ಮಹಾಕುಂಭದಲ್ಲಿ ಪಾಲ್ಗೊಂಡ ಪಾಕ್ ಭಕ್ತರು; ಪವಿತ್ರ ಸ್ನಾನದಲ್ಲಿ ಭಾಗಿ

Mahakumbh Mela
Published on

ಮಹಾಕುಂಭ ನಗರ: ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ಮಹಾಕುಂಭದ ವೈಭವದಿಂದ ಆಕರ್ಷಿತರಾದ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ 68 ಹಿಂದು ಭಕ್ತರು ಮೇಳದಲ್ಲಿ ಪಾಲ್ಗೊಳ್ಳಲು ಗುರುವಾರ ಪ್ರಯಾಗರಾಜ್​ಗೆ ಆಗಮಿಸಿದ್ದಾರೆ. ಆ ಪೈಕಿ ಸುಮಾರು 50 ಜನರಿಗೆ ಇದು ಮಹಾಕುಂಭದ ಮೊದಲ ಅನುಭವವಾಗಿದೆ.

ಕಳೆದ ವರ್ಷ ಏಪ್ರಿಲ್​ನಲ್ಲಿ 250 ಜನರ ತಂಡ ಪಾಕಿಸ್ತಾನದಿಂದ ಪ್ರಯಾಗರಾಜ್​ಗೆ ಆಗಮಿಸಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿತ್ತು ಎಂದು ಸಿಂಧ್​ನ ಭಕ್ತರಲ್ಲಿ ಒಬ್ಬರಾದ ಗೋವಿಂದ್ ರಾಮ್ ಮಖಿಜಾ ನೆನಪಿಸಿಕೊಂಡಿದ್ದಾರೆ. ಕಳೆದ ಎರಡು ಮೂರು ತಿಂಗಳಿಂದ ಮಹಾ ಕುಂಭದ ಬಗ್ಗೆ ಕೇಳಿದಾಗಿನಿಂದ ಇಲ್ಲಿಗೆ ಬರಲು ಕಾತರರಾಗಿದ್ದೆವು. ನಮಗೆ ತಡೆದುಕೊಳ್ಳಲು ಆಗಲೇ ಇಲ್ಲ ಎಂದು ಮಖಿಜಾ ಹೇಳಿದರು.

6 ಜಿಲ್ಲೆಗಳ ಜನರು: ಸಿಂಧ್ ಪ್ರಾಂತ್ಯದ ಘೋಟ್ಕಿ, ಸುಕ್ಕೂರ್, ಖೈರ್​ಪುರ್, ಶಿಕಾರ್​ಪುರ್, ಕಝರ್å್ ಕೋಟ್ ಮತ್ತು ಜತಬಾಲ್ ಜಿಲ್ಲೆಗಳ ಯಾತ್ರಿಗಳು ಭೇಟಿ ನೀಡುತ್ತಿದ್ದಾರೆ.

ಆಖಾಡ ತೊರೆಯಲು ಆರಂಭ: ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವ ಮಹಾ ಕುಂಭ ಫೆಬ್ರವರಿ 26ರಂದು ಅಧಿಕೃತವಾಗಿ ಸಂಪನ್ನಗೊಳ್ಳಲಿದೆಯಾದರೂ ಮಹಾಸಂಗಮದ ಭವ್ಯತೆಯ ಸಂಕೇತವಾದ 13 ಆಖಾಡಗಳು ಮಹಾಕುಂಭವನ್ನು ತೊರೆಯುವ ಪ್ರಕ್ರಿಯೆ ಆರಂಭವಾಗಿದೆ. ಆಖಾಡಗಳು ತಮ್ಮ ಧ್ವಜಗಳನ್ನು ಇಳಿಸುವುದು ಈ ಪ್ರಕ್ರಿಯೆಯ ಸಂಕೇತವಾಗಿದೆ.

ಕಢಿ ಪಕೋಡಾ ಭೋಜನ: ಸೋಮವಾರ ವಸಂತ ಪಂಚಮಿಯಂದು ನಡೆದ ಅಂತಿಮ ಪವಿತ್ರ ಸ್ನಾನದ ನಂತರ, ಸಂತರು ಸಾಂಪ್ರದಾಯಿಕ ‘ಕಢಿ ಪಕೋಡಾ’ ಊಟ ಮಾಡಿ ಆಖಾಡಗಳನ್ನು ತೊರೆಯಲು ಆರಂಭಿಸಿದ್ದಾರೆ. 13 ಆಖಾಡಗಳು ವಿವಿಧ ಪಂಥಗಳ ಸನ್ಯಾಸಿಗಳು, ಬೈರಾಗಿಗಳು ಮತ್ತು ಉದಾಸಿನ್​ಗಳಿಗೆ ಸೇರಿದ್ದಾಗಿವೆ. ಪಂಚ ನಿರ್ವಾಣಿ ಆಖಾಡದ ಬೈರಾಗಿ ಪಂಥದ 150 ಸಂತರು ಮಂಗಳವಾರವೇ ಆಖಾಡ ತೊರೆಯಲು ಆರಂಭಿಸಿದ್ದು ಸುಮಾರು 35 ಮಂದಿ ಈಗಾಗಲೇ ನಿರ್ಗಮಿಸಿದ್ದಾರೆ. ಜುನಾ ಆಖಾಡದ ನಾಗಾ ಸನ್ಯಾಸಿಗಳು ಶುಕ್ರವಾರ ಆಖಾಡ ತೊರೆಯಲು ಆರಂಭಿಸಲಿದ್ದಾರೆ.

ಧ್ವಜ ಅವರೋಹಣ: ಶುಕ್ರವಾರ ಕಢಿ ಪಕೋಡಾ ಭೋಜನ ಮಾಡಿದ ನಂತರ ಸಂತರು ‘ಧರ್ಮ ಧ್ವಜ’ವನ್ನು ಇಳಿಸಿ ಆಖಾಡ ತೊರೆಯಲು ಆರಂಭಿಸಲಿದ್ದಾರೆ ಎಂದು ಜುನಾ ಆಖಾಡದ ಅಂತಾರಾಷ್ಟ್ರೀಯ ವಕ್ತಾರ ಮಹಂತ ನಾರಾಯಣ ಗಿರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net