

ಅದು ಪುಣೆಯ ಅನಾಥ ವಿದ್ಯಾರ್ಥಿಗೃಹದ ಪ್ರೌಢಶಾಲೆ. ಸುಮಾರು 1923ರ ಸಮಯ. ಪ್ರೌಢಶಾಲಾ ಉಪಾಧ್ಯಾಯರು ಒಂದು ದಿನ ತರಗತಿಯಲ್ಲಿ ಮಕ್ಕಳ ಬಳಿ ‘ನಿಮ್ಮ ಜೀವನದ ಗುರಿ ಏನು? ಆಸೆ ಆಕಾಂಕ್ಷೆ ಏನು?’ ಎಂಬುದನ್ನು ಕಾಗದದಲ್ಲಿ ಬರೆದುಕೊಡಿ ಎಂದು ಸೂಚಿಸಿದರು.
ಕೆಲ ವಿದ್ಯಾರ್ಥಿಗಳು ತಾವು ವೈದ್ಯರಾಗಬೇಕೆಂದು ಬರೆದರೆ, ಇನ್ನು ಕೆಲವರು ಇಂಜಿನಿಯರ್ ಆಗುವಾಸೆ ಹೇಳಿಕೊಂಡಿದ್ದರು. ಮತ್ತೆ ಕೆಲವರು ಉತ್ತಮ ನೌಕರಿ ಹಿಡಿಯಬೇಕೆಂಬ ಬಯಕೆ ವ್ಯಕ್ತಪಡಿಸಿದ್ದರು. ಶ್ರೀಧರ ಎಂಬ ವಿದ್ಯಾರ್ಥಿಯ ಚೀಟಿಯಲ್ಲಿ, ‘ಪರಮಾತ್ಮನ ಸಂಪೂರ್ಣ ಕೃಪೆಯನ್ನು ಪಡೆಯುವುದು ಮತ್ತು ಜನಸೇವೆ ಮಾಡುವುದು ನನ್ನ ಗುರಿ’ ಎಂದು ಬರೆದಿತ್ತು. ಎಲ್ಲರಿಗೂ ಅಚ್ಚರಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಂಥ ಮಹೋನ್ನತ ಗುರಿ! ಇವರೇ ಮುಂದೆ ಭಗವಾನ್ ಶ್ರೀಧರ ಸ್ವಾಮಿ ಎಂದು ಲೋಕವಿಖ್ಯಾತರಾದರು. ಕಷ್ಟಗಳ ಸರಮಾಲೆಯೇ ಎದುರಾದರೂ ಅಂಜದೆ ಅಳುಕದೆ ಸಾಗಿದರೆ ಗುರಿಸಾಧನೆಯಾಗುತ್ತದೆ ಎಂಬುದಕ್ಕೆ ಅವರ ಜೀವನ ಒಂದು ಉಜ್ವಲ ನಿದರ್ಶನ.
ಮಾನವ ಮಾಧವನಾಗಬಹುದು ಎಂಬುದಕ್ಕೂ ಅವರು ಸಾಕ್ಷಾತ್ ಮಾದರಿ. ಚಿತ್ರಪಟಕ್ಕೆ ಗೋಡೆ ಆಸರೆಯಾಗಿರುವಂತೆ ಈ ವಿಶ್ವಕ್ಕೆ ಏನೋ ಒಂದು ಶಕ್ತಿ ಆಸರೆಯಾಗಿ ನಿಂತಿದೆ ಎಂಬ ತಿಳಿವು ಅವರಲ್ಲಿ ಮೂಡಿ, ಸೃಷ್ಟಿಯ ರಹಸ್ಯ ಅರಿಯುವತ್ತ ಅವರನ್ನು ಮುನ್ನಡೆಸಿತು. ಹನ್ನೆರಡನೆಯ ವಯಸ್ಸಿಗೆ ಬರುವಷ್ಟರಲ್ಲೇ ಶ್ರೀಧರರು ತಂದೆ, ತಾಯಿ, ಅಣ್ಣ, ಅಕ್ಕ, ದೊಡ್ಡಪ್ಪ- ಹೀಗೆ ಕುಟುಂಬದ ಅನೇಕರನ್ನು ಕಳೆದುಕೊಂಡಿದ್ದರು. ಆ ಕಷ್ಟ ಪರಂಪರೆಗೆ ಅವರು ಹೆದರಿ ಹಿಂದಡಿಯಿಡಲಿಲ್ಲ. ಪಾರಮಾರ್ಥಿಕ ಬದುಕಿನತ್ತ ಸೆಳೆತ ಅವರಿಗೆ ಮುಂಚಿನಿಂದಲೂ ಇತ್ತು; ತಪಸ್ಸು ಮಾಡಬೇಕೆಂಬ ಅದಮ್ಯ ಬಯಕೆ ಆಗೀಗ ಮನದಲ್ಲಿ ಒಡಮೂಡುತ್ತಲೇ ಇತ್ತು. ಶ್ರೀಧರರ ಜನನ ಸಹ ವಿಶೇಷ ಸಂದರ್ಭದಲ್ಲಿ ಆದುದು. ಕಲಬುರಗಿ ಜಿಲ್ಲೆಯ ಲಾಡಚಿಂಚೋಳಿ ಎಂಬ ಗ್ರಾಮದಲ್ಲಿ ದತ್ತ ಜಯಂತಿ ಬಹು ಸಡಗರದಿಂದ ನೆರವೇರುತ್ತದೆ.
ಕೀಲಕ ಸಂವತ್ಸರದ ಮಾರ್ಗಶಿರ ಶುದ್ಧ ಪೂರ್ಣಿಮೆ, ಸೋಮವಾರ (7-12-1908)ದಂದು ದತ್ತ ಜಯಂತಿಯಂದು ಆ ಗ್ರಾಮದಲ್ಲಿ ದತ್ತನ ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಸಾಗುತ್ತಿತ್ತು. ಆ ಮೆರವಣಿಗೆಯು ದೇಸಾಯಿ ಎಂಬುವರ ಮನೆ ಮುಂದೆ ಬಂದು ನಿಂತು ಮಂಗಳಾರತಿ ನಡೆಯುತ್ತಿತ್ತು. ಆ ಮನೆಯಲ್ಲಿದ್ದ ಕಮಲಾಬಾಯಿ ಅವರಿಗೆ ರಾತ್ರಿ 7.20 ಗಂಟೆಗೆ ಪುತ್ರೋತ್ಸವವಾಯಿತು. ಆ ಮಗುವೇ ಶ್ರೀಧರ. ಹೀಗೆಂದೇ ಶ್ರೀಧರರು ದತ್ತಾವತಾರಿ ಎಂಬುದು ಭಕ್ತಜನರ ನಂಬಿಕೆ. ಮುಂದೆ ಜೀವನಪಯಣದಲ್ಲಿ ಹೈದರಾಬಾದ್, ಪುಣೆಯತ್ತ ತೆರಳಿದ ಶ್ರೀಧರರಿಗೆ ವಿದ್ಯಾಭ್ಯಾಸ ಸಾಗುತ್ತಿರುವಾಗಲೇ ತಪಸ್ಸಿನ ಸೆಳೆತ ಇನ್ನಷ್ಟು ಹೆಚ್ಚಿತು. ವಿದ್ಯಾರ್ಥಿಯಾಗಿದ್ದಾಗಲೂ ಶ್ರೀಧರರ ಜೀವನಕ್ರಮ ಹಿಂದಿನ ಕಾಲದ ಋಷಿಮುನಿಗಳನ್ನು ನೆನಪಿಸುವ ರೀತಿಯಲ್ಲಿ ಇತ್ತೆಂಬುದು ಅವರ ಜೀವನಾವಲೋಕನದಿಂದ ಶ್ರುತವಾಗುತ್ತದೆ.
ಕೊನೆಗೊಂದು ದಿನ ದೃಢನಿಶ್ಚಯಮಾಡಿಯೇಬಿಟ್ಟರು. 1927ರ ವಿಜಯದಶಮಿ ದಿನವಾದ ಗುರುವಾರದಂದು ಲೌಕಿಕದಿಂದ ಅಲೌಕಿಕದತ್ತ ಪಯಣ ಆರಂಭಿಸಿದರು. ಸಜ್ಜನಗಡದ ಶ್ರೀ ಸಮರ್ಥ ರಾಮದಾಸರನ್ನು ಮಾನಸಗುರುವೆಂದು ಸ್ವೀಕರಿಸಿ, ಅತ್ತ ಸಾಗಿದರು. ಸಜ್ಜನಗಡದಲ್ಲಿ ಸಮರ್ಥರ ಸೇವೆ ಮಾಡುತ್ತ ಅನೇಕ ವರ್ಷ ಕಳೆಯಿತು. ಗುರುವಿನ ಅನುಗ್ರಹವಾಯಿತು. ‘ದಕ್ಷಿಣದತ್ತ ತೆರಳಿ ಧರ್ಮಪ್ರಸಾರ ಮಾಡು’ ಎಂಬ ಗುರುವಿನ ಸೂಚನೆಯಂತೆ ಶ್ರೀಧರರ ನಡೆ ಸಾಗಿತು. ಇದು ದಕ್ಷಿಣದ ಭಾಗ್ಯವಾಯಿತು. ಕರ್ನಾಟಕವೂ ಸೇರಿದಂತೆ ವಿವಿಧೆಡೆಗಳಲ್ಲಿ ಶ್ರೀಧರರ ಸಂಚಾರ ನಿರಂತರವಾಗಿ ನಡೆಯಿತು.
ಕ್ರಮೇಣ ಭಕ್ತರ ಸಂಖ್ಯೆ ಹೆಚ್ಚಿತು. ಅವರ ಪ್ರವಚನಗಳಿಗೆ ಜನರು ಕಿಕ್ಕಿರಿದು ಸೇರುತ್ತಿದ್ದರು. ಸಾರ್ಥಕ ಬದುಕಿನ ಸೂತ್ರವನ್ನು ಸರಳ ಮಾತುಗಳಲ್ಲಿ ಕಟ್ಟಿಕೊಡುತ್ತಿದ್ದರು. ಅವರ ಮಾತು ಮೃದುಮಧುರ. ‘ತಮ್ಮ ಅಣ್ಣ ಅಕ್ಕ ತಂಗಿ... ’ ಹೀಗೆ ಸಂಬೋಧಿಸುವ ಪರಿ ಜನರನ್ನು ಸೆಳೆಯುತ್ತಿತ್ತು. ಕನ್ನಡ, ಮರಾಠಿ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳ ಮೇಲೆ ಹಿಡಿತವಿದ್ದುದರಿಂದ ಆಯಾ ಪ್ರದೇಶದಲ್ಲಿ ಆಯಾ ಭಾಷೆಯಲ್ಲಿಯೇ ಪ್ರವಚನ ನೀಡುತ್ತಿದ್ದರು. ಅವರು ಕೊಡುವ ತೀರ್ಥಕ್ಕೆ ವ್ಯಾಧಿಗಳನ್ನು ಗುಣಪಡಿಸುವ ಶಕ್ತಿಯಿದೆಯೆಂದು ಜನರು ನಂಬಿದ್ದರು. ಅವರು ಹೋದಲ್ಲೆಲ್ಲ ಜನರು ಮುತ್ತುತ್ತಿದ್ದರು. ಕಷ್ಟಗಳನ್ನು ಹೇಳಿಕೊಂಡು ಪರಿಹಾರ ಪಡೆಯುತ್ತಿದ್ದರು. ಇದರಿಂದಾಗಿ ಎಷ್ಟೋ ದಿನ ನಿದ್ರೆ- ವಿಶ್ರಾಂತಿಗೂ ಅವಕಾಶವಾಗುತ್ತಿರಲಿಲ್ಲ. ಹೀಗಾಗಿ ಅವರ ಆರೋಗ್ಯಸ್ಥಿತಿ ಹದಗೆಟ್ಟಿತು. ಆದರೂ, ಈ ಕಾರ್ಯ ನಿಲ್ಲಿಸಲಿಲ್ಲ. ಅನೇಕ ಕೃತಿಗಳನ್ನು ರಚಿಸುವ ಮೂಲಕ, ಜನರ ಜ್ಞಾನವರ್ಧನೆಗೆ ಇಂಬುನೀಡಿದರು.
ಶ್ರೀಧರ ಸ್ವಾಮಿಗಳ ವಿಶೇಷವೆಂದರೆ, ನಿರಂತರ ಸಂಚಾರ ಮಾಡುತ್ತ ಧರ್ಮಜಾಗೃತಿ ಮಾಡುವುದು. ಈ ಮೊದಲೇ ಅವರೇ ಸ್ವಯಂ ಆಗಿ ವಿಧಿಸಿಕೊಂಡಿದ್ದರಲ್ಲ, ಎಲ್ಲಿಯೂ ಮಠಾಧಿಪತಿಯಾಗಿ ಕೂಡ್ರುವುದಿಲ್ಲ ಎಂದು. ಸಜ್ಜನಗಡದತ್ತ ಹೊರಡುವ ಮುನ್ನ, 1927ರ ವಿಜಯದಶಮಿಯಂದು ಒಂದು ಕಾಗದದಲ್ಲಿ, ‘ಮರಣಪರ್ಯಂತ ಅಖಂಡ ಬ್ರಹ್ಮಚರ್ಯ ಪಾಲಿಸುತ್ತೇನೆ; ಎಲ್ಲಿಯೂ ಮಠಾಧಿಪತಿಯಾಗುವುದಿಲ್ಲ; ಕಷ್ಟದಲ್ಲಿರುವವರು, ಬಡವರಿಗೆ ಸಾಧ್ಯವಾದಷ್ಟು ಸಹಾಯ ಮಾಡುವುದಕ್ಕಾಗಿಯೇ ನನ್ನ ದೇಹ ಮೀಸಲು; ಸಕಲ ಸ್ತ್ರೀಯರನ್ನು ನನ್ನ ತಾಯಿಯೆಂದೇ ತಿಳಿದಿರುವೆನು; ಧರ್ಮದ ಅವನತಿಯನ್ನು ತಡೆಗಟ್ಟಲು ಸರ್ವವಿಧದಲ್ಲಿಯೂ ಶ್ರಮಿಸುವೆನು’ ಇತ್ಯಾದಿಯಾಗಿ ಬರೆದಿದ್ದರು. ಈ ಅಕ್ಷರಗಳು ಶ್ರೀಧರರ ಆದರ್ಶಮಯ ಜೀವನದ ಹೊಳಹುಗಳು.
ಅವರು ಹೋದಲ್ಲೆಲ್ಲ ಪುಣ್ಯದ ಗಾಳಿ ತಾನೇತಾನಾಗಿ ಬೀಸಿದಂತಾಗುತ್ತಿತ್ತು; ಧರ್ಮದ ತಂಗಾಳಿಯಲ್ಲಿ ಜನರು ಪುನೀತರಾಗುತ್ತಿದ್ದರು. ಉತ್ತರದ ಕಾಶಿ, ಬದರಿ ಮುಂತಾದ ಪುಣ್ಯಕ್ಷೇತ್ರಗಳಲ್ಲೂ ಶ್ರೀಧರರ ಸಾಧನೆ ಮುಂದುವರಿಯಿತು. ಅವರೊಬ್ಬ ಪರಿಪೂರ್ಣ ಯೋಗಿ ಎಂಬುದನ್ನು ಅವರ ಸಂಪರ್ಕಕ್ಕೆ ಬಂದ ಮಹಾನ್ ಸಾಧಕರನೇಕರೇ ಹೇಳಿದ್ದು, ಶ್ರೀಧರರ ಮಹಿಮೆಗೆ ಸಾಕ್ಷಿ. ಅವರು ತಮಗಾಗಿ ಏನನ್ನೂ ಬಯಸಲಿಲ್ಲ; ಸ್ವೀಕರಿಸಲಿಲ್ಲ. ಉಳ್ಳವರಿಂದ ಬಡವರಿಗೆ ಹಣ, ಬಟ್ಟೆಬರೆ ಇತ್ಯಾದಿ ಕೊಡಿಸಿದರು. ವಿದ್ಯಾರ್ಥಿಯಾಗಿದ್ದಾಗ ಸಹಪಾಠಿಯೊಬ್ಬ ತನ್ನ ಬಳಿ ಪುಸ್ತಕವಿಲ್ಲ, ಓದಲು ತೊಂದರೆಯಾಗಿದೆ ಎಂದು ಅಸಹಾಯಕತೆ ತೋಡಿಕೊಂಡಾಗ, ತಮ್ಮ ಬಳಿಯಿದ್ದ ಪುಸ್ತಕಗಳನ್ನು ಅವನಿಗೆ ಕೊಟ್ಟಿದ್ದರು. ಇದರಿಂದ ತಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾದರೂ ತಲೆಕೆಡಿಸಿಕೊಳ್ಳಲಿಲ್ಲ. ಪರೋಪಕಾರವೆಂಬುದು ಅವರ ಸಹಜಸ್ವಭಾವವೇ ಆಗಿತ್ತು. ಅವಿಶ್ರಾಂತ ಸಂಚಾರ, ಕಾರ್ಯಕ್ರಮಗಳ ನಡುವೆಯೂ ಅವಕಾಶ ಸಿಕ್ಕಾಗ ತಪಸ್ಸಿಗೆ ತೆರಳುತ್ತಿದ್ದರು.
1953ರ ಹೊತ್ತಿಗೆ ಸಾಗರ ಸನಿಹದ ವದ್ದಳ್ಳಿ ಎಂಬ ಚಿಕ್ಕ ಗ್ರಾಮಕ್ಕೆ ಬಂದರು. ಇದು ಪವಿತ್ರ ತಾಣ, ಹಿಂದೆ ಋಷಿಮುನಿಗಳು ತಪಸ್ಸು ಮಾಡುತ್ತಿದ್ದ ಸ್ಥಳವಾದ್ದರಿಂದ ಇಲ್ಲಿ ಆಶ್ರಮ ಸ್ಥಾಪಿಸಬೇಕು ಎಂದು ಅವರಿಗೆ ಪ್ರೇರಣೆಯಾಯಿತು. ಶಿಷ್ಯರು ಗುರುವಿನ ಮಾತನ್ನು ಶಿರಸಾಪಾಲಿಸಿದರು. ಒಂದು ಕಾಲದಲ್ಲಿ ಕಾನನವಾಗಿದ್ದ ವದ್ದಳ್ಳಿ ಕ್ರಮೇಣ ವರದಪುರವಾಗಿ ಬದಲಾಯಿತು. ಚೈತ್ರ ಬಹುಳ ಬಿದಿಗೆ ಗುರುವಾರ (19-4-1973) ಬೆಳಗ್ಗೆ 9 ಗಂಟೆಗೆ ಶ್ರೀಧರರು ಪರಮಾತ್ಮನಲ್ಲಿ ಲೀನವಾದರು. ರಾಜ್ಯ, ಹೊರರಾಜ್ಯದ ಅನೇಕ ಕಡೆಗಳಲ್ಲಿ ಇವತ್ತಿಗೂ ಲಕ್ಷಾಂತರ ಮನೆಗಳಲ್ಲಿ ಶ್ರೀಧರ ಸ್ವಾಮಿಗಳ ಭಾವಚಿತ್ರವನ್ನು ಕಾಣಬಹುದು. ಅಭಯಹಸ್ತ ಮುದ್ರೆ, ಕರುಣಾಪೂರಿತ ನೋಟದ ಆ ಭಾವಚಿತ್ರ ಕೇವಲ ಚಿತ್ರಪಟವಲ್ಲ, ಶ್ರೀಧರರು ಇಂದಿಗೂ ಚೈತನ್ಯರೂಪಿಯಾಗಿ, ಸೂಕ್ಷ್ಮರೂಪದಲ್ಲಿ ಇದ್ದಾರೆ ಎಂಬುದರ ರೂಪಕ. ಭಕ್ತರಿಗೆ ಇದು ಕೇವಲ ಭಾವಪರವಶತೆಯಲ್ಲ, ಅನುಭವದ ಆನಂದ...
ಶ್ರೀಧರ ಸ್ವಾಮಿಗಳ 52ನೇ ಆರಾಧನಾ ಮಹೋತ್ಸವದ ಅಂಗವಾಗಿ ಶಿವಮೊಗ್ಗ ಜಿಲ್ಲೆ ಸಾಗರ ಸನಿಹದ ವರದಹಳ್ಳಿಯ ಶ್ರೀಧರಾಶ್ರಮ, ಜನ್ಮಸ್ಥಳ ಕಲಬುರಗಿ ಜಿಲ್ಲೆಯ ಲಾಡಚಿಂಚೋಳಿಯ ಶ್ರೀಧರಾಶ್ರಮ ಹಾಗೂ ಬೆಂಗಳೂರಿನ ವಸಂತಪುರದಲ್ಲಿನ ಶ್ರೀಧರ ಪಾದುಕಾ ಮಂದಿರದಲ್ಲಿ ಇಂದು, ಏಪ್ರಿಲ್ 15ರಂದು ವಿವಿಧ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.