

‘ಯುಧಿಷ್ಠಿರ! ಈ ಪ್ರಶ್ನೆಗೆ ಪ್ರಾಚೀನ ಚರಿತ್ರೆಯನ್ನೇ ಉಲ್ಲೇಖಿಸುವೆ. ಹಿಂದೊಮ್ಮೆ ಕೋಸಲದೇಶದ ಮಹಾರಾಜ ವಸುಮನ ಎನ್ನುವವನು ಮಹರ್ಷಿ ಶ್ರೇಷ್ಠ ಬೃಹಸ್ಪತಿಗಳಿಗೆ ಇದೇ ಪ್ರಶ್ನೆಯನ್ನು ಮುಂದಿರಿಸಿದನು. ಕೋಸಲದೇಶದ ವಸುಮನನು ಸಂಪೂರ್ಣ ಲೋಕದ ಹಿತವನ್ನು ಕಾಪಾಡಬೇಕು ಎಂಬುದರಲ್ಲಿ ತತ್ಪರನಾಗಿದ್ದ ಆದರಣೀಯ ರಾಜನಾಗಿದ್ದನು.
ಒಂದು ದಿನ ಬೃಹಸ್ಪತಿಗಳ ಆಗಮನವಾದಾಗ ಆತನು ಸಿಂಹಾಸನದಿಂದ ಇಳಿದು ಋಷಿವರ್ಯರಿಗೆ ಪ್ರದಕ್ಷಿಣೆ ಮಾಡಿ ಕಾಲು ತೊಳೆದು ನಮಸ್ಕರಿಸಿ ಆತಿಥ್ಯಗೈದನು. ನಂತರ ಅವರ ಬಳಿ ಹೀಗೆ ತನ್ನ ಪ್ರಶ್ನೆಯನ್ನು ಇರಿಸಿದನು: ‘‘ಬ್ರರ್ಹಗಳೇ! ಈ ಲೋಕದಲ್ಲಿ ಎಲ್ಲ ಪ್ರಜೆಗಳ ಉನ್ನತಿ ಹೇಗಾಗುತ್ತದೆ ಹಾಗೂ ಅವನತಿ ಹೇಗೆ ಉಂಟಾಗುತ್ತದೆ? ಯಾವ ದೈವಗಳ ಆರಾಧನೆ ಮಾಡುವುದರಿಂದ ಅಕ್ಷಯವಾದ ಸುಖವು ಪ್ರಾಪ್ತಿಯಾಗುತ್ತದೆಂದು ಹೇಳಿ’’ ಎಂದು ಕೇಳಿಕೊಂಡನು. ಈ ಪ್ರಶ್ನೆಗೆ ಬೃಹಸ್ಪತಿಗಳ ಉತ್ತರವನ್ನು ಹೇಳುತ್ತೇನೆ:
‘‘ಈ ಮಾನವಲೋಕದಲ್ಲಿ ಜೀವನಧರ್ಮ ಎಂದು ಯಾವುದನ್ನೆಲ್ಲ ಪರಿಭಾವಿಸಲಾಗುತ್ತಿದೆಯೋ ಆ ಎಲ್ಲದಕ್ಕೂ ರಾಜನೇ ಮೂಲವಾಗಿದ್ದಾನೆ. ರಾಜನು ಅನುಸರಿಸುವ-ಆಚರಿಸುವ ಧರ್ಮಶೀಲ ಶಾಸನಗಳ ಆಧಾರದ ಮೇಲೆಯೇ ಪ್ರಜೆಗಳೆಲ್ಲರೂ ವರ್ತಿಸುವರು. ರಾಜನನ್ನು ಪಟ್ಟಾಭಿಷಿಕ್ತಗೊಳಿಸುವವರು ಪ್ರಜೆಗಳು.
ಆದರೆ ಆ ರಾಜನು ಧರ್ಮಶೀಲತೆಯಿಂದ ರಾಜಕಾರ್ಯವನ್ನು ಕೈಗೊಳ್ಳದಿದ್ದರೆ ಅವನ ಪ್ರಜೆಗಳೂ ಭೋಗಾಪೇಕ್ಷೆಗಳಾಗಿ, ಧರ್ಮಚ್ಯುತರಾಗಿ ವರ್ತಿಸತೊಡಗುವರು. ಅವರು ತಮ್ಮತಮ್ಮಲ್ಲೇ ಬಡಿದಾಡಿ ನಷ್ಟಕ್ಕೀಡಾಗುವರು. ರಾಜನ ಶಾಸನರೀತಿ ಬಲಿಷ್ಠವಾಗಿರದಿದ್ದಲ್ಲಿ ಅವನ ಪ್ರಜೆಗಳು ಸ್ವೇಚ್ಛಾಚಾರಿಗಳಾಗುವರು. ಪರಸ್ಪರ ಬಡಿದಾಡಿಕೊಳ್ಳುತ್ತ ನಷ್ಟವನ್ನು ಅನುಭವಿಸುತ್ತ ಅಂಧಕಾರದಲ್ಲಿ ಮುಳುಗುವರು.
ರಾಜನು ಪ್ರಜೆಗಳನ್ನು ಧರ್ಮ-ನ್ಯಾಯಬದ್ಧತೆಗೆ ಒಳಪಡಿಸಿ ಅದರಂತೆ ವರ್ತಿಸಲು ರಕ್ಷಣೆ ನೀಡದಿದ್ದಲ್ಲಿ ಅಲ್ಲಿಯ ಯಾರೂ ಕೂಡ ತನ್ನ ಪತ್ನಿ-ಮಕ್ಕಳು, ಕುಟುಂಬ ಎಂಬುದನ್ನು ನಿರಾತಂಕವಾಗಿ ಅನುಭವಿಸುವುದು ಅಸಂಭವನೀಯವಾಗುವುದು. ಎಲ್ಲೆಡೆ ದುರಾಚಾರಿಗಳೇ ಅಟ್ಟಹಾಸದಿಂದ ಮರೆಯುವಂತಾಗುತ್ತದೆ. ಸುಲಿಗೆ, ಅಪಹರಣಗಳು ಸುಲಭವಾಗಿ ಜರುಗತೊಡಗುವುವು. ಎಲ್ಲ ಬಗೆಯ ದುರಾಚಾರಗಳಿಗೂ ಯಾವುದೇ ಅಡೆತಡೆಗಳೂ ಇರಲಾರವು. ತಾಯಿ-ತಂದೆ, ಆಚಾರ್ಯರು, ಗುರುಜನರು, ಹಿರಿಯರು ಎಂಬ ಗೌರವ-ಆದರಗಳನ್ನು ಮರೆತು ಹಿಂಸಾತ್ಮಕವಾಗಿ ವರ್ತಿಸುವುದು ನಿರಾತಂಕವಾಗಿ ವೃದ್ಧಿಸುತ್ತದೆ.
ರಾಜನ ಆಡಳಿತವು ಧರ್ಮಬದ್ಧವಾದ ಕಠೋರತೆಯಿಂದ ಕೂಡಿಲ್ಲವಾದರೆ ಜನರು ವ್ಯಭಿಚಾರ, ಅನೀತಿಯುತವಾದ ವರ್ತನೆಗಳಿಗೆ ನಾಚಿಕೊಳ್ಳುವುದಿಲ್ಲ. ಯಾವುದೇ ಲಜ್ಜೆಯಿಲ್ಲದೆ ದುರ್ವರ್ತನೆಗೆ ಅಂಟಿಕೊಳ್ಳುವರು. ಆ ರಾಜ್ಯದಲ್ಲಿ ಕೃಷಿಕಾಯಕದಲ್ಲಿ ನಷ್ಟವುಂಟಾದರೂ, ವ್ಯಾಪಾರ ವ್ಯವಹಾರಗಳಲ್ಲಿ ಧರ್ಮಶೀಲತೆಯಿರದೆ ಅಸ್ತವ್ಯಸ್ತತೆಯುಂಟಾದರೂ ಯಾರೂ ಕೇಳುವವರೇ ದಿಕ್ಕಿಲ್ಲ ಎನ್ನುವಂತಾಗುವುದು. ಎಲ್ಲೆಲ್ಲೂ ಪಾಪಕರ್ಮಗಳೇ ವೃದ್ಧಿಸಿ ಅಕಾಲಮೃತ್ಯು, ಅಕಾಲವೃಷ್ಟಿಗಳುಂಟಾಗಿ ಜನ ದುಃಖಕ್ಕೆ ಗುರಿಯಾಗುವರು. ಕ್ಷೀರಸಮೃದ್ಧಿಯೂ ಕುಸಿಯುವುದು.
ಇಷ್ಟು ಮಾತ್ರವೇ ಅಲ್ಲ. ಪ್ರಜಾರಕ್ಷಕನಾದ ಸಮರ್ಥ ರಾಜನು ಇರದಿದ್ದಲ್ಲಿ ಪ್ರಜೆಗಳೆಲ್ಲ ಭಯಭೀತರಾಗುವರು. ಉದ್ವಿಗ್ನತೆ ವ್ಯಾಪಿಸಿ ಹಾಹಾಕಾರ ಉಂಟಾಗಿ ಚೈತನ್ಯವೇ ನಷ್ಟವಾಗುತ್ತದೆ. ವಿಧಿಪೂರ್ವಕವಾಗಿ ಜರುಗುವ ನೈಮಿತ್ತಿಕ ಧರ್ವಚರಣೆಗಳು, ಹೋಮ, ಹವನ, ಯಜ್ಞಯಾಗಾದಿಗಳನ್ನು ನಿರಾತಂಕವಾಗಿ ನಡೆಸಲು ಸಾಧ್ಯವಾಗದು. ಯಾರಾದರೂ ತನ್ನ ವಸ್ತುವನ್ನು ಹಿಡಿದುಕೊಂಡು ಹೋಗುತ್ತಿರುವಾಗ ಮುಚ್ಚುಮರೆಯಿಲ್ಲದೆ ಎದುರೆದುರೇ ಕಸಿದೊಯ್ಯುವರು. ಎಲ್ಲರೂ ಅಸಹಾಯಕರಾಗಿಬಿಡುವರು.’’