ಪಂಚಾಯತ್ ಆದಾಯದಲ್ಲಿ 500 ಕೋಟಿ ರೂ. ಹೆಚ್ಚಳ: ಸಚಿವ ಪ್ರಿಯಾಂಕ್ ಖರ್ಗೆ : 13.91 lac new properties registered

Priyank Kharge
Published on

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮೀಣ ಆಡಳಿತದಲ್ಲಿ ಮೌನ ಕ್ರಾಂತಿಯನ್ನು ನಡೆಸುತ್ತಿದೆ. ವರ್ಷದಿಂದ ವರ್ಷಕ್ಕೆ ದಾಖಲೆಯ ಆದಾಯ ಸಂಗ್ರಹಣೆಯ ಮೂಲಕ ಪಂಚಾಯತ್ ಆರ್ಥಿಕತೆಯನ್ನು ಬಲಪಡಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

2022-23ನೆ ಸಾಲಿನಲ್ಲಿ ಇಲಾಖೆಯು 571.94 ಕೋಟಿ ರೂ. ಆದಾಯ ಗಳಿಸಿದ್ದರೆ, 2023-24ನೆ ಸಾಲಿನಲ್ಲಿ ಅದು 767.87 ಕೋಟಿ ರೂ.ಗಳಿಗೆ ಏರಿತು. 202425 ಸಾಲಿನಲ್ಲಿ ಆದಾಯ ಗರಿಷ್ಠ ಮಟ್ಟ ತಲುಪಿ 1272.43 ಕೋಟಿ ರೂ. ತಲುಪಿದೆ. ಇದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆದಾಯ ಸಂಗ್ರಹಣೆಯಲ್ಲಿ ಸಾರ್ವಕಾಲಿಕ ದಾಖಲೆಯಾಗಿದೆ ಹೇಳಿದ್ದಾರೆ.

ತೆರಿಗೆ ವ್ಯಾಪ್ತಿಗೆ ಆಸ್ತಿಗಳ ನೋಂದಣಿ

ಕಳೆದ 18 ತಿಂಗಳುಗಳಲ್ಲಿ, ನಾವು 13,91,678 ಹೊಸ ಆಸ್ತಿಗಳನ್ನು ತೆರಿಗೆ ನೋಂದಣಿ ವ್ಯಾಪ್ತಿಗೆ ತರುವ ಮೂಲಕ ಪಂಚಾಯತ್ ಆಸ್ತಿಗಳನ್ನು 1,43,91,438ಕ್ಕೆ ಹೆಚ್ಚಿಸಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ಹಂಚಿಕೊಂಡಿದ್ದರೆ.

ಗ್ರಾಮೀಣ ಆಸ್ತಿ ನಿರ್ವಹಣಾ ವೇದಿಕೆಯಾದ ಇ-ಸ್ವತ್ತು ಹಾದಿಯಲ್ಲಿ ನಡೆಯುತ್ತಿರುವ ದಿಟ್ಟ ಸುಧಾರಣೆಗಳೊಂದಿಗೆ, ನಾವು ಇನ್ನೂ ಹೆಚ್ಚಿನ ಆದಾಯ ಉತ್ಪಾದನೆಗೆ ವೇದಿಕೆಯನ್ನು ಸಜ್ಜುಗೊಳಿಸುತ್ತಿದ್ದೇವೆ ಮತ್ತು ತಳಮಟ್ಟದಲ್ಲಿ ಹೆಚ್ಚು ಸ್ಪಂದಿಸುವಂತೆ ಪಂಚಾಯತ್‌ಗಳಿಗೆ ಹೆಚ್ಚು ಅಧಿಕಾರ ನೀಡುತ್ತಿದ್ದೇವೆ.

ಈ ಮೂಲಕ ನಾವು ಕೇವಲ ಹಳ್ಳಿಗಳನ್ನು ಬಲಪಡಿಸುತ್ತಿಲ್ಲ, ಅದರೊಂದಿಗೆ ಕರ್ನಾಟಕದ ಮುಂದಿನ ಆರ್ಥಿಕ ಇಂಜಿನ್‌ಗಳಿಗೆ ಶಕ್ತಿ ತುಂಬುತ್ತಿದ್ದೇವೆ ಎಂಬ ಆತ್ಮವಿಶ್ವಾಸವನ್ನು ಸಚಿವ ಪ್ರಿಯಾಂಕ್ ಖರ್ಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net