

ಪಲಕ್ಕಾಡ್: ಎರಡು ದಿನಗಳ ಹಿಂದೆ ಕೇರಳದ ಪಲಕ್ಕಾಡ್ನಲ್ಲಿ ನಡೆದ ಒಂದು ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಮದುವೆಯಾಗಿ ಮೊದಲ ಬಾರಿ ಗಂಡನ ಮನೆಗೆ ಬಂದ ವಧು, ಅಲ್ಲಿನ ವಿಚಿತ್ರ ಸಂಸ್ಕೃತಿಯಿಂದ ಕಣ್ಣೀರು ಹಾಕಿದ ಪ್ರಸಂಗ ಜರುಗಿದೆ.
ಅಷ್ಟಕ್ಕೂ ನಡೆದಿದ್ದು ಏನೆಂದರೆ, ಮನೆಯ ಪ್ರವೇಶಕ್ಕೂ ಮುನ್ನ ನೂತನ ವಧು-ವರರಿಗೆ ಆರತಿ ಬೆಳಗಲಾಯಿತು. ಇನ್ನೇನು ವಧು, ಗಂಡನ ಮನೆಗೆ ಬಲಗಾಲು ಇಟ್ಟು ಪ್ರವೇಶ ಮಾಡಬೇಕು, ಅಷ್ಟರಲ್ಲಿ ಹಿಂದೆ ನಿಂತಿದ್ದ ಸಂಬಂಧಿಕರೊಬ್ಬರು ವಧು ಮತ್ತು ವರನ ತಲೆಯನ್ನು ಪರಸ್ಪರ ಡಿಕ್ಕಿ ಹೊಡೆಸುತ್ತಾರೆ.
ಅಂದಹಾಗೆ ಇದು ಅಲ್ಲಿನ ಸಂಪ್ರದಾಯವಂತೆ. ಹೊಸದಾಗಿ ಮದುವೆಯಾಗುವ ವಧು-ವರರ ತಲೆಯನ್ನು ಡಿಕ್ಕಿ ಹೊಡೆಸುವುದರ ಹಿಂದೆ ಒಳ್ಳೆಯ ಕಾರಣವಿದೆ ಎನ್ನುತ್ತಾರೆ. ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆಯಂತೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಡಿಕ್ಕಿ ಹೊಡೆದ ರಭಸಕ್ಕೆ ವಧು ಸ್ಥಳದಲ್ಲೇ ಕಣ್ಣೀರಾಕಿದ್ದಾಳೆ. ಈ ವೇಳೆ ವರ, ವಧುವನ್ನು ಸಮಾಧಾನ ಮಾಡಲು ಯತ್ನಿಸಿದ್ದಾನೆ. ಬಳಿಕ ಇಬ್ಬರು ಮನೆಯನ್ನು ಪ್ರವೇಶಿಸಿದ ದೃಶ್ಯ ವಿಡಿಯೋದಲ್ಲಿ ಇದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಚಿತ್ರ ಸಂಪ್ರದಾಯವ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ರಾಜ್ಯ ಮಹಿಳಾ ಆಯೋಗ ಸಹ ಸುಮಟೋ ಪ್ರಕರಣ ದಾಖಲಿಸಿಕೊಂಡಿದ್ದು, ತಕ್ಷಣ ವರದಿಯನ್ನು ಸಲ್ಲಿಸುವಂತೆ ಕೊಲ್ಲೆಂಗೋಡ್ ಠಾಣಾ ಪೊಲೀಸರಿಗೆ ಸೂಚನೆ ನೀಡಿದೆ.
ಜೂನ್ 25ರಂದು ಪಲಕ್ಕಾಡ್ನ ಪಲ್ಲಸ್ಸೇನಾ ಮೂಲದ ಸಚಿನ್ ಮತ್ತು ಮುಕ್ಕಮ್ ಮೂಲದ ಸಾಜ್ಲಾ ಮದುವೆಯಾದರು. ಈ ವಿಚಿತ್ರ ಆಚರಣೆಯ ವಿಡಿಯೋವನ್ನು ಸಾಜ್ಲಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೂ ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. (ಏಜೆನ್ಸೀಸ್)