

‘ನಾಲ್ಕು ವರ್ಣಗಳ ವ್ಯಕ್ತಿಗಳಲ್ಲಿಯೂ ಯಾರೇ ಯಜ್ಞವನ್ನು ಮಾಡಿಸಲು ಅಪೇಕ್ಷಿಸಿದರೂ ಅದು ಗ್ರಾಹ್ಯವೆಂದು ಋಷಿಗಳು ಸಮ್ಮತಿಸಿದರು. ಆದರೆ ಆ ವಿಚಾರದಲ್ಲಿ ಭಿನ್ನ ಭಿನ್ನ ಕ್ರಮಗಳು ಪ್ರಚಲಿತದಲ್ಲಿವೆ. ಮೂರು ಲೋಕಗಳಲ್ಲಿಯೂ ಯಜ್ಞಕರ್ಮಕ್ಕೆ ಸಮಾನವಾದಂತಹ ಅನ್ಯ ಕರ್ಮವಿಲ್ಲ ಎಂದು ಶಾಸ್ತ್ರಗಳು ಅಭಿಪ್ರಾಯಪಟ್ಟಿವೆ. ಆದುದರಿಂದ ಆ ಕುರಿತು ದೋಷದೃಷ್ಟಿಯನ್ನು ಇರಿಸಿಕೊಳ್ಳದೆಯೇ ಶಾಸ್ತ್ರೀಯವಿಧಿಯನ್ನು ಅನುಸರಿಸಿ ತಮತಮಗೆ ತಕ್ಕಷ್ಟು ಹಾಗೂ ಶಕ್ತಿಗೆ ತಕ್ಕಂತೆ ಶ್ರದ್ಧಾಪೂರ್ವಕವಾಗಿ, ಪವಿತ್ರತೆಯಿಂದ ಯಜ್ಞದ ಕರ್ಮವನ್ನು ಕೈಗೊಳ್ಳಬೇಕೆಂದು ಮನೀಷಿಗಳಾದ ಮಹರ್ಷಿಗಳು ಅಭಿಪ್ರಾಯಪಟ್ಟಿರುವರು’ ಎಂದ ಭೀಷ್ಮರು ಹೀಗೆಂದರು:
‘ಮಹಾಬಾಹುವಾದ ಯುಧಿಷ್ಠಿರ! ನಾನು ನಿನಗೆ ಈಗಾಗಲೇ ಚತುರ್ವರ್ಣಗಳ ವಿಷಯವನ್ನು ಸಂಕ್ಷೇಪವಾಗಿ ತಿಳಿಸಿರುವೆನಷ್ಟೇ. ಇದೀಗ ಚತುರಾಶ್ರಮಗಳ ವಿಚಾರವಾಗಿ ಶಾಸ್ತ್ರದ ಅಭಿಮತವನ್ನು ಒಂದಷ್ಟು ತಿಳಿಸುವೆನು, ಕೇಳು.
ಬ್ರಹ್ಮಚರ್ಯ ಆಶ್ರಮದಲ್ಲಿ ಚೂಡಾಕರಣ ಸಂಸ್ಕಾರ (ಜಟಾಧಾರಣ ಸಂಸ್ಕಾರ , ದ್ವಿಜ ಸಂಸ್ಕಾರ, ಜ್ಞಾನಾರ್ಜನ ಅಧ್ಯಯನ ಸಮಾವರ್ತನಗಳ ನಂತರದಲ್ಲಿ ವಿವಾಹಿತನಾಗಿ ಗೃಹಸ್ಥಾಶ್ರಮವನ್ನು ಸ್ವೀಕರಿಸಬೇಕೆಂದು ಹೇಳಲಾಗಿದೆ. ಹಾಗಿದ್ದರೂ ಈ ಗೃಹಸ್ಥಾಶ್ರಮವನ್ನು ವಿವಾಹಿತ ಸಪತ್ನೀಕನಾಗಿಯೂ ಅಥವಾ ಅವಿವಾಹಿತನಾಗಿಯೇ ಆಚರಿಸಬಹುದಾಗಿದೆ. ಗೃಹಸ್ಥಾಶ್ರಮಿಯಾಗಿರುವ ಕಾಲದಲ್ಲಿಯೂ ನಿರ್ದೇಶಿತವಾಗಿರುವ ಎಲ್ಲ ವಿಧದ ನೀತಿನಿಯಮಗಳನ್ನು ಪಾಲಿಸಿ ಆಚರಿಸಿ ಕೃತಕೃತ್ಯನಾಗಿ ಆ ನಂತರವೇ ವಾನಪ್ರಸ್ಥ ಎಂಬ ಆಶ್ರಮಧರ್ಮವನ್ನು ಪಾಲಿಸುತ್ತ ಅಖಂಡ ಬ್ರಹ್ಮಚರ್ಯದಿಂದ ವರ್ತಿಸಬೇಕೆಂಬುದು ಆಶ್ರಮಧರ್ಮವಾಗಿದೆ. ಈ ಕಾಲಾವಧಿಯಲ್ಲಿನ ವಾಸಪ್ರಸ್ಥಾಶ್ರಮದಲ್ಲಿ ವೇದದ, ಆರಣ್ಯಕಗಳ ಅಧ್ಯಯನ, ಧ್ಯಾನ ಇತ್ಯಾದಿ ಸಾಧನೆಯಲ್ಲಿ ತೊಡಗಿಕೊಂಡಿರಬೇಕು. ತದನಂತರದಲ್ಲಿ ಬ್ರಹ್ಮಚರ್ಯ ಪಾಲನೆಗೈಯುತ್ತ ಸಂನ್ಯಾಸವನ್ನು ಗ್ರಹಣ ಮಾಡಿ ಅವಿನಾಶಿಯಾದ ಬ್ರಹ್ಮಭಾವವನ್ನು ಪಡೆಯಬೇಕಾಗುತ್ತದೆ.
ಯುಧಿಷ್ಠಿರ! ಈ ಎಲ್ಲ ಆಶ್ರಮಗಳಲ್ಲಿಯೂ ಬಹು ಮುಖ್ಯವಾಗಿ ವಂಶಾಭಿವೃದ್ಧಿಯ ಉದ್ದೇಶವುಳ್ಳ ಗೃಹಸ್ಥಾಶ್ರಮದ ಕುರಿತು ನೀತಿಶಾಸ್ತ್ರಜ್ಞರು ವಿಶೇಷ ನೀತಿಯನ್ನು ನಿರ್ದೇಶಿಸಿರುವರು. ಗೃಹಸ್ಥಾಶ್ರಮಿಯಾಗಿರುವವನು ಎಲ್ಲ ಬಗೆಯ ಇಂದ್ರಿಯಗಳ ನಿಗ್ರಹವನ್ನು ಸಾಧಿಸಿಕೊಂಡು ಗುರುಜನರ ಮತ್ತು ಶಾಸ್ತ್ರವಚನಗಳನ್ನೂ ಮಾನ್ಯ ಮಾಡಿ ದೇವತೆಗಳ, ಪಿತೃಗಳ ತೃಪ್ತಿಗಾಗಿ ಹವ್ಯ-ಕವ್ಯಗಳನ್ನು ಸಮರ್ಪಿಸಲು ಎಂದೂ ಚ್ಯುತಿಗೈಯಕೂಡದು. ನಿರಂತರ ಅತಿಥಿ ಸತ್ಕಾರ, ಅನ್ನದಾನಗಳನ್ನು ಮಾಡುತ್ತಿರಬೇಕು. ಹಾಗೆಯೇ ಇನ್ನುಳಿದ ಆಶ್ರಮಗಳವರಿಗೆ ತಕ್ಕ ಪೋಷಣೆಗಾಗಿ ನೆರವಾಗುವುದು, ಯಜ್ಞಯಾಗಾದಿ ಕರ್ಮಗಳುಳ್ಳ ದೇವಕಾರ್ಯಗಳನ್ನು ಆಚರಣೆ ಮಾಡುತ್ತಿರುವುದು ಈ ಆಶ್ರಮದ ಕರ್ಮವೆಂದು ನಿರ್ದೇಶಿತವಾಗಿದೆ.
ಗೃಹಸ್ಥಾಶ್ರಮಿಯಾದವನು ಈ ಲೋಕದಲ್ಲಿ ಜೀವಿಸಿರುವವರೆಗೂ ಸತ್ಯ, ಸರಳತೆ, ಅತಿಥಿ ಸತ್ಕಾರ, ಧರ್ಮಯುಕ್ತವಾದ ಅರ್ಥ(ಧನ)ಸಂಗ್ರಹ ಮತ್ತು ಬಳಕೆ, ತನ್ನ ಪತ್ನಿಯೊಂದಿಗಷ್ಟೇ ಅನುರಾಗದ ಸಂಬಂಧ ಇತ್ಯಾದಿಯಾಗಿ ಗೃಹಸ್ಥನ ಕರ್ತವ್ಯಧರ್ಮಗಳನ್ನು ಪಾಲಿಸುವುದರಿಂದ ಸ್ವರ್ಗೀಯವಾದ ಫಲಗಳಿಗೆ ಭಾಜನನಾಗುತ್ತಾನೆ.
ಹೇ ಪಾಂಡುನಂದನ! ನೀತಿಶಾಸ್ತ್ರದಲ್ಲಿ ಯಾರು ಯಾರು ಯಾವ ಯಾವ ವರ್ಣಗಳವರು ಏನೇನು ನೀತಿಧರ್ಮಗಳನ್ನು ಪಾಲಿಸಬೇಕೆಂದು ನಿಯತಗೊಳಿಸಿ ನಿರೂಪಿಸಲ್ಪಟ್ಟಿದೆ. ಅದಕ್ಕೆ ವ್ಯತಿರಿಕ್ತವಾಗಿ ಅರ್ಥಾತ್ ತಾನು ಸ್ವೀಕರಿಸಿರುವ ಸ್ವಧರ್ಮನೀತಿಗೆ ವಿರುದ್ಧವಾಗಿ ವರ್ತಿಸುವಂಥವರನ್ನು ದಾಸ, ಶ್ವಾನ ಇತ್ಯಾದಿಯಾಗಿ ನಿಂದಾಸೂಚಕವಾದ ಸಂಜ್ಞೆಗಳನ್ನು ನೀಡಿ ಗುರುತಿಸಿರುತ್ತಾರೆ ಹಾಗೂ ಅಂಥವರ ವಕ್ಷಿರ್ತನೆ, ಗುಣ-ನಡತೆಗಳಿಗೆ ಅನುಸಾರವಾಗಿಯೇ ಫಲಾಫಲಗಳನ್ನು ಕೂಡ ಪಡೆಯುತ್ತಾರೆ.
ಎಲ್ಲ ಮನುಷ್ಯರು ಕೂಡ ಸಮಾನವಾಗಿ ಇರುವುದಿಲ್ಲ. ಏಕೆಂದರೆ ಅವರವರ ಪೂರ್ವಜನ್ಮದ ಕಲ್ಯಾಣಕರ ಅಥವಾ ಅಮಂಗಲಕಾರಿಯಾದ ಕರ್ಮಗಳ ವಾಸನೆಯನ್ನು ಹೊತ್ತು ಶುಭ-ಅಶುಭಕರ ಕರ್ಮಫಲಗಳನ್ನೇ ಪ್ರಧಾನವಾಗಿಸಿಕೊಂಡು ಅದಕ್ಕೆ ತಕ್ಕುದಾದ ಮನುಷ್ಯದೇಹದಲ್ಲಿ ಜನ್ಮವನ್ನು ಪಡೆಯುತ್ತಾರೆ ಹಾಗೂ ಅದೇ ಶರೀರದೊಂದಿಗೆ ಅವನ ಮೃತ್ಯುವು ಕೂಡ ಘಟಿಸುತ್ತದೆ. ಹಾಗಿದ್ದರೂ ಲೋಕವ್ಯವಹಾರದಲ್ಲಿ ಇದ್ದು ಕೂಡ ವರ್ಣಾಶ್ರಮ ಧರ್ಮ-ಕರ್ಮವನ್ನು ಪಾಲಿಸುವುದರಲ್ಲಿ ನಿಷ್ಠನಾಗಿದ್ದವನಿಗೆ ಅವಿನಾಶಿಯಾದ ಫಲವು ಲಭಿಸುತ್ತದೆ.
ಪ್ರಜಾಪತಿಯು ನಿಷ್ಕರ್ಷೆ ಮಾಡಿರುವ ಚಾತುರ್ವರ್ಣ ನೀತಿಯಲ್ಲಿ ಆಯಾ ವರ್ಣದವರು ಅವರವರಿಗೆ ನಿರ್ದೇಶಿತವಾದ ಧರ್ಮ ಕರ್ವಚರಣೆಯಲ್ಲಿ ಚ್ಯುತರಾದರೆ ಅವರು ಶ್ರೇಷ್ಠ ವರ್ಣದವರಾಗಿದ್ದರೂ ಕನಿಷ್ಠ ಮಟ್ಟಕ್ಕೆ ಜಾರುತ್ತಾರೆ. ಕನಿಷ್ಠಮಟ್ಟದವನಾಗಿದ್ದರೂ ಸತ್ಯ ಸನ್ನಡತೆಯಿಂದ ಮೇಲಿನ ವರ್ಣದೊಂದಿಗೆ ಸೇರಲು ಅರ್ಹನಾಗುತ್ತಾನೆ. ರಾಜನಾದವನು ಈ ಎಲ್ಲ ಬಗೆಯ ನೀತಿಯನ್ನು ಅರಿತುಕೊಂಡಿರಬೇಕು ಹಾಗೂ ಅದರಂತೆಯೇ ಎಲ್ಲ ವರ್ಣ-ಧರ್ಮಗಳನ್ನು ಪೋಷಿಸಬೇಕು ಮತ್ತು ಆ ವ್ಯವಸ್ಥೆಯನ್ನು ನಿಯಂತ್ರಣ ಮಾಡುತ್ತಿರಬೇಕು.’