

ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿಯಾಗಿರುವ ಗಲಭೆಕೋರರ ಬಿಡುಗಡೆಗಾಗಿ ಆಗ್ರಹಿಸಿದ ಪಾಲಕರು ಪೊಲೀಸ್ ಠಾಣೆಯ ಬಳಿ ಜಮಾಯಿಸಿ, ಹೈಡ್ರಾಮವನ್ನೇ ನಡೆಸಿದರು.
ಗಲಭೆ ಸಂಬಂಧ ಶನಿವಾರ ಕಳೆದ ರಾತ್ರಿ ಸುಮಾರು 57 ಗಲಭೆಕೋರರನ್ನು ಡಿಜೆ ಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪಾಲಕರಿಂದ ಠಾಣೆಗೆ ಜಮಾಯಿಸಿ ಬಿಡುಗಡೆಗೆ ಆಗ್ರಹಿಸಿದರು.
ನಮ್ಮ ಮಕ್ಕಳು ಯಾವುದೇ ತಪ್ಪು ಮಾಡಿಲ್ಲ. ಅವರನ್ನು ಬಿಟ್ಟು ಬಿಡಿ ಎಂದು ಠಾಣೆಯ ಮುಂದೆ ಗೋಳಾಡಿದರು. ಆದರೆ, 144 ಸೆಕ್ಷನ್ ಜಾರಿ ಇರುವ ಹಿನ್ನೆಲೆಯಲ್ಲಿ ಪಾಲಕರು ಠಾಣೆ ಮುಂದೆ ಜಮಾಯಿಸದಂತೆ ಮಹಿಳಾ ಪೊಲೀಸ್ ಸಿಬ್ಬಂದಿ ವಾಪಸ್ಸು ಕಳುಹಿಸಿದರು.
ಈ ವೇಳೆ ಮಹಿಳೆಯೊಬ್ಬಳು ನನ್ನ ಮಗನನ್ನು ನೋಡ್ಬೇಕು ಬಿಡಿ ಎಂದು ಕಣ್ಣೀರಾಕುತ್ತಾ ಠಾಣೆಯ ಮುಂಭಾಗದಲ್ಲೇ ಕುಸಿದು ಬಿದ್ದಳು. (ದಿಗ್ವಿಜಯ ನ್ಯೂಸ್)