ರಾಜ್ಯ ಸರ್ಕಾರಕ್ಕೆ ನಿಲ್ಲದ ಮೀಸಲಾತಿ ತಲೆನೋವು; ಪಂಚಮಸಾಲಿಯ ಮತ್ತೊಂದು ಬಣದಿಂದಲೂ ವಿರೋಧ!

panchamasali samudaya
Published on

ಬೆಂಗಳೂರು: ಮೀಸಲಾತಿ ವಿಷಯದಲ್ಲಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಹೊಸ ತಲೆನೋವು ಶುರುವಾಗಿದೆ. ಪಂಚಮಸಾಲಿಯ ಇನ್ನೊಂದು ಬಣದಿಂದಲೂ‌ ಸರ್ಕಾರ ಘೋಷಣೆ ಮಾಡಿದ್ದ 2D ಮೀಸಲಾತಿಗೆ ವಿರೋಧ ವ್ಯಕ್ತವಾಗಿದ್ದು ಈಗ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ ಹಾಗಾಗಿದೆ.

ಮೊದಲಿಗೆ ಜಯಮೃತ್ಯುಂಜಯ ಸ್ವಾಮೀಜಿ ಬಣ, 2D ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿತ್ತು. ಅದಾದ ಬಳಿಕ ಈಗ ವಚನಾನಂದ ಸ್ವಾಮೀಜಿ‌ ಬಣ ಕೂಡ 2D ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರ, ಪಂಚಮಸಾಲಿ ಸಮುದಾಯದಲ್ಲೇ ಇರುವ ಒಡಕಿನ ಲಾಭ ಪಡೆಯಬಹುದು ಎಂದು ಲೆಕ್ಕ ಹಾಕಿತ್ತು. ಆದರೆ ಈಗ ವಚನಾನಂದ ಸ್ವಾಮೀಜಿಗಳ ಬಣದಿಂದಲೂ ವಿರೋಧ ವ್ಯಕ್ತ ಆಗಿರುವ ಹಿನ್ನೆಲೆಯಲ್ಲಿ ಈ ಪ್ಲ್ಯಾನ್​ ಉಲ್ಟಾ ಆಗಿದೆ ಎಂದೇ ಹೇಳಬಹುದು.

ಪಂಚಮಸಾಲಿ ಬಣಗಳ ಒಡಕಿನ ಲಾಭ ಪಡೆಯಲೆತ್ನಿಸಿದ್ದ ಸರ್ಕಾರದ ವಿರುದ್ಧ ಸದ್ಯ ಜಯಮೃತ್ಯುಂಜಯ ಸ್ವಾಮೀಜಿ ಅನಿರ್ದಿಷ್ಟವಧಿವರೆಗೆ ಪ್ರತಿಭಟನೆ ಮಾಡುತ್ತಿದ್ದಾರೆ. ಪಂಚಮಸಾಲಿ ಸಮುದಾಯವನ್ನು 2Aಗೆ ಸೇರಿಸುವವರೆಗೂ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಇನ್ನೊಂದೆಡೆ ವಚನಾನಂದ ಸ್ವಾಮೀಜಿ 2A ಮೀಸಲಾತಿ ಸಿಗುವವರೆಗೂ ಪೀಠಾರೋಹಣ ಮಾಡುವುದಿಲ್ಲವೆಂದು ಶಪಥ ಕೂಡ ಮಾಡಿದ್ದಾರೆ.

ಸಮುದಾಯದ ಇಬ್ಬರು ಸ್ವಾಮೀಜಿಗಳಿಂದಲೂ ಸರ್ಕಾರದ ಮೇಲೆ ಒತ್ತಡ ಉಂಟಾಗುತ್ತಿದ್ದು 2D ವರ್ಗ ಸೃಷ್ಟಿಸಿ ಮೀಸಲಾತಿ ತೂಗುಕತ್ತಿಯಿಂದ ಪಾರಾಗಿದ್ದ ಸರ್ಕಾರಕ್ಕೆ ಈಗ ಮತ್ತೆ ಸಂಕಟ ಶುರುವಾಗಿದೆ ಎಂದೇ ಹೇಳಬಹುದು. ಇದಲ್ಲದೆ ಸದ್ಯ ಯಾವುದೇ ತೀರ್ಮಾನ ಕೈಗೊಳ್ಳಬಾರದು ಎಂದು ನ್ಯಾಯಾಲಯ ಕೂಡ ಆದೇಶ ನೀಡಿದೆ. ಈ ತಡೆಯಾಜ್ಞೆಯನ್ನು ತೆರವುಗೊಳಿಸುವ ಹಾಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕಾದ ಒತ್ತಡ ಇನ್ನೊಂದೆಡೆ ಉಂಟಾಗಿದೆ. ಏನಾದರೂ ಕೆಲಸ ಮಾಡಲು ಕೋರ್ಟ್ ಬಿಡಲ್ಲ, ಸುಮ್ಮನಿರಲು ಸಮುದಾಯ ಬಿಡಲ್ಲ. ಹೀಗಾಗಿ ಸರ್ಕಾರ ಒತ್ತಡದ ಪರಿಸ್ಥಿತಿಯಲ್ಲಿ ಸಿಲುಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net