ಪಾನಮುಕ್ತ ಕರ್ನಾಟಕ ಮಾಡಲಿ

14 HBH 02
ಹಗರಿಬೊಮ್ಮನಹಳ್ಳಿಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಸಮಿತಿಗಳಿಂದ ಗಾಂಧಿ ಸ್ಮತಿ ಪಾನಮುಕ್ತರ ಅಭಿನಂದನೆ ಜನಜಾಗೃತಿ ಕಾರ್ಯಕ್ರಮ ನಡೆಯಿತು. ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಅಧಿಕಾರಿಗಳಾದ ಸಂತೋಷ, ನವೀನ್ ಕುಮಾರ, ಜನ ಜಾಗೃತಿ ವೇದಿಕೆ ರಾಜ್ಯ ಸಂಘಟನಾಧ್ಯಕ್ಷ ಬಾದಾಮಿ ನಟರಾಜ, ಜಿಲ್ಲಾಧ್ಯಕ್ಷ ಶಿವಪ್ಪ ನಾಯಕ ಕವಾಲಿ, ಉಪಾಧ್ಯಕ್ಷೆ ಶಿಲ್ಪಕಲಾ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ದೇಶ ಪಾನಮುಕ್ತವಾಗಬೇಕು ಎಂದು ಮಹಾತ್ಮ ಗಾಂಧೀಜಿ ಕನಸು ಕಂಡಿದ್ದು, ಅವರ ಕನಸು ನನಸಾಗಿಸಲು ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮದ್ಯವರ್ಜನ ಶಿಬಿರಗಳನ್ನು ರಾಜ್ಯ ವ್ಯಾಪಿ ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ ಎಂದು ಸಂಸ್ಥೆಯ ವಿಜಯನಗರ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.

ಪಟ್ಟಣದ ಶ್ರೀ ಕನ್ಯಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಸಮಿತಿಗಳಿಂದ ಸೋಮವಾರ ಹಮ್ಮಿಕೊಂಡಿದ್ದ ಗಾಂಧಿ ಸ್ಮತಿ ಪಾನಮುಕ್ತರ ಅಭಿನಂದನೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಡಿತದಿಂದ ಸಂಸಾರಗಳು ಬೀದಿಪಾಲಾಗುತ್ತವೆ.

ಮಾನಕ್ಕಿಂತ ಕುಡಿತ ದೊಡ್ಡದಲ್ಲ. ಕುಡಿತದ ಚಟಕ್ಕೆ ದಾಸರಾದವರು ಇದರಿಂದ ದೂರವಾದರೆ ಮತ್ತೆ ನವಜೀವನ ಕಟ್ಟಿಕೊಳ್ಳಲು ಸಾಧ್ಯ. ಎರಡು ಸಾವಿರ ಮದ್ಯವರ್ಜನ ಶಿಬಿರಗಳಲ್ಲಿ 1.70 ಲಕ್ಷಕ್ಕೂ ಅಧಿಕ ಜನರು ಪಾನ ಮುಕ್ತರಾಗಿದ್ದಾರೆ. ಎಲ್ಲ ಭಾಗ್ಯಗಳನ್ನು ಕೊಡುವ ರಾಜ್ಯ ಸರ್ಕಾರ ಗುಜರಾತ್ ರಾಜ್ಯದ ಮಾದರಿಯಲ್ಲಿ ಪಾನಮುಕ್ತ ರಾಜ್ಯವನ್ನಾಗಿ ಮಾಡಿದರೆ ಎಲ್ಲ ಭಾಗ್ಯಗಳನ್ನು ಕೊಟ್ಟಿದಕ್ಕೂ ಸಾರ್ಥಕವಾಗುತ್ತೆ ಎಂದರು.

ತಾಲೂಕು ಯೋಜನಾಧಿಕಾರಿ ಚಂದ್ರಶೇಖರ್ ಮಾತನಾಡಿ, ಸ್ವಾಸ್ಥ್ಯ ಸಂಕಲ್ಪ ಹಾಗೂ ಗಾಂಧೀಜಿ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ತಾಲೂಕು ಯೋಜನಾಧಿಕಾರಿ ಎಂ.ವಾಣಿ ಸುಜ್ಞಾನ ನಿಧಿ, ಪ್ರಮುಖರಾದ ಗುಂಡಪ್ಪ, ಹೊನ್ನೂರಪ್ಪ, ಮಲ್ಲಿಕಾರ್ಜುನ, ನೇತ್ರಾವತಿ, ರುದ್ರಮ್ಮ, ಬ್ರಹ್ಮಾನಂದ, ಸುಭಾಷ, ಚನ್ನಬಸಪ್ಪ, ಸಿದ್ದೇಶ್, ಕೃಷ್ಣಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net