ಪಂಚಾಯತ್ ರಾಜ್ ವಿ.ವಿ. ಉಪಕುಲಪತಿ ನೇಮಕ; ಸಿಎಂಗೆ ರಾಜ್ಯಪಾಲರ ಪತ್ರ|V.V. Appointment

Governor
Published on

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ರಾಜ್ಯಪಾಲರ ನಡುವಿನ ಭಿನ್ನಾಭಿಪ್ರಾಯ ಈಗ ಮತ್ತೊಂದು ಆಯಾಮ ಪಡೆದುಕೊಂಡಿದೆ(The disagreement between Priyank Kharge and the Governor has now taken on another dimension).

ಗದಗದಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಗೆ ತಕ್ಷಣವೇ ಅರ್ಜಿಗಳನ್ನು ಕರೆಯಲು ಸಂಬಂಧಪಟ್ಟವರಿಗೆ ಸೂಚಿಸುವಂತೆ ರಾಜ್ಯಪಾಲ ಥಾವರ ಚಂದ್ ಗೆಹಲೋತ್ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಆ ಮೂಲಕ ಪ್ರಿಯಾಂಕ್ ಖರ್ಗೆಗೆ ಟಾಂಗ್ ಕೊಟ್ಟಿದ್ದಾರೆ.

‘ಮುಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕದೇ ಇದ್ದರೆ ತಮಿಳುನಾಡಿನ ರೀತಿ ನಾವೂ ಕೂಡ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ’ ಎಂಬ ಪ್ರಿಯಾಂಕ್ ಖರ್ಗೆ ಅವರ ಇತ್ತೀಚಿನ ಹೇಳಿಕೆಗೆ ರಾಜ್ಯಪಾಲರು ಪಂಚಾಯತ್ ರಾಜ್ ವಿ.ವಿ. ಉಪಕುಲಪತಿ ನೇಮಕದ ಕಾರಣ ಮುಂದಿಟ್ಟು ತಿರುಗೇಟು ನೀಡಿದ್ದಾರೆ.

ವೈಭವದ ಮರೀಚಿಕೆಗೆ ವ್ಯತಿರಿಕ್ತ

ಉಪಕುಲಪತಿ ಹುದ್ದೆಗೆ ಅರ್ಜಿ ಕರೆಯಲು ಪದೇ ಪದೇ ಸಲಹೆ ನೀಡುತ್ತಿದ್ದರೂ ವಿದ್ಯಾರ್ಥಿಗಳ ಹಿತಕಾಯಲು ತೋರುತ್ತಿರುವ ನಿರಾಸಕ್ತಿ, ಉದಾಸೀನತೆ ಮಾಧ್ಯಮಗಳಲ್ಲಿ ತೋರುತ್ತಿರುವ ವೈಭವದ ಮರೀಚಿಕೆಗೆ ವ್ಯತಿರಿಕ್ತವಾಗಿದೆ ಮಾರ್ಮಿಕ ಮಾತಿನ ಮೂಲಕ ಚಾಟಿ ಬೀಸಿದ್ದಾರೆ.

ಉಪಕುಲಪತಿ ಹುದ್ದೆಗೆ ತಕ್ಷಣವೇ ಅರ್ಜಿಗಳನ್ನು ಕರೆಯಲು ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ನನ್ನ ಸಚಿವಾಲಯ ಹಾಗೂ ಮತ್ತು ನಾನು ಪದೇ ಪದೆ ಪತ್ರ ಬರೆದಿದ್ದೇವೆ. ಈ ಹುದ್ದೆ ಮೇ 25, 2024 ರಿಂದ ಖಾಲಿಯಿದ್ದು, ನಿಯಮಿತ ಹುದ್ದೆಗಳನ್ನು ದೀರ್ಘಕಾಲದವರೆಗೆ ಖಾಲಿ ಇಡದಂತೆ ಶೀಘ್ರವಾಗಿ ಅರ್ಜಿಗಳನ್ನು ಕರೆಯಲು ಸಂಬಂಧಿಸಿದ ಇಲಾಖೆಗೆ ಹಲವಾರು ಅನುಸರಣೆಗಳು ಮತ್ತು ಜ್ಞಾಪನೆಗಳನ್ನು ಕಳುಹಿಸಲಾಗಿದೆ.

ರಾಜ್ಯ ಸರ್ಕಾರ, ಯುಜಿಸಿ ಮತ್ತು ತಮ್ಮ ಸೆಕ್ರೆಟರಿಯೇಟ್‌ನಿಂದ ನಾಮನಿರ್ದೇಶಿತರನ್ನು ಒಳಗೊಂಡ ಶೋಧನಾ ಸಮಿತಿಯನ್ನು ಸಹ ರಚಿಸಲಾಗಿದೆ. ಆದರೆ, ರಾಜ್ಯ ಸರ್ಕಾರದಿಂದ ಅರ್ಜಿ ಕರೆದಿಲ್ಲ.

ಅಸ್ತಿತ್ವದಲ್ಲಿರುವ ಕಾಯ್ದೆ ಅನ್ವಯ ಕ್ರಮ

ರಾಜ್ಯ ಸರ್ಕಾರವು ಈ ನಡುವೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ (ತಿದ್ದುಪಡಿ) ಮಸೂದೆ-2024 ತಂದಿದೆ. ಮಸೂದೆಯ ಉದ್ದೇಶಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣಗಳು ಮತ್ತು ಅಗತ್ಯ ತಿದ್ದುಪಡಿಗಳಿಗಾಗಿ ಅದನ್ನು ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಲಾಗಿದೆ. ಹೊಸ ತಿದ್ದುಪಡಿಗಳನ್ನು ಒಪ್ಪುವ ತನಕ ಅಸ್ತಿತ್ವದಲ್ಲಿರುವ ಕಾಯಿದೆ ಜಾರಿಯಲ್ಲಿರುತ್ತದೆ. ಜತೆಗೆ ರಾಜ್ಯ ಸರ್ಕಾರವು ಅಸ್ತಿತ್ವದಲ್ಲಿರುವ ಕಾಯಿದೆ ಮತ್ತು ಅದರ ನಿಬಂಧನೆಗಳ ಆಧಾರದ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಬೇಕು.

ರಾಜ್ಯ ಸರ್ಕಾರ ವಿ.ವಿ.ಯ ಆಡಳಿತದಲ್ಲಿ ಸಕ್ರಿಯವಾಗಿ ಸುಧಾರಣೆ ತರಲು ಬಯಸಿದ್ದು, ವಿಧೇಯಕಕ್ಕೆ ತಿದ್ದುಪಡಿ ತಂದಿದೆ ಎಂದು ರಾಜ್ಯ ಸರ್ಕಾರದ ಸಚಿವರು ಮಾಧ್ಯಮಗಳಲ್ಲಿ ಹಾಗೂ ವಿಧಾನಸೌಧದಲ್ಲಿ ಹೇಳಿಕೆ ನೀಡಿದ್ದರೂ ಸಂಬಂಧಪಟ್ಟ ಸಚಿವರಾಗಲಿ, ಇಲಾಖೆಯಾಗಲಿ ವಿ.ವಿ.ಯ ಬೆಳವಣಿಗೆಗೆ ಕ್ರಿಯಾಶೀಲ ಕ್ರಮಗಳನ್ನು ಕೈಗೊಳ್ಳದಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ ಎಂದು ರಾಜ್ಯಪಾಲರು ಅಸಮಾಧಾನ ಹೊರ ಹಾಕಿದ್ದಾರೆ.

1 ತಿಂಗಳು ಗಡುವು ನೀಡಿದ ರಾಜ್ಯಪಾಲ

ಈಗಿರುವ ಕಾಯಿದೆಯಂತೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯದ ಉಪಕುಲಪತಿ ಹುದ್ದೆಗೆ ಅರ್ಜಿಗಳನ್ನು ಕರೆಯಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಹುದ್ದೆಯನ್ನು ದೀರ್ಘಕಾಲದವರೆಗೆ ಖಾಲಿ ಬಿಡಬೇಡಿ. ಈ ನಿಟ್ಟಿನಲ್ಲಿ 1 ತಿಂಗಳೊಳಗೆ ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ತಾವೇ ಅರ್ಜಿ ಕರೆಯಬೇಕಾಗುತ್ತದೆ ಎಂದು ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಸುದೀರ್ಘ ಪತ್ರದಲ್ಲಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net