

ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ನಡೆದ ಮೂರು ದಿನಗಳ ಚರ್ಚೆ ಬೆನ್ನಲ್ಲೇ ರಾಜ್ಯ ಸರ್ಕಾರ ಉತ್ತರದ ಸಮಗ್ರ ಅಭಿವೃದ್ಧಿಗಾಗಿ ಪಂಚ ತೀರ್ಮಾನ ಪ್ರಕಟಿಸಿದೆ. ‘ನಮ್ಮ ಬದ್ಧತೆ ಪ್ರಶ್ನಾತೀತ, ನಮ್ಮ ಗುರಿ ಜನಕಲ್ಯಾಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಗುರುವಾರ ಸಿಎಂ ಈ ಸಿಹಿ ಸುದ್ದಿ ಪ್ರಕಟಿಸಿದರು. ಮುಖ್ಯವಾಗಿ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಲೋಕೋಪಯೋಗಿ ಇಲಾಖೆಯಲ್ಲಿ ಅಪೆಂಡಿಕ್ಸ್- ಇ ನಡಿ 4 ಸಾವಿರ ಕೋಟಿ ರೂ. ಹಾಗೂ ಗ್ರಾಮೀಣ ರಸ್ತೆ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ. ನೀಡುವುದಾಗಿ ಘೋಷಿಸಿದರು.
ಈ ಘೋಷಣೆ ನಡುವೆಯೇ, ‘ಸರ್ಕಾರದ ಬೊಕ್ಕದಲ್ಲಿ ಹಣ ಇಲ್ಲ. ಆದರೂ ಆರು ಸಾವಿರ ಕೋಟಿ ರೂ. ಹಣ ಕೊಡುತ್ತೇವೆಂದು ಸಿಎಂ ಹೇಳಿದ್ದಾರೆ. ಈ ಹಣ ಎಲ್ಲಿಂದ ಹೊಂದಿಸುತ್ತಾರೆಂದು ಹೇಳಿಲ್ಲ, ಹಾಗೆಯೇ ಘೋಷಿಸಿರುವ ಇಷ್ಟು ಹಣ ಅಭಿವೃದ್ಧಿಗೆ ಸಾಲುವುದಿಲ್ಲ’ ಎಂದು ಪ್ರತಿಪಕ್ಷ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತು.
ಉತ್ತರ ಕರ್ನಾಟಕದ ಜನರ ಬಗ್ಗೆ ನಮ್ಮ ಬದ್ಧತೆಯನ್ನು ಪ್ರಶ್ನಿಸುವಂತಿಲ್ಲ. ಈ ಭಾಗದ ಜನರ ಬಗ್ಗೆ ನನಗೆ ವಿಶೇಷ ಪ್ರೀತಿ ಮತ್ತು ಕಾಳಜಿಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಗುರುವಾರ ಮಾತನಾಡಿದ ಅವರು, ಹದವಾದ ಮಳೆ, ಬಿಸಿಲುಗಳಿದ್ದರೆ ಚಿನ್ನವನ್ನೇ ದೇಶಕ್ಕಾಗಿ ಬೆಳೆದು ಕೊಡುತ್ತೇವೆ ಎಂಬ ಉತ್ಸಾಹ ಈ ಭಾಗದ ಜನರಿಗಿದೆ. ಈ ನೆಲದ ಕೂಡು ಬಾಳುವೆಯ ಸಂಸ್ಕೖತಿಯನ್ನು ನಾನು ಗೌರವಿಸುತ್ತೇನೆ. ನಾವು ಯಾವುದೇ ಬೆಲೆ ತೆತ್ತಾದರೂ ಇದನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಸಿಎಂ ಹೇಳಿದರು.
ಕಳೆದ ಡಿಸೆಂಬರ್ನಲ್ಲಿ ಇದೇ ಸದನದಲ್ಲಿ ನಾನು 8 ಭರವಸೆಗಳನ್ನು ನೀಡಿದ್ದೆ. ಉತ್ತರ ಕರ್ನಾಟಕದ ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳ 14 ಜಿಲ್ಲೆಗಳಿಗೆ ಸಂಬಂಧಿಸಿದಂತೆ 17,850 ಕೋಟಿ ರೂಪಾಯಿಗಳನ್ನು (ರೆಗ್ಯುಲರ್ ಅನುದಾನಗಳನ್ನು ಹೊರತುಪಡಿಸಿ) ನಂಜುಂಡಪ್ಪ ವರದಿಯ ಅಡಿಯಲ್ಲಿ ಖರ್ಚು ಮಾಡಲಾಗಿದೆ. ಎರಡೂ ಭಾಗದಲ್ಲಿರುವ ಅಸಮಾನತೆ ಹೋಗಲಾಡಿಸಲು ನಂಜುಂಡಪ್ಪ ಸಮಿತಿಯು 8 ವರ್ಷಗಳ ವಿಶೇಷ ಯೋಜನೆಯೊಂದನ್ನು ತಯಾರಿಸಿತ್ತು. ಅದರ ಪ್ರಕಾರ ಸರ್ಕಾರ ಒಟ್ಟು 31 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ವರದಿ ನೀಡಿತ್ತು. ಆದರೆ ಅದಕ್ಕಿಂತಲೂ ಹೆಚ್ಚಿನ ಅನುದಾನಗಳನ್ನು ನಿಡಲಾಗಿದೆ. ಅಭಿವೃದ್ಧಿ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿಲ್ಲ ಎಂದರು.
13 ಸಾವಿರ ಕೋಟಿ: ಕೆಕೆಆರ್ಡಿಬಿಗೆ 2013-14ರಿಂದ ಇದುವರೆಗೆ 19,878 ಕೋಟಿ ರೂ.ಗಳನ್ನು ಬಜೆಟ್ನಲ್ಲಿ ಒದಗಿಸಲಾಗಿದೆ. 13,229 ಕೊಟಿ ರೂ. ಬಿಡುಗಡೆ ಮಾಡಲಾಗಿದೆ. ಇದುವರೆಗೆ 11,500 ಕೋಟಿ ಖರ್ಚು ಮಾಡಲಾಗಿದೆ. ಮಂಡಳಿಯು ಬಿಡುಗಡೆಯಾದ ಅನುದಾನಕ್ಕೆ ಶೇ.85 ಆರ್ಥಿಕ ಪ್ರಗತಿ ಸಾಧಿಸಿದೆ. ಒಟ್ಟಾರೆ 35,885 ಕಾಮಗಾರಿಗಳು ಕೈಗೆತ್ತಿಕೊಂಡಿದ್ದು, 27,264 ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. 8,621 ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ. ಈ ಅಂಕಿಸಂಖ್ಯೆಗಳೇ ಪ್ರದೇಶದ ಅಭಿವೃದ್ಧಿಯನ್ನು ಸಾರಿ ಹೇಳುತ್ತಿವೆ ಎಂದು ಸಿಎಂ ಮಾಹಿತಿ ಹಂಚಿಕೊಂಡರು.
ಖಾಲಿ ಹುದ್ದೆ ಭರ್ತಿ: 371 ಜೆ ಕಾಯ್ದೆ ಆರಂಭದಿಂದ ಇದುವರೆಗೆ ವಿವಿಧ ಇಲಾಖೆಗಳಲ್ಲಿ ಈ ಭಾಗದವರಿಗೆ 1,09,416 ಹುದ್ದೆಗಳನ್ನು ನೇರ ನೇಮಕಾತಿಗೆ ಗುರುತಿಸಿದ್ದು, 79,985 ಹುದ್ದೆಗಳು ಭರ್ತಿಯಾಗಿವೆ. ಮುಂಬಡ್ತಿ ಮೀಸಲಿಗೆ ಗುರುತಿಸಿದ 38,705 ಹುದ್ದೆಗಳ ಪೈಕಿ 29,793 ಜನರಿಗೆ ಮುಂಬಡ್ತಿ ಭಾಗ್ಯ ನೀಡಲಾಗಿದೆ. ಇನ್ನು ಖಾಲಿ ಉಳಿದ ನೇರ ನೇಮಕಾತಿ ಮತ್ತು ಮುಂಬಡ್ತಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ಕೇಂದ್ರ, ಮೋದಿ ವಿರುದ್ಧ ಟೀಕೆ: ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಇದುವರೆಗೆ ಕೃಷ್ಣಾ ಐ-ತೀರ್ಪಿನ ಕುರಿತು ಗೆಜೆಟ್ ಪ್ರಕಟಣೆ ಹೊರಡಿಸಿಲ್ಲ ಎಂದು ಸಿಎಂ ಟೀಕಿಸಿದರು. ಹುಬ್ಬಳ್ಳಿಧಾರವಾಡ ಸೇರಿ ಹಲವು ನಗರ ಮತ್ತು ಪಟ್ಟಣ ಪ್ರದೇಶಗಳ ಜನರ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಹದಾಯಿ ಯೋಜನೆಯನ್ನು ರೂಪಿಸಲಾಗಿದೆ. ರಾಜ್ಯ ಸರ್ಕಾರ ಪರಿಷ್ಕೃತ ಯೋಜನೆಗೂ ಅನುಮೋದನೆ ನೀಡಿದೆ. ಆದರೆ ಕೇಂದ್ರ ಸರ್ಕಾರದ ಅಧೀನದ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಈ ಯೋಜನೆಗೆ ಅನುಮೋದನೆ ನೀಡದೆ ಸತಾಯಿಸುತ್ತಿದೆ. ಕರ್ನಾಟಕಕ್ಕೆ ದ್ರೋಹ ಮಾಡುತ್ತಿದೆ. ಈ ಯೋಜನೆಗೆ ಅನುಮೋದನೆ ನೀಡಿದ ಕೂಡಲೆ ನಾವು ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ಪ್ರಕಟಿಸಿದರು.
ಶೀಘ್ರ ಅನಾವರಣ: ಕೆಕೆಆರ್ಡಿಬಿ ಮಂಡಳಿಯ ಸಂಪೂರ್ಣ ಆರ್ಥಿಕ ನೆರವಿನೊಂದಿಗೆ ಕಲಬುರಗಿಯಲ್ಲಿ ನಿಮಾಣವಾಗುತ್ತಿ ರುವ 371 ಹಾಸಿಗೆಯ ಶ್ರೀ ಜಯದೇವ ಹೖದ್ರೋಗ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯ ಆಸ್ಪತ್ರೆಯ ಶಾಖಾ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು 262.20 ಕೋಟಿ ರೂ. ಪರಿಷ್ಕೖತ ಅಂದಾಜಿಗೆ ಈಗಾಗಲೆ ಅನುಮೋದನೆ ನೀಡಿದ್ದು, ಅಂತಿಮ ಘಟ್ಟದ ಕೆಲಸ ಭರದಿಂದ ಸಾಗಿದೆ. ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ತಾಂತ್ರಿಕ ನೆರವಿನೊಂದಿಗೆ ಕಲಬುರಗಿಯಲ್ಲಿ 221.52 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆಯ ಮಕ್ಕಳ ಆರೋಗ್ಯ ಘಟಕ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಜಿಮ್್ಸ ಆಸ್ಪತ್ರೆಯ ಆವರಣದಲ್ಲಿಯೇ 90 ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು 72 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆಗಳ ಸಾಮರ್ಥ್ಯದ ಕ್ಯಾನ್ಸರ್ ಆಸ್ಪತ್ರೆಯ ಕಟ್ಟಡ ನಿರ್ವಿುಸಲಾಗುತ್ತಿದ್ದು, ಈ ಮೂರು ಆಸ್ಪತ್ರೆಗಳ ಕಾಮಗಾರಿಗೆ ಈ ವರ್ಷ 75 ಕೋಟಿ ರೂ. ಅನುದಾನ ನೀಡಲು ನಿರ್ಧರಿಸಲಾಗಿದೆ ಎಂದರು.
ಚರ್ಚೆಗೆ ಉತ್ಸಾಹ: ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ 49 ಸದಸ್ಯರು 13 ಗಂಟೆ 11 ನಿಮಿಷ ಕಾಲ ಮಾತನಾಡಿದ್ದಾರೆ. ಕಾಂಗ್ರೆಸ್ಸಿನಿಂದ 26, ಬಿಜೆಪಿಯಿಂದ 19 ಮತ್ತು ಜೆಡಿಎಸ್ ನಿಂದ 4 ಜನ ಸದಸ್ಯರು ಮಾತನಾಡಿದ್ದಾರೆ. ಮಾತನಾಡಿದ ಎಲ್ಲರೂ ಉತ್ತರ ಕರ್ನಾಟಕದ ನೀರಾವರಿ, ಕೈಗಾರಿಕೆ, ಕೖಷಿ, ಶಿಕ್ಷಣ, ಆರೋಗ್ಯ , ಮೂಲಭೂತ ಸೌಕರ್ಯ ಮುಂತಾದವುಗಳ ಬಗ್ಗೆಯೇ ಮಾತನಾಡಿದ್ದರು.
ಖಂಡನಾ ನಿರ್ಣಯ ಮಂಡಿಸಿದ ಸಿಎಂ: ಅಮಿತ್ ಷಾ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡನಾ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿದರು. ಪ್ರತಿಪಕ್ಷದ ಘೋಷಣೆ ನಡುವೆಯೇ ಭಾಷಣ ಓದಿದ ಸಿಎಂ, ಆರ್ಎಸ್ಎಸ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದರು. ಅಮಿತ್ ಷಾ ರಾಜ್ಯಸಭೆಯಲ್ಲಿ ಮಾತನಾಡುತ್ತಾ ಅಂಬೇಡ್ಕರ್ ಅವರ ಬಗ್ಗೆ ಆಡಿರುವ ತುಚ್ಛೀಕರಣದ ಮಾತುಗಳನ್ನು ಇಡೀ ದೇಶವೇ ಕೇಳಿದೆ. ಮೊದಲಿಗೆ ಅಂಬೇಡ್ಕರ್ ಅವರ ಬಗ್ಗೆ ಭಾರತೀಯ ಜನತಾ ಪಕ್ಷದ ಅಂತರಂಗದ ಅಭಿಪ್ರಾಯವನ್ನು ಬಹಿರಂಗವಾಗಿ ಧೈರ್ಯದಿಂದ ದೇಶದ ಮುಂದೆ ತೆರೆದಿಟ್ಟದ್ದಕ್ಕಾಗಿ ಮತ್ತು ಕೊನೆಗೂ ನಿಮ್ಮ ಜೀವಮಾನದಲ್ಲಿ ಒಂದು ಸತ್ಯವನ್ನಾದರೂ ಹೇಳಿದ್ದಕ್ಕೆ ಅವರನ್ನು ನಾನು ಅಭಿನಂದಿಸುತ್ತೇನೆ ಎಂದು ಕುಟುಕಿದರು. ನಾನು ಮಾತ್ರ ಅಲ್ಲ, ಅಂಬೇಡ್ಕರ್ ಮತ್ತು ಅವರು ಕೊಟ್ಟಿರುವ ಸಂವಿಧಾನ ಇಲ್ಲದೆ ಇದ್ದರೆ ಕೇಂದ್ರ ಗೖಹ ಸಚಿವರಾಗಿ ಬದುಕು ಕೊಟ್ಟ ಮಹಾತ್ಮನನ್ನೇ ತುಚ್ಛೀಕರಿಸುವ ಅವಕಾಶ ಷಾ ಅವರಿಗೂ ಸಿಗುತ್ತಿರಲಿಲ್ಲ. ನಿಮ್ಮೂರಿನಲ್ಲಿ ಗುಜರಿ ವ್ಯಾಪಾರ ಮಾಡಿಕೊಂಡು ಇರಬೇಕಾಗುತ್ತಿತ್ತು ಎಂದು ಕಿಡಿಕಾರಿದರು.
ಪ್ರಮುಖ ಘೋಷಣೆಗಳು