

UP dowry murder case : ವರದಕ್ಷಿಣೆ ವಿಚಾರವಾಗಿ ಗಂಡ ಮತ್ತು ಅತ್ತೆ-ಮಾವನಿಂದಲೇ ಮಹಿಳೆಯೊಬ್ಬರು ಭೀಕರವಾಗಿ ಹತ್ಯೆಯಾಗಿದ್ದಾಳೆ. ಕೇಳಿದಷ್ಟು ಹಣ ತಂದುಕೊಡಲಿಲ್ಲ ಅಂತ ಬೆಂಕಿ ಹಚ್ಚಿ ಕೊಲೆ ಮಾಡಿದ್ದು, ಈ ಭಯಾನಕ ಘಟನೆಯನ್ನು ಮೃತ ಮಹಿಳೆಯ 6 ವರ್ಷದ ಪುಟ್ಟ ಮಗುವೇ ಮಾಧ್ಯಮಗಳ ಮುಂದೆ ಹಂಚಿಕೊಂಡಿದೆ. ನನ್ನ ಕಣ್ಣ ಮುಂದೆಯೇ ನನ್ನ ಅಪ್ಪ ನನ್ನ ತಾಯಿಯನ್ನು ಕೊಂದರು ಎಂದು ಹೇಳಿದೆ.
ಅಂದಹಾಗೆ, ಮೃತಳನ್ನು ನಿಕ್ಕಿ ಎಂದು ಗುರುತಿಸಲಾಗಿದೆ. ಈಕೆ 2016ರಲ್ಲಿ ಸಿರ್ಸಾ ಮೂಲದ ವಿಪಿಎನ್ ಎಂಬಾತನನ್ನು ಮದುವೆಯಾಗಿದ್ದಳು. ಕಳೆದ ಗುರುವಾರ (ಆಗಸ್ಟ್ 21) ಗಂಭೀರ ಸುಟ್ಟು ಗಾಯಗಳಿಂದ ನಿಕ್ಕಿಯನ್ನು ಗ್ರೇಟರ್ ನೋಯ್ಡಾದ ಫೋರ್ಟೀಸ್ ಆಸ್ಪತ್ರೆಗೆ ಕರೆತಂದಾಗ ಘಟನೆ ಬೆಳಕಿಗೆ ಬಂದಿದೆ. ಗಂಭೀರ ಗಾಯಗೊಂಡಿದ್ದ ನಿಕ್ಕಿಯನ್ನು ಪರೀಕ್ಷೆ ಮಾಡಿದ ಫೋರ್ಟೀಸ್ ಆಸ್ಪತ್ರೆ ವೈದ್ಯರು, ಉತ್ತಮ ಚಿಕಿತ್ಸೆಗಾಗಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಅದರಂತೆ, ಆಕೆಯನ್ನು ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಆಕೆಯ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಈ ಭೀಕರ ಘಟನೆಯ ಬಗ್ಗೆ ಮೃತ ನಿಕ್ಕಿಯ ಪುತ್ರ ಮಾತನಾಡಿದ್ದು, ನನ್ನ ತಂದೆ ಮತ್ತು ಅಜ್ಜಿ ನನ್ನ ತಾಯಿಗೆ ಕಪಾಳಮೋಕ್ಷ ಮಾಡಿ, ಆಕೆಯ ಮೇಲೆ ಒಂದು ವಸ್ತುವನ್ನು ಸುರಿದು, ಲೈಟರ್ನಿಂದ ಬೆಂಕಿ ಹಚ್ಚಿದರು ಎಂದು ಹೇಳಿದ್ದಾನೆ. ಈ ವೇಳೆ ಮಾಧ್ಯಮದ ಯಾರೋ ಒಬ್ಬರು ನಿನ್ನ ತಂದೆಯೇ ತಾಯಿಯನ್ನು ಕೊಲೆ ಮಾಡಿದ್ದಾರಾ ಎಂದು ಕೇಳಿದಾಗ ಆ ಪುಟ್ಟ ಮಗು ತಲೆಯಾಡಿಸಿತು.
ಅಂದಹಾಗೆ, ಈ ಭಯಾನಕ ಘಟನೆಯ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಒಂದು ವಿಡಿಯೋದಲ್ಲಿ, ಪತಿ ಮತ್ತು ಅತ್ತೆ ಸಂತ್ರಸ್ತೆಯ ಮೇಲೆ ಹಲ್ಲೆ ಮಾಡಿ ಆಕೆಯ ಕೂದಲನ್ನು ಹಿಡಿದು ಮನೆಯಿಂದ ಹೊರಗೆ ಎಳೆದುಕೊಂಡು ಹೋಗುವುದನ್ನು ಕಾಣಬಹುದು. ಇನ್ನೊಂದು ವಿಡಿಯೋದಲ್ಲಿ ಮಹಿಳೆ ಬೆಂಕಿ ಹಚ್ಚಿದ ನಂತರ ಮೆಟ್ಟಿಲುಗಳ ಕೆಳಗೆ ಇಳಿಯುವುದನ್ನು ಕಾಣಬಹುದು.
ಇನ್ನು ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಂತ್ರಸ್ತೆಯ ಪತಿ ವಿಪಿನ್ ಎಂಬುವರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಮೃತಳ ಅತ್ತೆ, ಮಾವ ಮತ್ತು ಸೋದರ ಮಾವ ಸೇರಿದಂತೆ ನಾಲ್ವರು ಕುಟುಂಬದ ಸದಸ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ನಿಕ್ಕಿಯ ಅಕ್ಕ ಕಾಂಚನ್ ನೀಡಿದ ದೂರಿನ ಪ್ರಕಾರ, ಇಬ್ಬರೂ ಸಹೋದರಿಯರು 2016 ರಲ್ಲಿ ಒಂದೇ ಕುಟುಂಬಕ್ಕೆ ವಿವಾಹವಾದರು. ಮದುವೆಯ ಸಮಯದಲ್ಲಿ ನಿಕ್ಕಿಯ ಕುಟುಂಬವು ಬ್ರಾಂಡೆಡ್ ಎಸ್ಯುವಿ ಮತ್ತು ಬೆಲೆಬಾಳುವ ವಸ್ತುಗಳನ್ನು ನೀಡಿದ್ದರೂ, ಅವರ ಅತ್ತೆ-ಮಾವಂದಿರು ಹೆಚ್ಚಿನ ವರದಕ್ಷಿಣೆಗಾಗಿ ಒತ್ತಾಯಿಸುತ್ತಲೇ ಇದ್ದರು ಎಂದು ಕಾಂಚನ್ ಆರೋಪಿಸಿದ್ದಾರೆ.
ಮದುವೆಯಾದ ನಂತರವೂ 35 ಲಕ್ಷ ರೂಪಾಯಿ ಕೇಳಿದರು. ನಾವು ಅವರಿಗೆ ಇನ್ನೊಂದು ಕಾರನ್ನು ಕೂಡ ಕೊಟ್ಟೆವು ಆದರೆ, ಅವರ ಬೇಡಿಕೆಗಳು ಮತ್ತು ಕಿರುಕುಳ ಅಷ್ಟಕ್ಕೆ ನಿಲ್ಲಲಿಲ್ಲ, ನಿರಂತರವಾಗಿ ಮುಂದುವರೆಯಿತು. ಹೀಗಿರುವಾಗ ಗುರುವಾರ (ಆಗಸ್ಟ್ 21) ರಾತ್ರಿ ನಿಕ್ಕಿಯನ್ನು ಆಕೆಯ ಪತಿ ವಿಪಿನ್ ಥಳಿಸಿದನು. ಪರಿಣಾಮ ನಿಕ್ಕಿ ಪ್ರಜ್ಞೆ ತಪ್ಪಿದಳು. ಇದಾದ ಬಳಿಕ ದಹನಕಾರಿ ವಸ್ತುವನ್ನು ಬಳಸಿ, ಬೆಂಕಿ ಹಚ್ಚಿದ್ದಾನೆ ಎಂದು ಕಾಂಚನ್ ಆರೋಪ ಮಾಡಿದ್ದಾರೆ.
ಘಟನೆ ನಡೆದ ಸಮಯದಲ್ಲಿ ನಾನು ಸ್ಥಳದಲ್ಲಿಯೇ ಇದ್ದರು ನನ್ನ ಸಹೋದರಿಯನ್ನು ಉಳಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಈ ವೇಳೆ ನೆರೆಹೊರೆಯವರು ನಿಕ್ಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದರು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಳು ಎಂದು ಕಾಂಚನ್ ಹೇಳಿದ್ದಾರೆ.
ಈ ಪ್ರಕರಣಕ್ಕೆ ಆತಂಕಕಾರಿ ತಿರುವು ಎಂಬಂತೆ ವಿಡಿಯೋವೊಂದು ಬೆಳಕಿಗೆ ಬಂದಿದೆ. ಆ ವಿಡಿಯೋದಲ್ಲಿ ನಿಕ್ಕಿಯ ಚಿಕ್ಕ ಮಗು ಮಾತನಾಡಿದ್ದು, ಅಪ್ಪ ಅಮ್ಮನನ್ನು ಲೈಟರ್ನಿಂದ ಸುಟ್ಟು ಕೊಂದರು ಎಂದು ಹೇಳಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶ ತೀವ್ರಗೊಂಡಿದೆ.
ಸಂತ್ರಸ್ತೆಯ ಚಿಕ್ಕಪ್ಪ ರಾಜ್ ಸಿಂಗ್ ಮಾತನಾಡಿ, ಪದೇಪದೆ ದೂರುಗಳು ಬಂದಿತ್ತು. ಈ ವೇಳೆ ಪಂಚಾಯತಿ ಸಭೆಗಳ ಮೂಲಕ ರಾಜಿ ಮಾಡಿಕೊಳ್ಳಲಾಗಿತ್ತು. ಆದರೂ ಆರೋಪಿಗಳು ಕಿರುಕುಳ ಮುಂದುವರಿಸಿದರು. ಇಬ್ಬರು ಸಹೋದರಿಯರನ್ನು ಆಗಾಗ ಥಳಿಸಲಾಗುತ್ತಿತ್ತು. ಎಷ್ಟೇ ರಾಜಿ ಮಾಡಿಕೊಂಡರೂ ಫಲ ನೀಡಲಿಲ್ಲ ಎಂದು ಹೇಳಿದ್ದಾರೆ.
ಸದ್ಯ ದೂರಿನ ಮೇರೆಗೆ ಪೊಲೀಸರು ವಿಪಿನ್ (ಪತಿ), ರೋಹಿತ್ (ಅಳಿಯ), ದಯಾ (ಅತ್ತೆ) ಮತ್ತು ಸತ್ವೀರ್ (ಮಾವ) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವಿಪಿನ್ ಬಂಧನವನ್ನು ಗ್ರೇಟರ್ ನೋಯ್ಡಾದ ಎಡಿಸಿಪಿ ಸುಧೀರ್ ಕುಮಾರ್ ದೃಢಪಡಿಸಿದ್ದಾರೆ. ಆಗಸ್ಟ್ 21 ರ ರಾತ್ರಿ, ಫೋರ್ಟಿಸ್ ಆಸ್ಪತ್ರೆಯಿಂದ ಸುಟ್ಟ ಗಾಯಗಳೊಂದಿಗೆ ಮಹಿಳೆಯೊಬ್ಬರು ದಾಖಲಾಗಿದ್ದಾರೆ ಎಂದು ಮೆಮೊ ಬಂದಿತ್ತು. ನಂತರ ಅವರನ್ನು ಸಫ್ದರ್ಜಂಗ್ಗೆ ಕಳುಹಿಸಲಾಯಿತು ಆದರೆ ದಾರಿಯಲ್ಲಿಯೇ ಮೃತಪಟ್ಟರು. ಆಕೆಯ ಸಹೋದರಿಯ ದೂರಿನ ಆಧಾರದ ಮೇಲೆ, ನಾಲ್ವರು ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪತಿಯನ್ನು ಬಂಧಿಸಲಾಗಿದೆ ಮತ್ತು ಉಳಿದವರನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.
ಈ ಘಟನೆಯು ಸ್ಥಳೀಯವಾಗಿ ಭಾರಿ ಆಕ್ರೋಶವನ್ನು ಹುಟ್ಟುಹಾಕಿದ್ದು, ಕುಟುಂಬ ಸದಸ್ಯರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. (ಏಜೆನ್ಸೀಸ್)