

ಬೆಂಗಳೂರು: ಈಗ ಬಿಜೆಪಿಯವರೂ ನಮ್ಮಂತೆ ಆಗಿದ್ದಾರೆ, ದೆಹಲಿ ಕಡೆ ನೋಡುತ್ತಿದ್ದಾರೆ. ಮೊದಲು ಎಲ್ಲದಕ್ಕೂ ಹೈಕಮಾಂಡ್ ಕಡೆ ಕಾಂಗ್ರೆಸ್‌ನವರು ನೋಡುತ್ತಾರೆ ಅನ್ನುತ್ತಿದ್ದರು. ಈಗ ಬಿಜೆಪಿಯವರೂ ದೆಹಲಿ ಕಡೆ ನೋಡುವಂತಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಸಂವಿಧಾನಾತ್ಮಕವಾಗಿ ವಿರೋಧ ಪಕ್ಷದ ನಾಯಕ ಇರಬೇಕು. ಅವರ ಪಕ್ಷದಲ್ಲಿ ಆಂತರಿಕ ವಿಚಾರ ಹೇಗಿದೆ ಎಂದು ಇದರಿಂದ ಗೊತ್ತಾಗುತ್ತದೆ. ಕರ್ನಾಟಕದ ಇತಿಹಾಸದಲ್ಲಿ ಎಂದೂ ಈ ರೀತಿ ಆಗಿರಲಿಲ್ಲ ಎಂದು ಹೇಳಿದರು.
ಬಿಜೆಪಿ ನಾಯಕರ ರಿವರ್ಸ್ ಆಪರೇಷನ್ ವಿಚಾರವಾಗಿನ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಯಾರ ಸಂಪರ್ಕದಲ್ಲಿ ಯಾರಿದ್ದಾರೆ ಎಂದು ಸ್ವಲ್ಪ ದಿನದಲ್ಲಿ ಗೊತ್ತಾಗಲಿದೆ ಎಂದರು. ಕೇಂದ್ರ ಸರ್ಕಾರ ಬಹುಮತ ಇದೆ ಎಂದು ಏನೇನೋ ತೀರ್ಮಾನ ಮಾಡುತ್ತಿದ್ದಾರೆ. ಒಕ್ಕೂಟದ ವ್ಯವಸ್ಥೆಯನ್ನ ಅವರು ನೋಡಬೇಕಾಗುತ್ತದೆ. ದೇಶ ಒಂದು ರಾಷ್ಟ್ರವಾಗಿ ಉಳಿಯಲು, ಚರ್ಚೆ ಮಾಡಿ ಎಲ್ಲಾ ರಾಜ್ಯಗಳ ಸಲಹೆ ಪಡೆಯಬೇಕಾಗುತ್ತದೆ ಎಂದು ಹೇಳಿದರು.