

‘ರಾಜಧರ್ಮ’ ಎಂಬುದು ಧರ್ಮರೂಪಿಯಾದ ಸಮುದ್ರದಲ್ಲಿ ನೆಲೆಸಿರುವ ಒಂದು ನೌಕೆಯಾಗಿದೆ. ಅದನ್ನು ತೇಲಿಸಿ ಸಾಗಿಸಲು ಬಲ್ಲವನೇ ನಾವಿಕ. ಧರ್ಮಶಾಸ್ತ್ರವೇ ಆ ನೌಕೆಗೆ ಕಟ್ಟಿದ ಬಲವಾದ ಹಗ್ಗವಾಗಿದೆ. ತ್ಯಾಗರೂಪಿಯಾದ ವಾಯುವಿನಿಂದಲೇ ಅದು ಶೀಘ್ರವಾಗಿ ಮುಂದೆ ಸಾಗುತ್ತಿರುತ್ತದೆ. ಅಂತಹ ನಾವೆಯ ಮೂಲಕವೇ ಸಂಸಾರರೂಪಿ ಸಾಗರವನ್ನು ದಾಟಬೇಕು.
ಮನುಷ್ಯನ ವಿಶಿಷ್ಟವಾದ ಬುದ್ಧಿಶಕ್ತಿ ಮತ್ತು ಚಿತ್ತಸ್ಥಿತವಾಗಿರುವ ಏನೇನೆಲ್ಲ ಕಾಮನೆಗಳಿವೆಯೋ ಅವುಗಳಿಂದ ಪ್ರಯತ್ನಪೂರ್ವಕವಾಗಿ ನಿವೃತ್ತನಾಗುವ ರಾಜನಲ್ಲಿ ಶುದ್ಧ ಸತ್ವಗುಣವು ಸ್ಥಾಪಿತವಾಗುತ್ತದೆ. ಆ ಮೂಲಕ ಪರಬ್ರಹ್ಮಸ್ವರೂಪದ ಸಾಕ್ಷಾತ್ಕಾರವೂ ಉಂಟಾಗುತ್ತದೆ. ಚಿತ್ತವೃತ್ತಿಗಳನ್ನು ನಿರೋಧಿಸುವ ಬಲವಾದ ಸಾಧನೆಯಿಂದ ಅಂತಃಕರಣವನ್ನು ಅತ್ಯಂತ ಪರಿಶುದ್ಧಗೊಳಿಸಿಕೊಂಡು ಸದಾ ಪ್ರಸನ್ನಚಿತ್ತನಾಗಿ ಪ್ರಜಾಪರಿಪಾಲನೆ ಗೈಯ್ಯುವ ರಾಜನು ಸದಾ ಉತ್ತಮ ಫಲಗಳನ್ನು ಪಡೆಯುತ್ತಿರುತ್ತಾನೆ.
ನೀನು ಕೂಡ ರಾಜನಾಗಿದ್ದು, ರಾಜಧರ್ಮದಂತೆಯೇ ಕಾರ್ಯ ನಿರ್ವಹಿಸುತ್ತಲೇ, ಸತ್ಕರ್ಮ ಪರಾಯಣರಾಗಿರುವವರ ಹಾಗೂ ಇನ್ನಿತರ ಸಾಮಾನ್ಯ ಪ್ರಜಾಜನರ ಸಂರಕ್ಷಣೆ-ಪೋಷಣೆಯಲ್ಲಿ ನಿರತನಾಗಿರಬೇಕು. ಅದೆಷ್ಟೋ ಜನ ನಗರದಿಂದ ದೂರವಾಗಿ ಅರಣ್ಯಗಳಲ್ಲಿ ವಾಸವಾಗಿರುತ್ತಾರೆ. ಅವರು ತಮ್ಮದೇ ಆದ ಕರ್ಮಗಳಲ್ಲಿ ನಿರತರಾಗಿರುತ್ತಾರೆ. ಆ ಎಲ್ಲರನ್ನೂ ರಕ್ಷಣೆಗೈಯುತ್ತಿರಬೇಕು. ಅದರಿಂದಲೇ ರಾಜನು ನೂರು ಪಟ್ಟು ಧರ್ಮ-ಕರ್ಮಗಳ ಫಲಗಳಿಗೆ ಭಾಜನನಾಗುತ್ತಾನೆ.’
ರಾಜನಾದವನು ಅನುಸರಿಸಬೇಕಾದ ರಾಜನೀತಿ ಮತ್ತು ಧರ್ಮ-ಅಧರ್ಮಗಳು ಏನೇನು ಎನ್ನುವುದರ ಕುರಿತು ಮಹಾಜ್ಞಾನಿ, ರಾಜನೀತಿಜ್ಞ ಭೀಷ್ಮನು ಹಲವು ತತ್ತ ್ವಳನ್ನು ತಿಳಿಯಪಡಿಸಿದನು. ಅಂತೆಯೇ ಓರ್ವ ಧರ್ವಿುಷ್ಠ, ಪ್ರಜಾಪ್ರಿಯ, ಸಮರ್ಥ ರಾಜನನ್ನು ಪಡೆದುಕೊಳ್ಳಲು ಆ ರಾಷ್ಟ್ರದ ಪ್ರಜೆಗಳಲ್ಲಿರಬೇಕಾದ ಹೊಣೆಗಾರಿಕೆಯ ಕಡೆಗೂ ಗಮನ ಸೆಳೆದನು.
‘ಯುಧಿಷ್ಠಿರ! ಒಂದು ರಾಷ್ಟ್ರದಲ್ಲಿ ಜೀವಿಸುವ ಪ್ರಜೆಗಳು ರಾಷ್ಟ್ರವಾದಿಗಳಾಗಿರಬೇಕು. ತಮ್ಮ ರಾಷ್ಟ್ರಕ್ಕೆ ಸಮರ್ಥನೂ ಸದ್ಗುಣಿಯೂ ವೀರನೂ ಆದ ರಾಜನನ್ನೇ ಪಟ್ಟಾಭಿಷಿಕ್ತಗೊಳಿಸುವುದು ಪ್ರಜೆಗಳಿಗೆ ಉಳಿದ ಎಲ್ಲಕ್ಕಿಂತಲೂ ಪ್ರಧಾನ ಕಾರ್ಯವಾಗಿರುತ್ತದೆ. ಒಂದುವೇಳೆ ಸೂಕ್ತವಾದ ಸಮಯಕ್ಕೆ ಯುಕ್ತವಾದ ರೀತಿಯಲ್ಲಿ ಆ ಕಾರ್ಯವು ಪ್ರಜೆಗಳಿಂದ ಜರುಗದೆ ಇದ್ದರೆ ಇಡೀ ರಾಷ್ಟ್ರವು ಸಂಕಟಕ್ಕೀಡಾಗುತ್ತದೆ. ಅಲ್ಲಿ ಅರಾಜಕತೆ ವಿರಾಜಿಸುತ್ತದೆ. ಹಾಗೇನಾದರೂ ಘಟಿಸಿದರೆ ರಾಷ್ಟ್ರದ ಧರ್ಮ-ನೀತಿಗಳು ಕುಸಿದುಹೋಗುತ್ತವೆ.
ಧರ್ಮಹೀನರಾದ ಜನರು ಈ ರೀತಿಯ ಕಟ್ಟಳೆಯನ್ನು ಕಳಚಿಕೊಂಡು ಒಬ್ಬರನ್ನೊಬ್ಬರು ದೋಚತೊಡಗುತ್ತಾರೆ. ಹಾಗಾಗದಂತೆ ನೋಡಿಕೊಳ್ಳಲು ಪ್ರಜೆಗಳು ರಾಜನ ಸ್ಥಾನವನ್ನು ರಿಕ್ತವಾಗಿರಲು ಬಿಡಬಾರದು. ಜಾಗ್ರತೆಯಿಂದ ಸಮರ್ಥನಿಗೆ ಪಟ್ಟಾಭಿಷೇಕ ಮಾಡಬೇಕು. ಹಾಗೆಯೇ ಆ ರಾಜನನ್ನು ಎಲ್ಲ ಪ್ರಜೆಗಳೂ ಭಕ್ತಿಪುರಸ್ಸರವಾಗಿ ದೇವೇಂದ್ರನ ಸಮಾನನಾಗಿ ಭಾವಿಸಿ ಗೌರವವನ್ನು, ಬೆಂಬಲವನ್ನು ನೀಡುತ್ತಿರಬೇಕು.
ಯಾವುದೇ ರಾಜ್ಯದಲ್ಲಿ ರಾಜನು ಇಲ್ಲವೆಂದಾದರೆ ಅಲ್ಲಿ ಸಾಧುಸಂತರು ವಾಸ ಮಾಡಬಾರದು ಎಂದು ಧರ್ಮಶಾಸ್ತ್ರವು ಹೇಳಿದೆ. ರಾಜನಿರದೆ ಗೈದ ಯಜ್ಞದ ಹವಿಸ್ಸನ್ನು ಅಗ್ನಿದೇವನು ಕೂಡ ಸ್ವೀಕರಿಸುವುದಿಲ್ಲ. ದೇವತೆಗಳೂ ಮುನಿಸಿಕೊಂಡು ಕರ್ತವ್ಯಗಳನ್ನು ತೊರೆದುಬಿಡುತ್ತಾರೆ. ಅದರಿಂದಾಗಿ ಮಾನವರ ಜೀವನಕ್ರಮವು ದುಸ್ತರವಾಗಿಬಿಡುತ್ತದೆ. ಅಪರಾಧ ಎಸಗುವ ಅನೀತಿವಂತರನ್ನು ಶಿಕ್ಷಿಸಿ ನಿಯಂತ್ರಿಸುವ ದಂಡವನ್ನು ಹಿಡಿದ ರಾಜನು ಭೂತಲದಲ್ಲಿರದಿದ್ದರೆ, ಸಮುದ್ರದಲ್ಲಿ ದೊಡ್ಡ ಮೀನು ಸಣ್ಣ ಜಲಚರಗಳನ್ನು ಕಬಳಿಸುವಂತೆ ಆಯಾ ರಾಜ್ಯದಲ್ಲಿ ದುರ್ಬಲ ಸ್ಥಿತಿ ಉಂಟಾಗುತ್ತದೆ. ಪ್ರಾಚೀನ ಕಾಲದಿಂದಲೂ ರಾಜ ಎಂಬ ಸ್ಥಾನ ಬೆಳೆದುಬಂದಿದೆ. ಆ ಸ್ಥಾನದಲ್ಲಿರುವವನು ಪ್ರಜಾಪಾಲಕ ಎನ್ನುವ ಪರಿಕಲ್ಪನೆಯಿದೆ. ಅದು ದಂಡನೀತಿಯನ್ನು ಪಾಲಿಸಿ ಪ್ರಜೆಗಳನ್ನು ರಕ್ಷಿಸುವ ನಾಯಕತ್ವದ ಸ್ಥಾನವಾಗಿದೆ ಎಂದು ತಿಳಿಯುವವನಾಗು.’