟೆ ಮಾಡಿದರೂ ಹೊರಗೆ ಹೇಳುವುದಿಲ್ಲ. ಹೀಗಾಗಿಯೇ ಮಹಿಳೆಯರು ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಇಲ್ಲಿ ನೀಡುವ ಕಾನೂನು ಅರಿವು ಹಾಗೂ ಇತರ ವಿಚಾರಗಳನ್ನು ಮನನಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಹದೇಶ್ವರಪುರ ವ್ಯಾಪ್ತಿಯ ಸಿಎಚ್‌ಒ ಪ್ರಶಾಂತ್ ಆರೋಗ್ಯ ಕಾಳಜಿ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ 20 ಲೀಟರ್ ಸಾಮರ್ಥ್ಯದ ನೀರಿನ ಕ್ಯಾನ್ ವಿತರಿಸಲಾಯಿತು. ಮದ್ಯವರ್ಜನ ಶಿಬಿರದ ಗೌರವಾಧ್ಯಕ್ಷ ಜವರೇಗೌಡ, ಅಧ್ಯಕ್ಷ ಕೆಂಪೇಗೌಡ, ಮುಖಂಡರಾದ ಜಲಬೋರೇಗೌಡ, ಗ್ರಾಪಂ ಮಾಜಿ ಸದಸ್ಯೆ ಅನಿತಾ ರಾಣಿ, ಮೇಲ್ವಿಚಾರಕಿ ಪುಷ್ಪವತಿ, ಸಮನ್ವಯಾಧಿಕಾರಿ ಸವಿತಾ, ಸೇವಾ ಪ್ರತಿನಿಧಿ ಜಯಶೀಲಾ ಇತರರು ಇದ್ದರು.