

ಈ ನಶ್ವರ ಪ್ರಪಂಚದಲ್ಲಿ ಎಲ್ಲವೂ ಶಾಶ್ವತವೆಂದು ಭಾವಿಸುವ ಮಾನವ; ಕಾಟಾಚಾರಕ್ಕಾಗಿ ಮಾತ್ರ ಪೂಜೆ, ಆರಾಧನೆ ಇತ್ಯಾದಿಗಳನ್ನು ಮಾಡುತ್ತ ಇದೇ ನಿಜವಾದ ಪೂಜೆ ಎಂದು ಭಾವಿಸುವುದನ್ನು ಕಾಣಬಹುದು. ಮತ್ತೊಂದು ವರ್ಗದ ಜನರಿದ್ದಾರೆ. ಅವರಿಗೆ ಬಾಹ್ಯಾಡಂಬರದಿಂದ ತೃಪ್ತಿ. ಮತ್ತೆ ಕೆಲವರು ತಾವು ಪೂಜೆಯನ್ನು ಕೈಗೊಂಡಿದ್ದೇವೆ ಎಂದು ಎಲ್ಲೆಡೆ ಪ್ರಚಾರ ಮಾಡಿಸಿ ಸಮಸ್ತ ಜನರ ಮುಂದೆ ಆಡಂಬರಭರಿತವಾದ ಪರಿಸರದಲ್ಲಿ ರಾರಾಜಿಸುತ್ತ ಪೂಜೆ ಸಲ್ಲಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಹೀಗಾಗಿ ಸಾಮಾನ್ಯ ಮನುಜರಿಗೆ ಪೂಜೆ ಎಂಬುದರ ನಿಜವಾದ ಅರ್ಥವೇ ಗೊತ್ತಾಗುತ್ತಿಲ್ಲ. ತೋರ್ಪಡಿಕೆ, ಡಾಂಭಿಕ, ಪ್ರದರ್ಶನಾತ್ಮಕ ಪೂಜೆಗಳೇ ನಿಜವಾದ ಪೂಜೆ ಎಂದು ನಂಬುವ ಸ್ಥಿತಿಗೆ ಆಧುನಿಕ ಮಾನವ ತಲುಪಿದ್ದಾನೆ.
ಹಾಗಾದರೆ ನಿಜವಾದ ಪೂಜೆಯ ಅರ್ಥವೇನು? ಎಂತಹ ಆರಾಧನೆ, ಅರ್ಚನೆ ಸಲ್ಲಿಸಿದರೆ ಪರಮೇಶ್ವರ ಮೆಚ್ಚುವನು ಎಂಬೀ ಪ್ರಶ್ನೆಗಳು ಸ್ವಲ್ಪ ವಿವೇಕವಿರುವ ಜನರಲ್ಲಿ ಬರುವುದು ಸಹಜ.
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು
ಮನಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು
ಹದುಳಿಗರಲ್ಲದವರಲ್ಲಿ ಗಂದಾಕ್ಷತೆಯನೊಲ್ಲೆಯಯ್ಯ ನೀನು
ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು
ಭಾವಶುದ್ಧವಿಲ್ಲದವರಲಿ ಧೂಪವನೊಲ್ಲೆಯಯ್ಯ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು
ತ್ರಿಕರಣಶುದ್ಧವಿಲ್ಲದವರಲಿ ತಾಂಬೂಲವನೊಲ್ಲೆಯಯ್ಯ ನೀನು
ಹೃದಯಕಮಲ ಅರಳದವರಲಿ ಇರಲೊಲ್ಲೆಯಯ್ಯ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ
ಚೆನ್ನಮಲ್ಲಿಕಾರ್ಜುನಯ್ಯ
ಪರಮಹಂಸರು: ‘ನೋಡಿ, ನೀವು ಶಿವಪೂಜೆ ಮಾಡಬೇಕಾದರೆ ಪೂಜೆಯನ್ನು ಹೇಗೆ ಮಾಡುವುದು ಎಂಬುದನ್ನು ‘ಪೂಜಾ ಪದ್ಧತಿ’ ಎಂಬ ಹೆಸರಿನ ಪುಸ್ತಕವಿದೆ, ಅದನ್ನು ಅನುಸರಿಸಿ ಪೂಜೆ ನೆರವೇರಿಸಬೇಕು. ಆಗ ಮನಸ್ಸು ಯೋಗಮುಖವಾಗಿರುತ್ತದೆ. ಸರ್ವದಾ ಸ್ಮರಣ ಮನನ ನಡೆದುಕೊಂಡೇ ಹೋಗುತ್ತಿರುತ್ತದೆ.’
ಇದು ನಿಜವಾದ ಪೂಜೆಯ ಅರ್ಥ. ನಾವು ಈಗಿನ ಆಧುನಿಕ ಯುಗದಲ್ಲಿ ಕಾಣುತ್ತಿರುವ ಪೂಜೆ ಎಂಬುದು ಕೇವಲ ಪ್ರದರ್ಶನ ಎಂಬುದನ್ನು ಮತ್ತೆ ಹೇಳಬೇಕಿಲ್ಲ. ಒಂದುವೇಳೆ ನಿಜವಾದ ಪೂಜೆಯನ್ನು ಕೈಗೊಂಡಿದ್ದೇ ಆದರೆ ಆಗ ಆರಾಧಕನ ಮನಃಸ್ಥಿತಿ ಹೇಗಿರಬಹುದು? ಪರಮಹಂಸರು ತಮ್ಮ ಈ ಅನುಭವವನ್ನು ಹಂಚಿಕೊಳ್ಳುತ್ತಾರೆ; ‘ಒಂದು ದಿನ ಪೂಜೆಯ ಸಮಯದಲ್ಲಿ ಶ್ರೀ ಪರಮೇಶ್ವರನ ಶಿರದ ಮೇಲೆ ವಜ್ರದಾಭರಣ ಇಡುತ್ತಿದ್ದೆ. ಆಗ ಜಗನ್ಮಾತೆ ಭವತಾರಿಣಿ ನನಗೆ ತೋರಿಸಿದಳು, ಈ ವಿರಾಟ್, ಈ ವಿಶ್ವವೇ ಶಿವನೆಂದು. ಅಂದಿನಿಂದ ಶಿವನನ್ನು ನಾನು ಪ್ರತಿಮೆಯ ಮೂಲಕ ಆರಾಧಿಸುವುದು ಕೊನೆಗೊಂಡಿತು’.
ಇದೇ ನಿಜಾರ್ಥದಲ್ಲಿ ಪೂಜೆ. ಈ ಪೂಜೆಯೆಂಬುದು ಯಾವುದಾದರೂ ಹಬ್ಬ, ಹರಿದಿನ, ನವರಾತ್ರಿ, ಶಿವರಾತ್ರಿ ಸಂದರ್ಭಕ್ಕೆ ಮುಡಿಪಾಗಿಡದೆ ಮನದಲ್ಲಿ ಸದಾ ನಡೆಯುತ್ತಿರಬೇಕು. ‘ಪೂಜಾ ಪರಿಕರಗಳು ಬೇಡವೇ? ಹೂ, ಗಂಧ, ಪುಷ್ಪಾದಿಗಳು ಬೇಡವೇ?’ ಎಂಬ ಪ್ರಶ್ನೆ ಉದ್ಭವಿಸಬಹುದು. ಆರಂಭದಲ್ಲಿ ಖಂಡಿತ ಬೇಕು. ಆದರೆ ಕ್ರಮೇಣ ಮನಸ್ಸು ಬಾಹ್ಯಸ್ಥಿತಿಯಿಂದ ಮೇಲೇರಬೇಕು.
ಆತ್ಮಾ ತ್ವಂ ಗಿರಿಜಾ ಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಂ
ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿಸ್ಥಿತಿಃ |
ಸಂಚಾರಃ ಪದಯೋಃ ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವಾ ಗಿರೋ
ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ ||
‘‘(ಶಿವನನ್ನು ಕುರಿತು) ನೀನೇ ನನ್ನ ಆತ್ಮಾ, ಗಿರಿಜೆಯು ನನ್ನ ಬುದ್ಧಿ, ಈ ಶರೀರವೇ ಮನೆ, ನನ್ನ ಎಲ್ಲ ಆಸೆಗಳ ಆರೈಕೆ ಪೂರೈಕೆಗಳು ನಿನ್ನದೇ ಪೂಜೆ, ನಿದ್ರೆಯಾದರೋ (ನಿನ್ನದೇ ಧ್ಯಾನದ) ಸಮಾಧಿಸ್ಥಿತಿ, ನನ್ನ ಎರಡು ಕಾಲುಗಳಿಂದ ಮಾಡುವ ನಡಿಗೆಯೆಲ್ಲವೂ ನಿನಗೆ ಹಾಕುವ ಪ್ರದಕ್ಷಿಣೆ, ನಾನು ನುಡಿಯುವ ಮಾತುಗಳೆಲ್ಲವೂ ನಿನ್ನ ಸ್ತೋತ್ರಗಳು. ಹೇ ಶಂಭೋ, (ಒಟ್ಟಿನಲ್ಲಿ) ನಾನು ಯಾವ ಯಾವ ಕರ್ಮಗಳನ್ನು ಕೈಗೊಳ್ಳುತ್ತೇನೋ ಅವೆಲ್ಲವೂ ನಿನ್ನ ಆರಾಧನೆಯೇ ಸರಿ!’’ ಎಂದು ಜಗದ್ಗುರು ಶ್ರೀ ಆದಿಶಂಕರಾಚಾರ್ಯರು ಹೇಳುತ್ತಾರೆ. ಶ್ರೀ ರಾಮಕೃಷ್ಣರು ತಮ್ಮ ನಿತ್ಯ ಜೀವನದಲ್ಲಿ ಇದನ್ನೇ ಅನುಷ್ಠಾನರೂಪಕ್ಕೆ ತಂದು ನಿಜವಾದ ಪೂಜೆಯ ಅರ್ಥವನ್ನು ಸಮಸ್ತ ಜಗತ್ತಿಗೆ ಬೋಧಿಸಿದರು. ಅವರು ತಮ್ಮ ಪೂಜಾವಿಧಾನದಿಂದ ಮೃಣ್ಮಯಿಯಲ್ಲಿ ಚಿನ್ಮಯಿಯನ್ನು ಕಂಡರು.
ಈ ಜಗತ್ತಿನಲ್ಲಿ ಎಷ್ಟು ಮಂದಿ ಪೂಜಾಸಂದರ್ಭದಲ್ಲಿ ಜಾಗೃತ ದೈವವನ್ನು ಕಾಣುತ್ತಾರೆಂದು ಯೋಚಿಸಿ ನೋಡಿ. ತೋರ್ಪಡಿಕೆಯ ಪೂಜೆ ಮನುಷ್ಯನ ಮನಸ್ಸನ್ನು ಕಲುಷಿತಗೊಳಿಸಿದೆ. ಇಂತಹ ಮನಸ್ಸುಳ್ಳವರು ಪೂಜೆ ಎಂಬ ಕೈಂಕರ್ಯವನ್ನು ಮಾಡಿದಾಗ ಮನಸ್ಸು ಹೇಗೆ ಯೋಗಮುಖವಾಗಿರಲು ಸಾಧ್ಯ? ನಿಜವಾದ ಪೂಜೆಯ ಅರ್ಥವನ್ನು ಅರಿತುಕೊಂಡು ಶಾಂತ, ಸಮಾಧಾನಚಿತ್ತದಿಂದ ದೈವವನ್ನು ನಂಬಿ ಅರ್ಚಿಸಿದರೆ ಮಾತ್ರ ಭಗವತ್ ಸಾಕ್ಷಾತ್ಕಾರದ ಪಥ ಸುಲಭವಾಗುತ್ತದೆ. ಇದೇ ನಿಜವಾದ ಪೂಜೆಯ ಅರ್ಥ.