ಸಾವೇ ತನ್ನ ಬೆನ್ನೇರಿದ್ದರೂ, ಭಾರತದ ವಿರುದ್ಧ ಪಿತೂರಿ ಮುಂದುವರೆಸಿದೆ ಪಾಕ್‌ ! ಸೋಂಕಿತರನ್ನು ಭಾರತಕ್ಕೆ ನುಸುಳಿಸಿದ್ದಾಯ್ತು, ಈಗ ಮತ್ತೊಂದು ಕುತಂತ್ರ

pakistan1
Published on

ನವದೆಹಲಿ: ಕರೊನಾ ಸೋಂಕಿತರನ್ನು ನಿಯಂತ್ರಿಸಲಾಗದೇ ತತ್ತರಿಸಿರುವ ಪಾಕಿಸ್ತಾನ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ತನ್ನ ಕುತಂತ್ರ ಬುದ್ಧಿಯನ್ನು ಬಿಟ್ಟಿಲ್ಲ. ಸೋಂಕಿತರನ್ನು ಭಾರತದತ್ತ ನುಸುಳಿಸಲು ಸರ್ವ ರೀತಿಯ ಪ್ರಯತ್ನ ಮಾಡುತ್ತಿದೆ ಎಂಬ ಆಘಾತಕಾರಿ ಮಾಹಿತಿ ನಿನ್ನೆಯಷ್ಟೇ ಸಿಕ್ಕಿತ್ತು. ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಪಾಕಿಸ್ತಾನ, ಭಾರತದ ವಿರುದ್ಧ ಸೈಬರ್‌ ವಾರ್‌ ಪ್ರಾರಂಭಿಸಿರುವುದು ಬೆಳಕಿಗೆ ಬಂದಿದೆ.

ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕೊಲ್ಲಿ ರಾಷ್ಟ್ರ ಸೇರಿದಂತೆ ವಿಶ್ವದಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದದ್ದನ್ನು ಸಹಿಸದ ಪಾಕಿಸ್ತಾನ, ಈಗ ಕೊಲ್ಲಿ ರಾಷ್ಟ್ರಗಳಲ್ಲಿ ಭಾರತದ ಮೇಲೆ ದ್ವೇಷ ಹುಟ್ಟಿಸುವಂಥ ಕೃತ್ಯಕ್ಕೆ ಕೈ ಹಾಕಿದ್ದು, ಸಾಮಾಜಿಕ ಜಾಲತಾಣಗಳನ್ನು ಅದು ವೇದಿಕೆಯಾಗಿಸಿಕೊಂಡಿದೆ. ಈ ಬಗ್ಗೆ ಭಾರತೀಯ ಗುಪ್ತಚರ ಸಂಸ್ಥೆಗಳು ಮಾಹಿತಿ ಕಲೆ ಹಾಕಿವೆ.

ಗಲ್ಫ್ ದೇಶಗಳಲ್ಲಿ ಭಾರತದ ಬಗ್ಗೆ ದ್ವೇಷ ತುಂಬಿಸಲು ಹಾಗೂ ಭಾರತದ ಕುರಿತು ಇಲ್ಲ ಸಲ್ಲದ ವದಂತಿಗಳನ್ನು ಹರಡಲು ಪಾಕಿಸ್ತಾನದ ಕುಖ್ಯಾತ ಪತ್ತೇದಾರಿ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಹಲವಾರು ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತೆರೆದಿದೆ ಸಂಸ್ಥೆ ಹೇಳಿದೆ.

ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದಾತ್ಮಕ ಹೇಳಿಕೆಗಳನ್ನು ನೀಡಲಾಗುತ್ತಿದೆ. ‘ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ, ಭಾರತದಲ್ಲಿ ಅವರ ಜೀವಕ್ಕೆ ಭಯವಿದೆ ಎಂಬಿತ್ಯಾದಿ ಹೇಳಿಕೆ ನೀಡುವ ಮೂಲಕ ವಿಶ್ವದಲ್ಲಿ ಭಾರತವನ್ನು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಮಾಡುವಲ್ಲಿ ಪಾಕಿಸ್ತಾನ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಗೃಹ ಸಚಿವಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ. ಕೊಲ್ಲಿ ರಾಷ್ಟ್ರಗಳಲ್ಲಿನ ಟ್ವಿಟರ್‌ ಇತ್ಯಾದಿ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಹ್ಯಾಕ್‌ ಮಾಡುವ ಮೂಲಕ ಹಾಗೂ ನಕಲಿ ಅಕೌಂಟ್‌ ಓಪನ್‌ ಮಾಡುವ ಮೂಲಕ ಅಲ್ಲಿಯ ಎಲ್ಲಾ ಜಾಲತಾಣಗಳಲ್ಲಿಯೂ ಭಾರತದ ವಿರುದ್ಧದ ಹೇಳಿಕೆಗಳ ಮಹಾಪೂರವನ್ನೇ ಐಎಸ್‌ಐ ಹರಿಸುತ್ತಿದೆ ಎಂದು ಗುಪ್ತಚರ ಸಂಸ್ಥೆ ಹೇಳಿದೆ.

ಮಂಗಳವಾರ ಮತ್ತು ಬುಧವಾರ ಟ್ರೆಂಡ್ ಆಗಿರುವ #ShameOnModi ಮತ್ತು #ChaosInIndia ಎಂಬ ಎರಡು ಹ್ಯಾಶ್‌ಟ್ಯಾಗ್‌ಗಳ ಹಿಂದೆ ಐಎಸ್‌ಐ ಕೈವಾಡವಿದೆ ಎಂದು ಭಾರತೀಯ ಭದ್ರತಾ ಸಂಸ್ಥೆಗಳು ಶಂಕಿಸಿವೆ. ಪಾಕಿಸ್ತಾನ ನಿರ್ವಹಿಸುತ್ತಿರುವ ಟ್ವಿಟ್ಟರ್ ಖಾತೆಯು ತನ್ನ ಹ್ಯಾಂಡಲ್ ಹೆಸರನ್ನು ಒಮಾನಿ ರಾಜಕುಮಾರಿಯಂತೆ ಬಿಂಬಿಸಿ ಮಂಗಳವಾರ ಭಾರತ ವಿರೋಧಿ ಹೇಳಿಕೆ ನೀಡುವ ಮೂಲಕ ಟ್ವೀಟ್ ಮಾಡಿದೆ.

ಕರೊನಾ ಸೋಂಕಿತರನ್ನು ಗಡಿಯೊಳಗೆ ನುಸುಳಿಸಿ, ಕಣಿವೆಯಲ್ಲಿ ಸೋಂಕು ಹರಡಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಭಾರಿ ಯತ್ನ ನಡೆಸುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್‌ಬಾಗ್‌ ಸಿಂಗ್‌ ನಿನ್ನೆಯಷ್ಟೇ ಹೇಳಿದ್ದರು.

ಗಡಿ ನಿಯಂತ್ರಣ ರೇಖೆ ಬಳಿ ಪಾಕ್‌ ಸೈನಿಕರು ಪ್ರತಿದಿನ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಯಲ್ಲಿ ನಿರತರಾಗಿದ್ದಾರೆ. ಇದರಿಂದ ಬಿಎಸ್‌ಎಫ್‌ ಯೋಧರ ಗಮನ ಬೇರೆಡೆ ಸೆಳೆದು ಸೋಂಕಿತರನ್ನು ಭಾರತದೊಳಗೆ ನುಸುಳಿಸಲು ಮುಂದಾಗುತ್ತಿದ್ದಾರೆ. ಇಂಥ ಸೋಂಕಿತರು ಕಣಿವೆಯಲ್ಲಿ ಬೇಕಾಬಿಟ್ಟಿ ಓಡಾಡಿ ವೈರಾಣುವನ್ನು ತೀವ್ರತರದಲ್ಲಿ ಹರಡಲು ಸಂಚು ಹೆಣೆದಿದ್ದಾರೆ'' ಎಂದು ಸಿಂಗ್‌ ಅವರು ತಿಳಿಸಿದ್ದರು.

ಅಂದಹಾಗೆ, ಪಾಕಿಸ್ತಾನದಲ್ಲಿ ಇಲ್ಲಿಯವರೆಗೆ ಕರೊನಾ ಸೋಂಕಿತರ ಸಂಖ್ಯೆ 10,531ಕ್ಕೆ ಏರಿದ್ದು, ಸೋಂಕಿನಿಂದ 224 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net