ಪಂಚಮಿ ಹಬ್ಬ ಬಂದೈತಿ, ಜೋಕಾಲಿ ಕಟ್ಟೈತಿ…

gansh
Published on

ಶ್ರಾವಣ ಮಾಸದ ಜಿಟಿಜಿಟಿ ಮಳೆಯ ಜತೆಗೆ ಬರುವ ಜನಪದರ ಜೋಕಾಲಿ ಹಬ್ಬ ನಾಗರ ಪಂಚಮಿ. ಎಲ್ಲೆಡೆ ಈ ಹಬ್ಬದಾಚರಣೆ ಇದ್ದರೂ ಉತ್ತರ ಕರ್ನಾಟಕದಲ್ಲಿ ಇದು ನಾಲ್ಕು ದಿನಗಳ ವಿಶೇಷ ಹಬ್ಬವಾಗಿ ರೈತಾಪಿ ಕುಟುಂಬಗಳಲ್ಲಿ ಇಂದಿಗೂ ಆಚರಣೆಯಲ್ಲಿದೆ.

| ಗುರುಮೂರ್ತಿ ಯರಗಂಬಳಿಮಠ, ಅಮ್ಮಿನಬಾವಿ 

ದೇವಭೂಮಿಯಾಗಿರುವ ಭಾರತದ ಸಂಸ್ಕೃತಿಯಲ್ಲಿ ಶ್ರಾವಣ ಮಾಸದ ಶುರುವಾತಿನೊಂದಿಗೆ ಹಬ್ಬಗಳ ಸಾಲು ತೆರೆದುಕೊಳ್ಳುತ್ತದೆ. ಕೃಷಿ ಸಂಸ್ಕೃತಿಯಲ್ಲಿ ಉಳುವ ಭೂಮಿಯ ಮಣ್ಣಿನ ಕಣಕಣದಲ್ಲಿಯೂ ದೈವತ್ವವನ್ನು ರೈತರು ಕಂಡಿದ್ದಾರೆ. ಶ್ರಾವಣದಲ್ಲಿ ಮಣ್ಣಿನ ಪೂಜೆಯ ಹಬ್ಬವೆಂದರೆ, ನಾಗರಪಂಚಮಿ. ನಮ್ಮ ಜನಪದರು ಆಚರಿಸುವ ಅತ್ಯಂತ ಖುಷಿಯ ಹಬ್ಬಗಳಲ್ಲಿ ನಾಗಾರಾಧನೆಗೆ ಮೀಸಲಾದ ಈ ಹಬ್ಬವೂ ಒಂದು. ಪ್ರಪಂಚದ ವಿವಿಧ ದೇಶಗಳ ಸಂಸ್ಕೃತಿ-

ಪರಂಪರೆಗಳಲ್ಲಿ ನಾಗಪೂಜೆ ಇದೆ. ಪುರಾಣ, ಕಾವ್ಯ, ಮಹಾಕಾವ್ಯ ಮತ್ತು ಜಾನಪದದಲ್ಲಿ ನಾಗ ಮತ್ತು ಗರುಡರಿಗೆ ಸಂಬಂಧಿಸಿದ ಉಲ್ಲೇಖಗಳಿವೆ. ಹರಪ್ಪ- ಮೊಹೆಂಜೊದಾರೋ ಸಂಸ್ಕೃತಿಯಲ್ಲಿಯೂ ನಾಗಪೂಜೆ ಇದೆ. ಇದರ ಜತೆಗೆ ಬೇರೆ ಧರ್ಮಗಳ ವಿಗ್ರಹಗಳಲ್ಲಿಯೂ ನಾಗದೇವತೆಗೆ ಸ್ಥಾನವಿದೆ. ಪೌರಾಣಿಕ ಹಿನ್ನೆಲೆಯಲ್ಲಿ ಜನಮೇಜಯ ರಾಜನು ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೇ ಕಾರಣವೆಂದು ತಿಳಿದು ಭೂಲೋಕದಲ್ಲಿಯ ಎಲ್ಲ ಸರ್ಪಗಳ ನಾಶಕ್ಕಾಗಿ ಯಜ್ಞ ಆರಂಭಿಸಿದಾಗ ಆಸ್ತಿಕ ಋಷಿಯು ಈ ಯಜ್ಞ ನಿಲ್ಲಿಸಿ ಸರ್ಪ ಸಂತತಿಯ ನಾಶವನ್ನು ತಡೆಗಟ್ಟಿದ ದಿನವೇ ಶ್ರಾವಣ ಶುದ್ಧ ಪಂಚಮಿ. ಅದೇ ನಾಗರಪಂಚಮಿ ಎಂದು ಪ್ರಸಿದ್ಧವಾಯಿತು. ನಾಡಿನಾದ್ಯಂತ ಇದರ ಆಚರಣೆ ಇದ್ದರೂ ಉತ್ತರ ಕರ್ನಾಟಕದಲ್ಲಿ ಇದು 4 ದಿನಗಳ ಹಬ್ಬ. ಶ್ರಾವಣ ಶುದ್ಧ ತೃತೀಯ ದಿನ ರೊಟ್ಟಿ ಪಂಚಮಿ. ಶ್ರಾವಣ ಶುದ್ಧ ಚತುರ್ಥಿ ದಿನವನ್ನು ನಾಗಚತುರ್ಥಿ ಅಥವಾ ನಾಗಚೌತಿ ಎಂದು ಕರೆಯುತ್ತಾರೆ. ಈ ದಿನ ಕುಟುಂಬದ ಸದಸ್ಯರೆಲ್ಲರೂ ಆಕಳ ಹಾಲನ್ನು ಕರಕಿಯ ಗುಚ್ಛದಿಂದ ನಾಗಪ್ರತಿಮೆಗಳಿಗೆ ಮತ್ತು ಶಿಲ್ಪ ಗಳಿಗೆ ಎರೆಯುತ್ತಾರೆ. ಆಗ ಎಲ್ಲರೂ ಸೇರಿ ಶ್ರೀಗುರುವಿನ ಪಾಲು, ಅಜ್ಜನ ಪಾಲು, ಅಮ್ಮನ ಪಾಲು, ಅಪ್ಪನ ಪಾಲು, ಅವ್ವನ ಪಾಲು, ಅಣ್ಣನ ಪಾಲು, ತಮ್ಮನ ಪಾಲು, ಅಕ್ಕನ ಪಾಲು, ತಂಗಿಯ ಪಾಲು, ಸರ್ವಬಳ ಗದ ಪಾಲು... ಎಂದು ಹೇಳುತ್ತ ಹಾಲು ಹಾಕುವ ಪರಂಪರೆ ಜನಪದ ರಲ್ಲಿದೆ. ಇದು ಕೂಡಿ ಬಾಳುವುದನ್ನು ಸಂಕೇತಿಸುವ ವಿಶಿಷ್ಟ ಆಚರಣೆ.

ಶ್ರಾವಣ ಶುದ್ಧ ಪಂಚಮಿಯ ದಿನವೇ ನಾಗರಪಂಚಮಿ. ಈ ದಿನದಂದು ಹುತ್ತದ ಮಣ್ಣಿನಿಂದ ನಾಗಪ್ಪನ ಮೂರ್ತಿಯನ್ನು ಸಿದ್ಧಗೊಳಿಸಿ ಹಿಂದಿನ ದಿನ ಪೂಜಿಸಿದಂತೆ ಎಲ್ಲ ಪರಿಕರಗಳನ್ನು ಬಳಸಿ ವಿಧ್ಯುಕ್ತವಾಗಿ ಪೂಜಿಸುತ್ತಾರೆ. ಈ ದಿನದಂದು ಒಣ ಕೊಬ್ಬರಿ ಬಟ್ಟಲಿನಲ್ಲಿ ಆಕಳ ಹಾಲು ಹಾಕಿ ಕುಟುಂಬ ಸದಸ್ಯರೆಲ್ಲರ ಸ್ಮರಣೆಯೊಂದಿಗೆ ಕರಕಿ ಪತ್ರಿಯ ಗುಚ್ಛದಿಂದ ಹಾಲು ಎರೆದು ನಾಗಾರಾಧನೆ ಮಾಡುವ ಸಂಪ್ರದಾಯವಿದೆ.

ವರ್ಷ ತೊಡಕು: ನಾಗರ ಪಂಚಮಿ ಹಬ್ಬದ ಕೊನೆಯ ದಿನ, ಅಂದರೆ ಶ್ರಾವಣ ಶುದ್ಧ ಷಷ್ಟಿ ತಿಥಿಯನ್ನು ವರ್ಷತೊಡಕು ದಿನ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ರೈತಾಪಿ ವರ್ಗದಲ್ಲಿ ಈ ದಿನವನ್ನು ವಿಶಿಷ್ಟ ಶುಭ ದಿನವೆಂದೂ, ಜತೆಗೆ ಈ ದಿನಚರಿಯಲ್ಲಿ ಏನು ಘಟನೆಗಳು ನಡೆಯುತ್ತವೆಯೋ ಅವು ವರ್ಷದ ಉದ್ದಕ್ಕೂ ಮರುಕಳಿಸುತ್ತವೆ ಎಂಬ ಬಲವಾದ ನಂಬಿಕೆ ಇದೆ.

ಉಂಡಿ ತಿನ್ನು, ಜೋಕಾಲಿ ಜೀಕು : ನಾಗರ ಪಂಚಮಿ ಹಬ್ಬ ಎರಡು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಉಂಡಿ (ಲಾಡು) ತಿನ್ನುವುದು ಮತ್ತು ಜೋಕಾಲಿ ಜೀಕುವುದು. ಬೇಸನ್, ರವೆ, ಶೇಂಗಾ, ಎಳ್ಳು, ಬೂಂದಿ, ಗುಳ್ಳಡಕಿ ಮುಂತಾದ ಉಂಡಿಗಳ ಜತೆಗೆ ಅಳ್ಳಿಟ್ಟು ಮತ್ತು ತಂಬಿಟ್ಟು ಸಿಹಿ ಖಾದ್ಯಗಳನ್ನು ಸಿದ್ಧಗೊಳಿಸಿ ನಾಗಪ್ಪನಿಗೆ ನೈವೇದ್ಯ ಮಾಡುವುದು ಒಂದೆಡೆಯಾದರೆ, ಮನೆಯ ಒಳಗೆ ಮತ್ತು ಮರಗಳಿಗೆ ಜೋಕಾಲಿ ಕಟ್ಟಿ ಜೀಕುವುದು ಮತ್ತೊಂದು ವಿಶೇಷ. ‘ಪಂಚಮಿ ಹಬ್ಬ ಬಂದೈತಿ, ಜೋಕಾಲಿ ಕಟ್ಟೈತಿ| ಸುಯ್ಯಂತ ತೂಗಾಕ, ಬರತೀಯೇನ ತಂಗಿ ಹಳ್ಳಿಗೆ...’ ಎಂಬ ಜಾನಪದ ಹಾಡು ಜೋಕಾಲಿಗೆ ಸಂಬಂಧಿಸಿದಂತೆ ಜನಪ್ರಿಯವಾಗಿದೆ. ನಾಗರಪಂಚಮಿ ಹೆಣ್ಣು ಮಕ್ಕಳ ಹಬ್ಬವೆಂದೇ ಪ್ರಸಿದ್ಧಿ ಪಡೆದಿದೆ. ‘ಅಳ್ಳಿಟ್ಟು ತಂಬಿಟ್ಟು, ಮಾಡಿಟ್ಟ ಎಳ್ಳುಂಡಿ| ದಳ್ಳುರಿ ಕಣ್ಣು ಹಣಿಯವನ ಕೊರಳಾಗ| ನಾಗ ನಿನಗೆಡಿಯೋ ಕೈಮುಗಿದು...’ ಎಂಬ ಮತ್ತೊಂದು ಜನಪದ ಕಾವ್ಯವೂ ಪ್ರಸಿದ್ಧವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net