

ಆಗ ಪ್ರಜೆಗಳೇ ಜಾಗೃತರಾಗಿ ನಿಂತರು. ಪ್ರಜೆಗಳೇ ಸಮಾವೇಶಗೊಂಡು ಸಭೆ ನಡೆಸಿ, ‘ನಮ್ಮ ನಮ್ಮಲ್ಲಿಯ ಯಾರೇ ಆಗಿರಲಿ; ನಿಷ್ಠುರ ನುಡಿದು ಕಲಹವನ್ನು ಎಬ್ಬಿಸಿದವನು, ಭಯಾನಕ ವರ್ತನೆಗೈಯುವವನು, ದುಷ್ಟತನವನ್ನು ತೋರುವವನು, ಪರಸ್ತ್ರೀಗಾಮಿಯಾದವನು, ಪರಧನ ಚೋರನು - ಹೀಗೆ ಯಾರೇ ಕಂಡುಬಂದರೂ ಅಂಥವರನ್ನು ಥಳಿಸಿ ಸಮಾಜದಿಂದ ಬಹಿಷ್ಕರಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು’ ಎಂಬ ಒಕ್ಕೊರಲ ನಿರ್ಣಯವನ್ನು ಕೈಗೊಂಡರು. ಕೆಲವು ಕಾಲ ಎಲ್ಲರೂ ಆ ನಿರ್ಣಯದಂತೆಯೇ ವರ್ತಿಸಿದ್ದರಿಂದ ಸುಖ ಶಾಂತಿ ನೆಲೆಸಿತ್ತು.
ಆದರೆ ಕ್ರಮೇಣ ಆ ನಿರ್ಣಯದ ಪ್ರಭಾವವು ಕುಸಿಯತೊಡಗಿತು. ನೀತಿಯು ಕುಂಠಿತವಾಗತೊಡಗಿತು. ಪುನಃ ದುರ್ವ್ಯವಸ್ಥೆ ಎಲ್ಲೆಡೆ ಪಸರಿಸಿತು. ದುಃಖ, ಸಂಕಷ್ಟಕ್ಕೆ ಗುರಿಯಾದ ಪ್ರಜೆಗಳು ದಿಕ್ಕು ತೋರದೆ ಪರಿಹಾರವನ್ನು ಬಯಸಿ ಬ್ರಹ್ಮದೇವರ ಬಳಿ ಮೊರೆಯಿಟ್ಟರು. ‘ಹೇ ಸೃಷ್ಟಿಕರ್ತ ದೇವನೆ! ನಮ್ಮನ್ನು ಆಳುವ ‘ರಾಜ’ನೆಂಬ ಸಮರ್ಥ ಸತ್ವಶಾಲಿ ಶಕ್ತಿಯೊಂದು ಇಲ್ಲದೆ ನಾವು ಕಂಗೆಟ್ಟಿದ್ದೇವೆ. ಪರಸ್ಪರ ಘರ್ಷಣೆಗೊಳಗಾಗಿ ರಕ್ಷಣಾರಹಿತರಾಗಿ ನಾಶವಾಗುತ್ತಿದ್ದೇವೆ. ಹಾಗಾಗಿ ನಮ್ಮನ್ನು ರಕ್ಷಿಸುವಂತಹ ನ್ಯಾಯನಿಷ್ಠುರತೆಯುಳ್ಳ ಸಮರ್ಥ ರಾಜನನ್ನು ದಯಪಾಲಿಸು. ಅವನೇ ದಂಡನೀತಿಯ ಪ್ರಬಲತೆಯಿಂದ ಸಾತ್ವಿಕರ ರಕ್ಷಣೆ ಮಾಡುತ್ತಿರಲಿ’ ಎಂದು ಪ್ರಾರ್ಥಿಸಿದರು. ಹಾಗೆಯೇ ಆಗಲಿ ಎಂದು ಅಭಯವಿತ್ತ ಬ್ರಹ್ಮದೇವನು, ‘ಭೂಲೋಕದ ಮಾನವರಿಗೆ ನೀನು ರಾಜನಾಗಿರು’ ಎಂದು ಮನುವಿಗೆ ಆದೇಶವನ್ನಿತ್ತನು.
ಮನುವು ಬ್ರಹ್ಮದೇವನ ಆ ಆದೇಶವನ್ನು ತಕ್ಷಣಕ್ಕೆ ಸಮ್ಮತಿಸದೆ - ‘ಪಾಪಕರ್ಮಕ್ಕೆ ಹಿಂಜರಿಯದೆ ಅದರಲ್ಲಿಯೇ ಸದಾ ತೊಡಗುವ ಮಾನವರಿಗೆ ರಾಜನಾಗಿ ದಂಡವನ್ನು ಹಿಡಿಯಲು ಅಳುಕು ಉಂಟಾಗುತ್ತಿದೆ. ಅಂತಹ ಪ್ರಜೆಗಳನ್ನು ನಿಯಂತ್ರಿಸುವುದು ಬಹಳ ದುಷ್ಕರವಾದುದು’ ಎಂದು ತನ್ನ ಪ್ರತಿಕ್ರಿಯೆಯನ್ನು ಮುಂದಿರಿಸಿದನು.
ಮನು ಮಹಾತ್ಮನ ಅಭಿಪ್ರಾಯವನ್ನು ಕೇಳಿಸಿಕೊಂಡ ಅಲ್ಲಿದ್ದ ಪ್ರಜಾಪ್ರತಿನಿಧಿಗಳು ತುಂಬ ವಿಷಣ್ಣರಾಗಿ ಧ್ವನಿಯೆತ್ತಿ ಹೀಗೆ ಪ್ರಾರ್ಥಿಸಿಕೊಂಡರು, ‘ಹೇ ಮಹಾತ್ಮ! ನಮ್ಮ ಪ್ರಾರ್ಥನೆಯನ್ನು ಗ್ರಹಿಸಿ. ನಾವು ಭರವಸೆಯನ್ನು ನೀಡುತ್ತೇವೆ. ನಾವೆಲ್ಲರೂ ನಮ್ಮ ನಮ್ಮ ದುಡಿಮೆಯ ಗಳಿಕೆಯ ಧನ-ದ್ರವ್ಯ-ದವಸಧಾನ್ಯ-ಗೋಸಂಕುಲ - ಈ ಎಲ್ಲವುಗಳಲ್ಲಿಯೂ ನಿರ್ದಿಷ್ಟ ಭಾಗವನ್ನು ರಾಜನಿಗಾಗಿ ನೀಡಿ ಪುಷ್ಟಿಯನ್ನು ಒದಗಿಸುತ್ತೇವೆ.
ಅಷ್ಟೇ ಅಲ್ಲ, ಪಶುಗಳಲ್ಲಿ ಐವತ್ತಕ್ಕೆ ಒಂದನ್ನು, ಸುವರ್ಣಸಂಪತ್ತಿನಲ್ಲಿ ಐವತ್ತು ಭಾಗವನ್ನು, ಧಾನ್ಯದ ಉತ್ಪನ್ನದಲ್ಲಿ ಹತ್ತರಲ್ಲಿ ಒಂದು ಪಾಲನ್ನು, ವಿವಾಹಯೋಗ್ಯ ಸುಂದರ ಕನ್ಯೆಯರಲ್ಲಿ ಒಬ್ಬಳನ್ನು - ಹೀಗೆ ರಾಜಶುಲ್ಕವೆಂದು ಅರ್ಪಿಸುತ್ತಿರುವೆವು. ದೇವತೆಗಳು ದೇವೇಂದ್ರನನ್ನು ಅನುಸರಿಸಿ ಇರುವಂತೆಯೇ ನಮ್ಮೊಳಗಿನ ಬಹು ಮುಖ್ಯ ವ್ಯಕ್ತಿಗಳು ಅವರವರ ಶಸ್ತ್ರಾಸ್ತ್ರ ಹಾಗೂ ವಾಹನಸಹಿತರಾಗಿ ನಿಮಗೆ ಬೆಂಗಾವಲಾಗಿ ಬರುವೆವು.’ - ಹೀಗೆಲ್ಲ ವಚನವನ್ನು ನೀಡಿದ ಆ ಪ್ರಜೆಗಳು ಬೆಂಬಲವನ್ನು ಸೂಚಿಸಿ, ‘ಪ್ರಬಲ, ದುರ್ಜಯ, ಬಲಿಷ್ಠ ರಾಜರಾಗಿ ಪಟ್ಟದಲ್ಲುಳಿದು ನಮ್ಮನ್ನೆಲ್ಲ ಸುರಕ್ಷಿತವಾಗಿ ನಡೆಸಿರಿ’ ಎಂದು ಆಗ್ರಹಿಸಿದರು.
ಪ್ರಜೆಗಳ ಒತ್ತಾಸೆಯನ್ನು ಗೌರವಿಸಿ ಮನು ಮಹಾರಾಜನು ಭೂಮಂಡಲದ ಮನುಷ್ಯಕುಲಕ್ಕೆ ಓರ್ವ ‘ರಾಜ’ನಾಗಿ ಪದವಿಯನ್ನು ಸ್ವೀಕರಿಸಿದರು. ನಂತರ ಪ್ರಜ್ವಲಿಸುವ ಸೂರ್ಯನೋಪಾದಿಯಲ್ಲಿ ಪ್ರಕಾಶಿಸುತ್ತ ಭೂಮಂಡಲದ ನಾಲ್ದೆಸೆಯಲ್ಲಿಯೂ ಸಂಚರಿಸತೊಡಗಿದನು. ರಾಜಾ ಮನುವಿನ ಪ್ರತಾಪವನ್ನು ಕಂಡು ಭಯಗ್ರಸ್ತರಾದ ಅನೇಕ ಆತಂಕಕಾರಿ ಜನರು ಮಳೆ ಸುರಿದಾಗ ಅಗ್ನಿಯು ಹಾರಿಹೋಗುವಂತೆ ದುರಾಚಾರವನ್ನು ತೊರೆದು ಶಾಂತರಾಗಿ ನಿಂತರು ಹಾಗೂ ತಮ್ಮ ವರ್ಣಾಶ್ರಮಕ್ಕೆ ಯೋಗ್ಯವಾದ ಕರ್ಮಗಳಲ್ಲಿ ನಿರತರಾದರು. ಮನು ಮಹಾರಾಜನು ಪ್ರಜೆಗಳಿಗಾಗಿ ನೀತಿಸಂಹಿತೆಯನ್ನು ನೀಡೀ ಶಾಸನಗೈದಿದ್ದನು. ಧರ್ಮಜ! ಈ ಲೋಕದಲ್ಲಿ ಯಾರು ಆತ್ಮೀಯರಿಂದ, ಸ್ವಜನರಿಂದ ಆದರಿಸಲ್ಪಡುವರೋ ಅವರು ಅನ್ಯ ಜನರಿಂದಲೂ ಆದರಿಸಲ್ಪಡುತ್ತಾರೆ. ಆದರೆ ಸ್ವಜನರಿಂದಲೇ ತಿರಸ್ಕೃತರಾಗಿ ಬಿಂಬಿತರಾಗಿದ್ದವರು ಅನ್ಯರಿಂದಲೂ ಅನಾದರಕ್ಕೆ ಗುರಿಯಾಗುತ್ತಾರೆ. ರಾಜನಾದವನಿಗೆ ಪ್ರಜೆಗಳೇ ಸ್ವಜನರು. ಪ್ರಜೆಗಳ ಮೇಲೆ ಸದಾ ಅನುಗ್ರಹಿಸುತ್ತಿರುವ ರಾಜನು ಪ್ರಜೆಗಳಿಂದ ಅಭಿಮಾನಪೂರ್ವಕ ಬೆಂಬಲವನ್ನು ಪಡೆಯುತ್ತಿರುತ್ತಾನೆ.
ತಮ್ಮ ರಾಜನು ಕುಗ್ಗದಂತೆ, ಸೋಲನ್ನು ಕಾಣದಂತೆ ನೋಡಿಕೊಳ್ಳುತ್ತ - ಅಭಿಮಾನದಿಂದ ಛತ್ರ, ಚಾಮರ, ನೆರಳು, ಗಾಳಿಯನ್ನಿತ್ತು ಗೌರವಿಸುತ್ತ, ವಾಹನ, ವಸ್ತ್ರ, ಆಭೂಷಣ ಇತ್ಯಾದಿ ಕಾಣಿಕೆಗಳನ್ನು ಅರ್ಪಿಸುತ್ತಾರೆ. ಹಾಗೆ ರಾಜನು ಸದಾ ಪ್ರಜೆಗಳಿಗೆ ಪ್ರಿಯನಾಗಿ ಕಾಣಿಸಿಕೊಳ್ಳಬೇಕು. ರಾಜನು ಪ್ರಜೆಗಳೊಂದಿಗೆ ಪ್ರಿಯ-ಮೃದುಭಾಷಿಯಾಗಿ ಸಂಭಾಷಿಸಬೇಕು. ತನ್ನ ಬಳಿಯಲ್ಲಿ ಸಂಗ್ರಹವಾಗಿರುವ ವಿವಿಧ ವಸ್ತುಗಳನ್ನು ತನ್ನ ಬಳಿಯೇ ಇರಿಸಿಕೊಳ್ಳದೆ ವಿವಿಧ ಸಂದರ್ಭಗಳಿಗೆ ಅನುಗುಣವಾಗಿ ಪಾರಿತೋಷಕದ ರೂಪದಲ್ಲಿ ಪ್ರಜಾಜನರೆಡೆಗೆ ಹಂಚಿಕೊಡುತ್ತ ಅವರ ಅಭಿಮಾನ, ಸಂತೋಷವನ್ನು ವೃದ್ಧಿಸುತ್ತಿರಬೇಕು.’