

ಬೆಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಪರಶುರಾಮ ಪ್ರತಿಮೆಯನ್ನು ಮರು ಅನಾವರಣಕ್ಕೆ ನಿರ್ದೇಶಿಸುವಂತೆ ಕೋರಿದ್ದ ಅರ್ಜಿದಾರರಿಗೆ ಮುಂದಿನ 2 ವಾರಗಳಲ್ಲಿ 5 ಲಕ್ಷ ರೂ.ಗಳನ್ನು ರಿಜಿಸ್ಟ್ರಾರ್ ಕಚೇರಿಯಲ್ಲಿ ಠೇವಣಿ ಇಡುವಂತೆ ಹೈಕೋರ್ಟ್ ಸೂಚಿಸಿದೆ.
ಈ ಕುರಿತಾಗಿ ಉಡುಪಿ ಜಿಲ್ಲೆಯ ವರಂಗ ನಿವಾಸಿಯಾಗಿರುವ ಕೆಪಿಸಿಸಿ ಸದಸ್ಯರು ಆಗಿರುವ ಉದಯ್ ಶೆಟ್ಟಿ ಮುನಿಯಾಳ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಪ್ರತಿಮೆ ನಿರ್ಮಾಣಕ್ಕೆ ತೀರ್ಮಾನಿಸಲಾಗಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಇದರಿಂದಾಗಿ ಈ ಭಾಗದ ಜನರ ಭಾವನೆಗಳಿಗೆ ಧಕ್ಕೆಯಾಗಲಿದೆ. ಹೀಗಾಗಿ ಮತ್ತೆ ಪ್ರತಿಮೆ ನಿರ್ಮಾಣಕ್ಕೆ ನಿರ್ದೇಶನ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ವಿಚಾರದಲ್ಲಿ ಜನರ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿತ್ತು. ಇದಕ್ಕೆ ವಕೀಲರು ಉತ್ತರಿಸಿದ ವೇಳೆ
ನೀವು 5 ಲಕ್ಷ ರೂ. ಠೇವಣೆ ಇಡುತ್ತೀರಾ? ಎಂದರು ಆ ಕೂಡಲೇ ಅರ್ಜಿದಾರರ ಪರ ವಕೀಲರು ಸಮ್ಮತಿ ಸೂಚಿಸಿದರು.ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆ ಮುಂದೂಡಿತು.
ಪ್ರಕರಣ ಸಂಬಂಧ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಬೇಕು ಅರ್ಜಿದಾರ ವಕೀಲರು ಪೀಠಕ್ಕೆ ಮನವಿ ಮಾಡಿದರು. ಆಗ ಪೀಠ, ಮೊದಲು ನೀವು ಹಣ ಠೇವಣಿ ಇಡಿ. ಬಳಿಕ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಮುಂದೂಡಿತು.