ಮದುವೆ ಸಮಾರಂಭದಲ್ಲಿ ಮದುಮಗನಿಗೆ ಹಿಗ್ಗಾಮುಗ್ಗಾ ಥಳಿತ; ಹಾಗೇ ಹೊಡೆದದ್ದು ಯಾರು, ಏಕೆ ಗೊತ್ತ..?

MARRIAGE
Published on

ಕರಾಚಿ: ಹಿಗ್ಗಾಮುಗ್ಗಾ ಹೊಡೆತ ತಿಂದ ಮದುಮಗನನ್ನು ಪೊಲೀಸರು ರಕ್ಷಿಸಿದ್ದಾರೆ. ಹೀಗೆ ಮೈ ಹಣ್ಣಾಗುವಂತೆ ಹೊಡೆತ ತಿಂದವನ ಮೊದಲ ಪತ್ನಿಯೇ ಥಳಿಸಿದ್ದು, ಆತ ಮೂರನೇ ಮದುವೆ ಸಮಾರಂಭದಲ್ಲಿ!

ಸೋಮವಾರ ರಾತ್ರಿ ಕರಾಚಿಯ ಸಖಿ ಹಸನ್ ಚೌರಂಗಿ ಪ್ರದೇಶದಲ್ಲಿ ಆಸಿಫ್ ರಫೀಕ್​​ನ ವಿವಾಹ ನಡೆಯುತ್ತಿತ್ತು, ಅಲ್ಲಿಗೆ ಆಗಮಿಸಿದ ಮೊದಲ ಮಡದಿ ಮದಿಹಾ ಮತ್ತು ಅವರ ಸಂಬಂಧಿಕರು ಮದುಮಗನ ಬಟ್ಟೆ ಹರಿದು ಥಳಿಸಿ, ಬಂದ ಅತಿಥಿಗಳ ಮುಂದೆ ಮಾನ ತೆಗೆದಿದ್ದಾರೆ. ಮೊದಲ ಹೆಂಡತಿ ಮದಿಹಾ ಅವಳನ್ನು ರಫೀಕ್​ 2014 ರಲ್ಲೇ ವಿವಾಹವಾಗಿದ್ದನು.

ಮದಿಹಾ ದೂರುವ ಪ್ರಕಾರ ಅವನು ತನ್ನ ಜತೆಗೆ ಜಿನ್ನಾ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ಮಹಿಳೆಯನ್ನೂ ಮದುವೆಯಾಗಿದ್ದಾನೆ. ಇದನ್ನು ಆಕೆ ವಿರೋಧಿಸಿದ ಮೇಲೆ ಕ್ಷಮೆ ಕೇಳಿ, ತನ್ನ ಜತೆ ಇರುತ್ತೇನೆ ಎಂದು ಆಣೆ ಪ್ರಮಾಣ ಮಾಡಿದ್ದ ಎಂದಿದ್ದಾಳೆ

ಥಳಿತಕ್ಕೊಳಗಾದ ರಫೀಕ್​ನನ್ನು ಪೊಲೀಸರು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದರು. ಆದರೆ ರಫೀಕ್​ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮದಿಹಾ ಸಂಬಂಧಿಕರು ಹಿಡಿದು ಮತ್ತೆ ಥಳಿಸಿದ್ದಾರೆ.

ಹೊಡೆತ ತಿಂದರೂ ರಫೀಕ್​ ಹೇಳುವುದೇನೆಂದರೆ, "ನಾನು ಈಗಾಗಲೇ ಮದಿಹಾಗೆ ತಲಾಕ್​ ನೀಡಿದ್ದೇನೆ. ಹಾಗಾಗಿ ನಾನು ಮದುವೆಯಾಗಲು ಯಾರ ಅನುಮತಿಯೂ ಬೇಡ. ಒಂದೇ ಬಾರಿ ನಾಲ್ಕು ಮದುವೆಯಾಗುತ್ತೇನೆ. ಇದು ನನ್ನ ಹಕ್ಕು" ಎಂದಿದ್ದಾನೆ.

ಮದಿಹಾ ಮತ್ತು ರಫೀಕ್​ ಅವರಿಗೆ ಕೋಟ್​ಗೆ ಹೋಗಲು ಪೊಲೀಸರು ಸಲಹೆ ನೀಡಿದ್ದಾರೆ. ರಫೀಕ್​ನ ವೈದ್ಯಕೀಯ ಪರೀಕ್ಷೆ ನಡೆಸಿ, ದೂರು ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net