

ನವದೆಹಲಿ: ರಾಷ್ಟ್ರೀಯ ಸೂಪರ್ಕಂಪ್ಯೂಟಿಂಗ್ ಮಿಷನ್ (ಎನ್ಎಸ್ಎಂ) ಅಡಿಯಲ್ಲಿ ಭಾರತದಲ್ಲೇ ಅಭಿವೃದ್ಧಿ ಪಡಿಸಲಾದ ‘ಪರಮ ರುದ್ರ’ ನಾಮಾಂಕಿತ ಮೂರು ಸೂಪರ್ಕಂಪ್ಯೂಟರ್ಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಚಾಲನೆ ನೀಡಿದರು.
130 ಕೋಟಿ ರೂಪಾಯಿ ವೆಚ್ಚದ ಈ ಸೂಪರ್ಕಂಪ್ಯೂಟರ್ಗಳನ್ನು ಪುಣೆ, ದೆಹಲಿ ಮತ್ತು ಕೋಲ್ಕತದಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಮಹತ್ವದ ವೈಜ್ಞಾನಿಕ ಸಂಶೋಧನೆಗೆ ಇವು ನೆರವಾಗಲಿವೆ. ವಿಜ್ಞಾನ, ಆರೋಗ್ಯ, ಬಾಹ್ಯಾಕಾಶ ಸಂಶೋಧನೆಯಂಥ ಅನೇಕ ಕ್ಷೇತ್ರಗಳಲ್ಲಿ
ಇವು ಸಹಕಾರಿ ಆಗಲಿವೆ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು. ರುದ್ರ ಸೂಪರ್ಕಂಪ್ಯೂಟರ್ಸ್ ಮತ್ತು ಎಚ್ಪಿಸಿ ವ್ಯವಸ್ಥೆಯೊಂದಿಗೆ ಕಂಪ್ಯೂಟಿಂಗ್ ವಲಯದಲ್ಲಿ ಸ್ವಾವಲಂಬನೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆವಿಷ್ಕಾರ ನಡೆಸುವಲ್ಲಿ ಭಾರತ ಮಹತ್ವದ ಹೆಜ್ಜೆ ಇಟ್ಟಂತಾಗಿದೆ.
ಸಿ-ಡಾಕ್ ಅಭಿವೃದ್ಧಿ: ಮುಂದುವರಿದ ಕಂಪ್ಯೂಟಿಂಗ್ ಅಭಿವೃದ್ಧಿ ಕೇಂದ್ರ (ಸಿ-ಡಾಕ್) ಈ ಅತ್ಯಾಧುನಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಇದು ದೇಶದ ಉನ್ನತ ಕಂಪ್ಯೂಟಿಂಗ್ ಸಾಮರ್ಥ್ಯಗಳ ಕಾರ್ಯಕ್ಷಮತೆಯಲ್ಲಿ ದೊಡ್ಡ ಮುನ್ನೆಗೆತವನ್ನು ಪ್ರತಿನಿಧಿಸುತ್ತದೆ.
ಗಗನಯಾನ ಯೋಜನೆಗೂ ಸಿದ್ಧತೆ ನಡೆದಿದ್ದು, 2035ರೊಳಗೆ ಭಾರತ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಹೊಂದಲಿದೆ. ಇದಕ್ಕೆ ಪೂರಕವಾಗಿ ಮೊದಲ ಹಂತದ ಯೋಜನೆಗೆ ಈಗಾಗಲೇ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಸ್ವಾವಲಂಬನೆಗಾಗಿ ವಿಜ್ಞಾನ ಎಂಬುದು ನಮ್ಮ ಗುರಿ ಎಂದು ಪ್ರಧಾನಿ ಹೇಳಿದರು. ಇದೇ ವೇಳೆ 850 ಕೋಟಿ ರೂ. ವೆಚ್ಚದ ಅತ್ಯಾಧುನಿಕ ಕಂಪ್ಯೂಟಿಂಗ್ ವ್ಯವಸ್ಥೆಯನ್ನೂ ಮೋದಿ ಉದ್ಘಾಟಿಸಿದರು. ಇದನ್ನು ಹವಾಮಾನ, ಪರಿಸರ ಸಂಶೋಧನೆಗಾಗಿ ಬಳಸಲಾಗುತ್ತದೆ. ಇದೂ ವಿಜ್ಞಾನ - ತಂತ್ರಜ್ಞಾನ ರಂಗದಲ್ಲಿ ಒಂದು ಮೈಲುಗಲ್ಲು ಎಂದು ಬಣ್ಣಿಸಿದರು.
ಶಿವನ ರುದ್ರ ರೂಪ ಭಗವಾನ್ ಶಿವನ ರುದ್ರ ರೂಪದ ಹೆಸರನ್ನು ಹೊಂದಿರುವ ಪರಮ ರುದ್ರ, ವಿವಿಧ ವೈಜ್ಞಾನಿಕ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳ ಸಂಕೀರ್ಣ ಕಂಪ್ಯೂಟೇಷನಲ್ ಸವಾಲುಗಳನ್ನು ಎದುರಿಸಲು ಸಾಧ್ಯವಾಗುವಂತೆ ವಿನ್ಯಾಸಗೊಂಡಿದೆ.
ಆರ್ಥಿಕತೆಯಿಂದ ಹಿಡಿದು ಸುಗಮ ವ್ಯವಹಾರದವರೆಗೆ ಅಥವಾ ಪ್ರಕೃತಿ ವಿಕೋಪಗಳನ್ನು ನಿರ್ವಹಿಸುವುದರಿಂದ ಹಿಡಿದು ಜೀವನ ಸುಗಮಗೊಳಿಸುವವರೆಗೆ.. ಹೀಗೆ ತಂತ್ರಜ್ಞಾನವನ್ನು ನೇರವಾಗಿ ಅವಲಂಬಿಸದ ಕ್ಷೇತ್ರವೇ ಇಲ್ಲ. | ಪ್ರಧಾನಿ ನರೇಂದ್ರ ಮೋದಿ