

ತರೀಕೆರೆ: ಪುರಸಭೆ ನೂತನ ಅಧ್ಯಕ್ಷರಾಗಿ 13ನೇ ವಾರ್ಡ್‌ನ ಪರಿಶಿಷ್ಟ ಜಾತಿ ಸದಸ್ಯ ಪರಮೇಶ್ ಅವಿರೋಧ ಆಯ್ಕೆಯಾದರು.
ಅಧಿಕಾರ ಹಂಚಿಕೆ ಒಪ್ಪಂದದಂತೆ ಹಿಂದಿನ ಅಧ್ಯಕ್ಷೆ ಕಮಲಾ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಪರಮೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಸೀಲ್ದಾರ್ ವಿ.ಎಸ್.ರಾಜೀವ್ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷರನ್ನು ಅಭಿನಂದಿಸಿ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಪಟ್ಟಣದ ವಿವಿಧ ಬಡಾವಣೆಗಳಲ್ಲಿ ನೆಲೆಸಿರುವ ವಸತಿ ವಂಚಿತರಿಗೆ ಬಹಳಷ್ಟು ವರ್ಷಗಳಿಂದ ನಿವೇಶನ ನೀಡಿಲ್ಲ. ತಕ್ಷಣ ಒತ್ತುವರಿಯಾಗಿರುವ ಸರ್ಕಾರಿ ಅಥವಾ ಕಂದಾಯ ಇಲಾಖೆ ಜಾಗ ಗುರುತಿಸಿ ಹಂಚಿಕೆ ಮಾಡಲು ತಾಲೂಕು ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.
ಅಜ್ಜಂಪುರಕ್ಕೆ ಈಗಾಗಲೇ ಇಂದಿರಾ ಕ್ಯಾಂಟಿನ್ ಮಂಜೂರಾಗಿದ್ದು. ಪಟ್ಟಣಕ್ಕೆ 24*7 ಮಾದರಿಯಲ್ಲಿ ಕುಡಿಯುವ ನೀರು ಪೂರೈಸುವ ಯೋಜನೆಗೆ ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು. ಶಾಸಕರ ವಿಶೇಷ ಅನುದಾನದಡಿಯಲ್ಲಿ ವಿವಿಧ ವಾರ್ಡ್‌ಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಯು.ಾರೂಕ್ ಮಾತನಾಡಿ, ಪುರಸಭೆಯಲ್ಲಿ ಹಿಂದುಳಿದ ಜನಾಂಗದವರಿಗೆ ಕಾಂಗ್ರೆಸ್ ರಾಜಕೀಯ ಪ್ರಾತಿನಿಧ್ಯ ನೀಡುತ್ತಿದೆ. ಸಂವಿಧಾನದತ್ತವಾಗಿ ಸಿಕ್ಕ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ನೂತನ ಅಧ್ಯಕ್ಷ ಪರಮೇಶ್ ಮಾತನಾಡಿ, ಕಾಂಗ್ರೆಸ್ ನನ್ನ ಪಕ್ಷ ನಿಷ್ಠೆ ಗುರುತಿಸಿ ಅಧಿಕಾರ ನೀಡಿದೆ. ಎಲ್ಲ ಸದಸ್ಯರ ಸಹಮತ ಹಾಗೂ ಅಧಿಕಾರಿ, ಸಿಬ್ಬಂದಿಗಳ ಸಹಕಾರದಿಂದ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಕೆಪಿಸಿಸಿ ಸದಸ್ಯ ಎಚ್.ವಿಶ್ವನಾಥ್, ಪುರಸಭೆ ಉಪಾಧ್ಯಕ್ಷೆ ರಿಹಾನ ಪರ್ವೀನ್, ಸದಸ್ಯರಾದ ಟಿ.ಜಿ.ಶಶಾಂಕ್, ಟಿ.ದಾದಾಪೀರ್, ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್‌ವರ್ಮ, ಟಿ.ಆರ್.ಬಸವರಾಜ್, ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮತ್ತಿತರರಿದ್ದರು.