ಹೆತ್ತವರ ಬುದ್ಧಿವಾದಗಳು ಕಾಳಜಿಯೇ ಹೊರತು ಬೈಗುಳ ಅಲ್ಲ!

ವಿಜಯವಾಣಿ (4)
Published on
| ಡಾ.ಕೆ.ಪಿ.ಪುತ್ತೂರಾಯ

ಒಂದು ಮನೆಯಲ್ಲಿ ಒಬ್ಬ ಹುಡುಗನಿದ್ದ. ಬೇಜವಾಬ್ದಾರಿತನ, ಹುಡುಗಾಟಿಕೆ ಅವನಲ್ಲಿ ತುಂಬಿ ತುಳುಕಾಡುತ್ತಿದ್ದವು. ಆಗಷ್ಟೆ ಪದವೀಧರನಾಗಿದ್ದ. ನೌಕರಿಗಾಗಿ ತುಂಬಾ ಕಡೆ ಅರ್ಜಿ ಹಾಕಿದ್ದ. ಕೊನೆಗೊಂದು ಕಂಪನಿಯಿಂದ ಇಂಟರ್​ವ್ಯೂಗೆ ಕರೆ ಬಂತು. ಈತ ಸಂತೋಷದಿಂದ ಹೊರಟ. ಹೊರಡುವ ಮುನ್ನ ಹೆತ್ತವರಿಗೆ ವಿಷಯ ತಿಳಿಸದೆ, ದೇವರಿಗೆ ಮಾತ್ರ ಕೈ ಮುಗಿದು ಹೊರಟ.

ಏಕೆಂದರೆ ಹೆತ್ತವರ ಮೇಲೆ ಅವನಿಗೆ ಅಸಮಾಧಾನ ಇತ್ತು. ಇದಕ್ಕೆ ಕಾರಣ, ದಿನನಿತ್ಯ ಅವರು ನೀಡುತ್ತಿದ್ದ ಬುದ್ಧಿವಾದಗಳು. ಎದ್ದ ಕೂಡಲೇ ‘ನೀನು ಹೊದ್ದುಕೊಂಡ ಹೊದಿಕೆಯನ್ನು ಮಡಚಿಟ್ಟು ಬಾ’ ಎಂಬುದು ಅಮ್ಮನ ಉಪದೇಶವಾದರೆ ‘ಬಚ್ಚಲು ಮನೆಯ ನಲ್ಲಿಯನ್ನು ನಿಲ್ಲಿಸಿ ಬಾ. ನಿನ್ನ ಕೋಣೆಯ ಲೈಟುಗಳನ್ನು, ಫ್ಯಾನ್ ಅನ್ನು ಆಫ್ ಮಾಡಿ ಬಾ’ ಎಂಬುದು ಅಪ್ಪನ ಆಜ್ಞೆ. ತಟ್ಟೆಯಲ್ಲಿ ಬಡಿಸಿದ್ದನ್ನು ಒಂದಿಷ್ಟು ಬಿಡದೆ ತಿಂದು ಖಾಲಿ ಮಾಡಬೇಕು.

ಆಹಾರದ ಪೋಲು ಒಂದು ಸಾಮಾಜಿಕ ಅಪರಾಧವೆಂಬುದು ಇನ್ನೊಂದು ಉಪದೇಶವಾದರೆ ಮನೆಯಿಂದ ಹೊರಗೆ ಹೋಗುವಾಗ ಗೇಟನ್ನು ಹಾಕಿಕೊಂಡು ಹೋಗಬೇಕು; ಮನೆಗೆ ಬಂದಮೇಲೆ, ವಾಹನದ ಕೀಲಿಕೈಯನ್ನು ಎಲ್ಲೆಂದರಲ್ಲಿ ಎಸೆಯುವುದಲ್ಲ! ನಿಗದಿತ ಜಾಗದಲ್ಲೇ ಇಡಬೇಕೆಂಬುದು ಇನ್ನೊಂದು ಬುದ್ಧಿವಾದ. ಇದರಿಂದ ರೋಸಿ ಹೋಗಿದ್ದ ಈ ಹುಡುಗನಿಗೆ ಒಮ್ಮೆ ಒಂದು ಕೆಲಸ ಸಿಗಲಿ, ಎಲ್ಲಾದರೂ ದೂರ ಹೋಗಿ ಆರಾಮವಾಗಿರಬಹುದೆಂಬ ಯೋಚನೆ ಬಲವಾಗಿ ಮೂಡಿತ್ತು.

ಈ ಯೋಚನೆಯೊಂದಿಗೇ, ಇಂಟರ್​ವ್ಯೂಗೆ ಹೋದ. ಅದು ಒಂದು ಹಾಸ್ಟೆಲ್​ನ ವಾರ್ಡನ್ ಕೆಲಸಕ್ಕೆ ನಡೆಸುತ್ತಿದ್ದ ಸಂದರ್ಶನವಾಗಿತ್ತು. ಅವನ ಜೊತೆ ಬಂದಿದ್ದ 30 ಅಭ್ಯರ್ಥಿಗಳ ಇಂಟರ್​ವ್ಯೂ ನಡೆದರೂ ಅಧಿಕಾರಿಗಳು ಇವನನ್ನು ಮಾತ್ರ ಇಂಟರ್​ವ್ಯೂಗೆ ಕರೆಯಲೇ ಇಲ್ಲ. ಸಂಜೆ 5 ಗಂಟೆ ಬೇರೆ ಆಗಿತ್ತು. ಇದರಿಂದ ನಿರಾಸೆಗೊಂಡ ಯುವಕ, ಬಹುಶಃ ನನ್ನ ಚಾನ್ಸ್ ತಪ್ಪಿತೇನೋ ಎಂದುಕೊಳ್ಳುತ್ತಾ ಇನ್ನೇನು ಹೊರಟು ಹೋಗಬೇಕೆನ್ನುವಷ್ಟರಲ್ಲಿ ಅಧಿಕಾರಿಗಳು ಇವನನ್ನು ಒಳಗೆ ಕರೆದರು.

ಕರೆದವರೇ, ಯಾವುದೇ ಪ್ರಶ್ನೆ ಮಾಡದೇ, ಇವನಿಗೆ ನೇಮಕಾತಿಯ ಆದೇಶದ ಪತ್ರವನ್ನಿತ್ತರು. ಇದನ್ನು ನೋಡಿ ಅತ್ಯಂತ ಸಂತೋಷವಾದರೂ, ಯಾವುದೋ ಒಂದು ಪ್ರಶ್ನೆಯನ್ನೂ ಕೇಳದೇ ಅವರು ಹೇಗೆ ನನ್ನನ್ನು ಆಯ್ಕೆ ಮಾಡಿದರು ಎಂಬ ಕುತೂಹಲದಿಂದ, ಅಧಿಕಾರಿಗಳಿಗೆ ಈ ಪ್ರಶ್ನೆಯನ್ನು ಕೇಳಿಯೇ ಬಿಟ್ಟ. ಉತ್ತರವಾಗಿ ಅಧಿಕಾರಿಯೊಬ್ಬರು ಹೇಳಿದರು: ‘ನಿನ್ನನ್ನು ಪ್ರಶ್ನಿಸುವ ಅವಶ್ಯಕತೆ ಬರಲಿಲ್ಲ. ಕಾರಣ ನೀನು ನಮ್ಮ ಆಫೀಸಿಗೆ ಬಂದ ಕ್ಷಣದಿಂದ, ಹೊರಡುವ ತನಕ, ನಿನ್ನ ಚಲನ ವಲನಗಳನ್ನು ನಾವೆಲ್ಲರೂ ನಮ್ಮ ಸಿ.ಸಿ. ಕ್ಯಾಮರಾದಲ್ಲಿ ವೀಕ್ಷಿಸಿದ್ದೇವೆ. ಒಳಗೆ ಬರುತ್ತಿದ್ದಂತೆ, ನೀನು ಆಫೀಸಿನ ಗೇಟನ್ನು ಮುಚ್ಚಿ ಬಂದೆ, ತೋಟದಲ್ಲಿ ಮಳೆಗೆ ಮಗುಚಿಬಿದ್ದಿದ್ದ ಹೂವಿನ ಕುಂಡವನ್ನು ಸರಿಯಾಗಿ ನಿಲ್ಲಿಸಿದೆ.

ಅಭ್ಯರ್ಥಿಗಳೆಲ್ಲರೂ ಹೊರಟು ಹೋಗುತ್ತಿದ್ದಂತೆ ಹಾಲ್​ನಲ್ಲಿ ಅನವಶ್ಯಕವಾಗಿ ಉರಿಯುತ್ತಿದ್ದ ಲೈಟ್​ಗಳನ್ನು ಹಾಗೂ ಫ್ಯಾನ್​ಗಳನ್ನು ಆಫ್ ಮಾಡಿದೆ. ಅಭ್ಯರ್ಥಿಗಳು ಕುಳಿತು ಎಲ್ಲೆಂದರಲ್ಲಿ ಬಿಟ್ಟುಹೋಗಿದ್ದ ಕುರ್ಚಿಗಳನ್ನು ಮತ್ತೆ ಅವುಗಳ ಜಾಗದಲ್ಲಿ ಜೋಡಿಸಿದೆ. ಎಸೆದು ಹೋಗಿದ್ದ ವೃತ್ತಪತ್ರಿಕೆಗಳನ್ನು ಜೋಡಿಸಿದೆ. ನಿನ್ನ ಜೊತೆ ಬಂದಿದ್ದ ಮಹಿಳೆಗೆ ನೀನು ಕುಳಿತಿದ್ದ ಆಸನವನ್ನು ಬಿಟ್ಟುಕೊಟ್ಟೆ. ಇದರಿಂದ ನಮಗೆ ಖಾತ್ರಿಯಾಯಿತು. ನಮ್ಮ ವಾರ್ಡನ್ ಹುದ್ದೆಗೆ ತಕ್ಕದಾದ ಅಭ್ಯರ್ಥಿ ಎಂದು. ಇವೆಲ್ಲವನ್ನೂ ನಿನಗೆ ಯಾರು ಹೇಳಿಕೊಟ್ಟರು? ನಿನ್ನ ಹೆತ್ತವರೇ?’ ಎಂಬ ಪ್ರಶ್ನೆಗೆ ಹೌದು ಎಂದು ಹೇಳುವಾಗ ಆ ಹುಡುಗನ ಮುಖದಲ್ಲಿ ಪಶ್ಚಾತ್ತಾಪದ ಛಾಯೆ ಎದ್ದು ಕಾಣುತ್ತಿತ್ತು.

ಹೌದು. ಮಕ್ಕಳು ತಪ್ಪು ಮಾಡುವಾಗ ಹೆತ್ತ ಕೆಲವರು ನೋಡಿಯೂ ಸುಮ್ಮನಿರುತ್ತಾರೆ. ಇದು ಕುರುಡುಮೋಹ. ಇಂಥವರು ಮಕ್ಕಳ ಹಿತಶತ್ರುಗಳೇ ಸರಿ. ಇನ್ನು ಕೆಲವರು ತಕ್ಷಣ ಬುದ್ಧಿವಾದ ಹೇಳಿ, ಅವರ ತಪ್ಪುಗಳನ್ನು ಸರಿಪಡಿಸುತ್ತಾರೆ. ಹೆತ್ತವರ ಬುದ್ಧಿವಾದಗಳು, ಕೇಳಲು ಕರ್ಕಶವಾಗಿದ್ದರೂ, ಮಕ್ಕಳ ಒಳಿತಿಗೇ ಎಂಬುದು ನಿರ್ವಿವಾದ. ಅವುಗಳು ಬೈಗುಳಗಳು ಅಲ್ಲ; ಹೆತ್ತವರಿಗೆ ನಮ್ಮ ಮೇಲೆ ಇರುವ ಪ್ರೀತಿ ಮತ್ತು ಕಾಳಜಿಯ ಪ್ರತೀಕ.

ಜೀವನದಲ್ಲಿ ಶಿಸ್ತಿನ ಪರಿಪಾಲನೆ ಮನೆಯಿಂದ ಆರಂಭವಾಗಬೇಕು. ಈ ವಿಚಾರದಲ್ಲಿ ಹೆತ್ತವರೇ ಮಕ್ಕಳಿಗೆ ಶಿಕ್ಷಕರು. ಇದನ್ನು ಮಕ್ಕಳು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಬಾಲ್ಯದಲ್ಲಿ ಹೆತ್ತವರಿಗೆ ಎಷ್ಟೊಂದು ಗೊತ್ತು! ಎಂದು ತಿಳಿದಿದ್ದ ಮಗ, ಪ್ರಾಯಕ್ಕೆ ಬಂದಂತೆ ಅವರು ಹೇಳಿದ್ದೆಲ್ಲಾ ಸರಿ ಇಲ್ಲ ಎನ್ನಲು ಶುರುಮಾಡುತ್ತಾನೆ, ಇನ್ನಷ್ಟು ವರುಷಗಳು ಕಳೆದಂತೆ ಹೆತ್ತವರಿಗೆ ಗೊತ್ತಿದ್ದಷ್ಟೆ ನನಗೂ ಗೊತ್ತು ಎಂದು ಯೋಚಿಸಲಾರಂಬಿಸಿದ ಮಗ, ಪ್ರಾಯ ಹೋದಂತೆ ಹೆತ್ತವರು ಹೇಳಿದ್ದರಲ್ಲೂ ಅರ್ಥವಿದೆ, ಸತ್ಯವಿದೆ ಎಂಬ ಸತ್ಯದ ಅರಿವಾಗಿ ಕೊನೆಯ ವರುಷಗಳಲ್ಲಿ ಹೆತ್ತವರು ಹೇಳಿದ್ದೆಲ್ಲಾ ಸತ್ಯ ಎಂಬ ತೀರ್ವನಕ್ಕೆ ಬಂದು, ಹೆತ್ತವರ ಬಗ್ಗೆ ಗೌರವಭಾವನೆಯನ್ನು ಹೊಂದುತ್ತಾನೆ.

ಆದರೆ ಅಷ್ಟರಲ್ಲಿ ಹೆತ್ತವರೇ ಇಲ್ಲವಾಗಿ, ಆತ ಒಳಗೊಳಗೆ ಮರುಗುತ್ತಾನೆ. ಒಟ್ಟಿನಲ್ಲಿ ಬೈಗುಳಗಳಿಗೂ ಬುದ್ಧಿವಾದಗಳಿಗೂ ವ್ಯತ್ಯಾಸವಿದೆ. ಬೈಗುಳದ ಹಿಂದೆ ಕೋಪವಿದೆ, ದ್ವೇಷ ಇದೆ. ಆದರೆ ಬುದ್ಧಿವಾದಗಳ ಹಿಂದೆ ಪ್ರೀತಿ ಇದೆ, ಕಾಳಜಿ ಇದೆ.

(ಪ್ರತಿಕ್ರಿಯಿಸಿ: drputhuraya@yahoo.co.in)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net