ಪರಮಹಂಸ ನುಡಿದೀಪ; ನಾಮಸ್ಮರಣೆಯಿಂದ ಹೃತ್ಕಮಲ ವಿಕಾಸ

Sudina 3 Paramahamsa nudideepa
Published on
ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ ಬಳಿ ಬರುತ್ತಿದ್ದ ಭಕ್ತರಿಗೆಲ್ಲ ಅನೇಕ ರೀತಿಯ ಉದಾಹರಣೆಗಳ ಮೂಲಕ ನಾಮಸ್ಮರಣೆ, ನಾಮಜಪ, ನಾಮರೂಪಧ್ಯಾನ ಇತ್ಯಾದಿ ವಿಚಾರಗಳನ್ನು ವಿವರಿಸುತ್ತಿದ್ದರು. ಈ ಕಲಿಯುಗಕ್ಕೆ ಭಗವನ್ನಾಮ ಸ್ಮರಣೆಯೇ ಮುಖ್ಯ. ಅದರಲ್ಲೂ ಭಕ್ತಿಯ ಪಥವೇ ಗತಿ ಎಂದು ತಿಳಿಸುತ್ತಿದ್ದರು ಪರಮಹಂಸರು. ಆದರೆ ಆಧುನಿಕತೆಯ ಅಲೆಯಲ್ಲಿ ಸಿಲುಕಿದ ಮಾನವ ಈ ಜಗತ್ತಿನಲ್ಲಿ ದೊರೆಯುವ ಕ್ಷಣಿಕ ಸುಖದ ಹಿಂದೆ ಬಿದ್ದಿರುವಂತಿದೆ.

ಶ್ರೀ ರಾಮಕೃಷ್ಣರ ಪ್ರಕಾರ ಭಗವನ್ನಾಮ ಸ್ಮರಣೆ ಮಾನವನನ್ನು ದೈವತ್ವದೆಡೆಗೆ ಕರೆದೊಯ್ಯುವ ಅತ್ಯಂತ ಪರಿಣಾಮಕಾರಿ ಮಾರ್ಗ. ಭಗವಂತನನ್ನು ಅರಿಯಲು ಹೊರಟ ಸಾಧಕನಿಗೆ ಕೆಲವೊಮ್ಮೆ ಸಾಕಾರ ರೂಪದಲ್ಲಿರುವ ಭಗವಂತ ಅಥವಾ ನಿರಾಕಾರನಾಗಿರುವ ಪರಬ್ರಹ್ಮ ಯಾರನ್ನು ಅರಿಯಲಿ ಎಂಬ ಪ್ರಶ್ನೆಗಳು ಏಳುವುದುಂಟು. ರಾಮಕೃಷ್ಣರು ಈ ಗೊಂದಲಗಳಿಗೆ ಉತ್ತರ ನೀಡುತ್ತಾರೆ.

ಒಮ್ಮೆ ಸಾಧಕನು ನಾಮಸ್ಮರಣೆಯಲ್ಲಿ ಮುಳುಗಿದನೆಂದರೆ ಅವನಿಗೆ ಭಗವಂತನ ಸಾಕಾರ-ನಿರಾಕಾರದ ಎರಡೂ ಪರಿಚಯವಾಗುವುದರಲ್ಲಿ ಸಂದೇಹವಿಲ್ಲ. ಆದರೆ ಆರಂಭಿಕ ಸಮಯದಲ್ಲಿ ಸದ್ಭಕ್ತನು ನಂಬಿಕೆ, ವಿಶ್ವಾಸವಿಟ್ಟು ನಾಮಮಂತ್ರ ಜಪದಲ್ಲಿ ಮುಳುಗಬೇಕು. ಕ್ರಮೇಣ ಅವನಿಗೆ ಸಾಕ್ಷಾತ್ಕಾರದ ಪಥ ಸ್ಪಷ್ಟವಾಗುತ್ತದೆ. ಭಗವನ್ನಾಮ ಜಪದಲ್ಲಿ ಮುಳುಗಿದ ಸಾಧಕನಿಗೆ ಆ ದಿವ್ಯ, ಭವ್ಯ, ಅನಂತ ದರ್ಶನಗಳು ದೊರೆಯುತ್ತವೆ. ಕ್ರಮೇಣ ಭಗವದ್ದರ್ಶನ ಭಾಗ್ಯ ದೊರೆಯುತ್ತದೆ.

ನಾವು ಅಧ್ಯಾತ್ಮಿಕ ಜೀವನದಲ್ಲಿ ಸಾಗಬೇಕಾದರೆ ಶುದ್ಧ ಮನಸ್ಸು, ಶುದ್ಧ ಭಕ್ತಿ, ಶುದ್ಧ ಹೃದಯ - ಈ ಮೂರು ಅಂಶಗಳನ್ನು ನೆನಪಿನಲ್ಲಿಟ್ಟಿರಬೇಕು. ಕೇವಲ ತೋರ್ಪಡಿಕೆಗೆ ನಾಮಸ್ಮರಣೆ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಇದ್ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ. ಶುದ್ಧ ಮನಸ್ಸಿನಲ್ಲಿ, ಶುದ್ಧ ಹೃದಯದಿಂದ, ಶುದ್ಧ ಭಕ್ತಿಯಿಂದ ಭಗವನ್ನಾಮವನ್ನು ಜಪಿಸಿದ್ದೇ ಆದರೆ ಖಂಡಿತ ಆ ಅಂತರ್ಯಾಮಿ ಗೋಚರಿಸುತ್ತಾನೆ. ಶ್ರೀರಾಮಕೃಷ್ಣ ಪರಮಹಂಸರ ಮಾತಿನಲ್ಲಿ ಹೇಳುವುದಾದರೆ ಹೃತ್ಪದ್ಮ ಅರಳಲಾರಂಭಿಸುತ್ತದೆ. ಇದನ್ನು ಪರಮಹಂಸರ ನಿತ್ಯ ಜೀವನದಲ್ಲಿ ಕಾಣಬಹುದಾಗಿದೆ. ಈ ಕಾರಣದಿಂದಲೇ ಪರಮಹಂಸರು ದಿವ್ಯನಾಮವನ್ನು ಕೇಳಿದಾಕ್ಷಣ ಸಮಾಧಿಸ್ಥಿತಿ ತಲುಪುತ್ತಿದ್ದರು. ಪರಮಹಂಸರ ಆ ದಿವ್ಯೋನ್ಮಾದ ಸ್ಥಿತಿ ಹೇಗಿತ್ತೆಂದು ನೋಡಿ.

ಒಮ್ಮೆ ಅವರು ಕಲ್ಕತ್ತ ನಗರದ ಮೃಗಾಲಯಕ್ಕೆ ಭೇಟಿ ನೀಡಿದಾಗ ಸನಿಹದಲ್ಲಿಯೇ ಸಿಂಹದ ದರ್ಶನವಾದೊಡನೆ ಭಾವಾವಸ್ಥೆಗೆ ಜಾರಿದರು. ಕಾರಣ ಅವರ ಪವಿತ್ರ ಮನಸ್ಸಿನಲ್ಲಿ ಸಿಂಹವಾಹಿನಿದುರ್ಗೆಯ ದರುಶನವಾಗತೊಡಗಿತು. ಇದೇ ಶುದ್ಧ ಮನಸ್ಸು, ಹೃದಯ, ಭಕ್ತಿಯ ತ್ರಿಕರಣಗಳ ಪ್ರಭಾವವೆನ್ನಬಹುದು. ಮಗದೊಮ್ಮೆ ಕಲ್ಕತ್ತ ನಗರದ ಮೈದಾನದ ಸನಿಹದ ವೃಕ್ಷದ ಬಳಿ ವಿದೇಶಿ ಬಾಲಕನೊಬ್ಬ ತ್ರಿಭಂಗಿಯಲ್ಲಿ ನಿಂತದ್ದನ್ನು ಕಂಡು ಸಾಕ್ಷಾತ್ ಕೃಷ್ಣನು ನಿಂತಿರುವಂತೆ ಗೋಚರಿಸಿತು ಪರಮಹಂಸರಿಗೆ. ಇದೇ ಶುದ್ಧ ಭಕ್ತಿ ಮನಸ್ಸು ಹೃದಯದ ಪ್ರಭಾವ.

ಭಗವನ್ನಾಮ ಜಪ, ಸ್ಮರಣೆ ಇತ್ಯಾದಿಗಳನ್ನು ಕೈಗೊಳ್ಳುವರು ಮನಸ್ಸಿನಿಂದ ಶುದ್ಧ ಭಕ್ತಿಯಿಂದ, ಶುದ್ಧ ಹೃದಯದಿಂದ ಕೈಗೊಳ್ಳಬೇಕು. ಈ ತೆರನಾದ ಹೃತ್ಪದ್ಮದ ಅರಳುವಿಕೆಯ ಸ್ಥಿತಿಯನ್ನು ಮಾಸ್ಟರ್ ಮಹಾಶಯ ವಚನವೇದದಲ್ಲಿ ಹೀಗೆ ವಿವರಿಸುತ್ತಾನೆ: ‘ಸ್ನಾನಾದಿಗಳ ನಂತರ ಭಗವತಿಯ ನಾಮವನ್ನು ಜಪಿಸುತ್ತ ಒಬ್ಬ ಭಕ್ತನೊಂದಿಗೆ ಅಂಗಳಕ್ಕೆ ಇಳಿದು ಕಾಳಿ ದೇವಾಲಯಾಭಿಮುಖವಾಗಿ ಬರುತ್ತಿದ್ದಾರೆ. ಹಕ್ಕಿ ಕಾವಿಗೆ ಕುಳಿತಿರುವಾಗ ಅದು ಯಾವ ದೃಷ್ಟಿಯುಳ್ಳದ್ದಾಗಿರುವುದೋ ಅದೇ ರೀತಿಯಲ್ಲಿ ದೃಷ್ಟಿಯುಳ್ಳವರಾಗಿ ನಡೆಯುತ್ತಿದ್ದಾರೆ.

ದೇವಾಲಯವನ್ನು ಪ್ರವೇಶಿಸಿದ ನಂತರ ಭಗವತಿಗೆ ಪ್ರಣಾಮಗೈದು ಪೂಜೆ ಕೈಗೊಳ್ಳುತ್ತಿದ್ದಾರೆ. ಅವರಿಗೆ ಯಾವ ನಿಯಮವೂ ಇಲ್ಲ. ಗಂಧಪುಷ್ಪಗಳನ್ನು ಕೆಲವು ವೇಳೆ ಭಗವತಿಯ ಪಾದಗಳಿಗೆ ಅರ್ಪಿಸುತ್ತಿದ್ದಾರೆ. ಈ ರೀತಿಯಾಗಿ ತಮಗಿಚ್ಛೆ ಬಂದಂತೆ ಭಗವತಿಯ ಪೂಜೆ ನಡೆಸಿ ಮರಳಿ ತಮ್ಮ ಕೊಠಡಿಗೆ ಬರುತ್ತಾರೆ.’ ಇದು ನಿಜವಾದ ನಾಮ ಸ್ಮರಣೆಯ ಮಹಿಮೆ. ಶ್ರೀರಾಮಕೃಷ್ಣರ ಪ್ರಕಾರ ‘ಮಾನವ ಹೇಗೇ ಇರಲಿ, ಯಾವ ರೀತಿಯಲ್ಲಿ ಜೀವನ ನಡೆಸಲಿ, ಅವೆಲ್ಲವೂ ಭಗವರ್ದಪಿತ ಭಾವನೆಯಲ್ಲಿ ನೆರವೇರಿಸಬೇಕು. ಸಾಂಸಾರಿಕ ಕರ್ತವ್ಯಗಳನ್ನೂ ಭಗವಂತನಲ್ಲಿ ಸಮರ್ಪಿತ ಭಾವನೆಯಿಂದ ನೆರವೇರಿಸಬೇಕು. ಮಾನವನ ಮುಖ್ಯ ಗುರಿ ಭಗವಂತನ ಸಾಕ್ಷಾತ್ಕಾರ.’

ಶ್ರೀರಾಮಕೃಷ್ಣ ಪರಮಹಂಸರು ಭಕ್ತರಿಗೆ ಸದಾ ತಮ್ಮ ಜೀವನದ ಸಾಧನೆಯ ಅನುಭವಗಳನ್ನು ಹೆಕ್ಕಿ ಶುದ್ಧವಾದ, ಸರಳವಾದ ಭಾಷೆಯಲ್ಲಿ ತಿಳಿಸುತ್ತಿದ್ದರು. ಭಗವನ್ನಾಮೋಚ್ಚಾರಣೆ ಬಗ್ಗೆ ವಿಜಯಕೃಷ್ಣ ಗೋಸ್ವಾಮಿ ಎಂಬ ಮಹಾನ್ ಭಕ್ತನಿಗೆ ಈ ರೀತಿ ತಿಳಿಸುತ್ತಾರೆ: ‘ಭಗವನ್ನಾಮೋಚ್ಚಾರಣೆಯಿಂದ ಮನುಷ್ಯ ಒಮ್ಮೆ ಶುದ್ಧನೇನೋ ಆದ ಎಂದು ಇಟ್ಟುಕೋ. ಆದರೆ ಮತ್ತೆ ಆತ ಅನೇಕ ಪಾಪಕಾರ್ಯಗಳಲ್ಲಿ ತೊಡಗಿಬಿಡುತ್ತಾನೆ.

ಆತನದು ದುರ್ಬಲ ಮನಸ್ಸು. ಮತ್ತೆ ಪಾಪಕಾರ್ಯಗಳನ್ನು ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಲಾರ. ಅದಕ್ಕಾಗಿಯೇ ನಾನು ಹೇಳುವುದು - ಭಗವನ್ನಾಮೋಚ್ಚಾರಣೆಯನ್ನೂ ಮಾಡಿ, ಜೊತೆಗೆ ಆತನಲ್ಲಿ ನಿಮಗೆ ಅನುರಾಗ ಉಂಟಾಗಬೇಕೆಂದು ಕರುಣಿಸಬೇಕೆಂದೂ ಆತನಿಗೆ ಪ್ರಾರ್ಥನೆ ಮಾಡಿ. ಭಗವಂತನನ್ನು ಪ್ರಾರ್ಥಿಸಿಕೊಳ್ಳಿ’. ಭಗವನ್ನಾಮೋಚ್ಚಾರಣೆ ಹಾಗೂ ಹೃತ್ಪದ್ಮ ವಿಕಸನದ ಬಗ್ಗೆ ಪರಮಹಂಸರು ತಿಳಿಸುತ್ತಿದ್ದ ಪರಿ ಈ ತೆರನಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net