

ಪಾಂಡವಪುರ: ಪಟ್ಟಣದ ಹಳೇ ಬಸ್ ನಿಲ್ದಾಣದ ಗಣಪತಿ ಪೆಂಡಾಲ್‌ನಲ್ಲಿ ಗಣೇಶೋತ್ಸವದ ಅಂಗವಾಗಿ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ, ಫ್ರೆಂಚ್‌ರಾಕ್ಸ್ ಲಯನ್ಸ್ ಕ್ಲಬ್ ಪಾಂಡವಪುರ ಹಾಗೂ ಜೀವಧಾರೆ ಟ್ರಸ್ಟ್ ವತಿಯಿಂದ ಭಾನುವಾರ ರಕ್ತದಾನ ಶಿಬಿರ ನಡೆಯಿತು.
ಫ್ರೆಂಚ್‌ರಾಕ್ಸ್ ಲಯನ್ಸ್ ಕ್ಲಬ್ ತಾಲೂಕು ಅಧ್ಯಕ್ಷ ಟಿ.ಪಿ.ರೇವಣ್ಣ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಪಟ್ಟಣ ಸೇರಿದಂತೆ ತಾಲೂಕಿನ ಯುವಕ, ಯುವತಿಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಮಂಡ್ಯ ಮಿಮ್ಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರ ಹಾಗೂ ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ದಾನಿಗಳಿಂದ ರಕ್ತ ಪಡೆದುಕೊಂಡರು. ಸುಮಾರು 50ಕ್ಕೂ ಅಧಿಕ ದಾನಿಗಳು ಶಿಬಿರದಲ್ಲಿ ಪಾಲ್ಗೊಂಡು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.
ಟಿ.ಪಿ.ರೇವಣ್ಣ ಮಾತನಾಡಿ, ಸಾವು, ಬದುಕಿನ ನಡುವೆ ಹೋರಾಡುವ ಹಲವು ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ರಕ್ತದಾನ ಮಹತ್ವದಾಗಿದ್ದು, ಪ್ರತಿಯೊಬ್ಬರೂ ರಕ್ತದಾನ ಮಾಡುವುದು ಪುಣ್ಯದ ಕೆಲಸ. ನಿರ್ದಿಷ್ಟ ಕಾಲದಲ್ಲಿ ಪ್ರತಿಯೊಬ್ಬರೂ ರಕ್ತದಾನ ಮಾಡುವುದರಿಂದ ಆರೋಗ್ಯವಂತರಾಗಿರಬಹುದು. ಜತೆಗೆ ಬಿಪಿ, ಸಕ್ಕರೆ ಕಾಯಿಲೆಯಂತಹ ಹಲವು ರೋಗಗಳನ್ನು ತಡೆಗಟ್ಟಬಹುದಾಗಿದೆ. ಹೀಗಾಗಿ ಇಂತಹ ಶಿಬಿರಗಳಲ್ಲಿ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಬೇಕು ಎಂದು ಮನವಿ ಮಾಡಿದರು.
ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ, ಮನೋಜ್, ಫ್ರೆಂಚ್‌ರಾಕ್ಸ್ ಲಯನ್ಸ್ ಕ್ಲಬ್ ಕಾರ್ಯದರ್ಶಿ ಮಾಣಿಕ್ಯನಹಳ್ಳಿ ಅಶೋಕ್, ಖಜಾಂಚಿ ಆರ್.ದಿಲೀಪ್, ಜೀವಧಾರೆ ಟ್ರಸ್ಟಿನ ನಟರಾಜು ಇತರರು ಇದ್ದರು.