ಪಾಕಿಸ್ತಾನ್ ಜಿಂದಾಬಾದ್; ಖಾಸಗಿ ಎಫ್ಎಸ್ಎಲ್ ವರದಿ ಪರಿಗಣಿಸುವುದಿಲ್ಲ

dr gp
Published on

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಎಫ್ಎಸ್ಎಲ್ ವರದಿ ಪರಿಗಣಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಸದಾಶಿವ ನಗರದ ಅವರ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಖಾಸಗಿಯವರಿಗೆ ವಿಡಿಯೋ ಪರಿಶೀಲಿಸಲು ಲ್ಯಾಬೊರೋಟರಿ ಇದೆಯೆ? ಖಾಸಗಿಯಾಗಿ ವಿಡಿಯೋ ಪರಿಶೀಲಿಸಲು ಯಾವ ಅನುಮತಿ ಇತ್ತು? ಖಾಸಗಿಯಾಗಿ ಪರಿಶೀಲನೆಗೆ ಒಳಪಡಿಸಬಹುದೇ? ಯಾರು ಎನ್‌ಒಸಿ ಕೊಟ್ಟಿದ್ದರು? ಆರೋಪಿತ ವಿಡಿಯೋಗೆ ಸಂಬಂಧಿಸಿದ ವಿಚಾರ ಬಹಿರಂಗಗೊಳಿಸಲು ಅಧಿಕಾರವಿದೆಯೇ ಎಂಬ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಎಫ್ಎಸ್ಎಲ್ ಪೂರ್ಣ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು. ಈ ವರದಿಯನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ವರದಿ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಪದೇ ಪದೇ ವರದಿ ಮುಚ್ಚಿಡುತ್ತಿದ್ದಾರೆ ಎಂಬ ಆರೋಪ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

ಬಾಂಬ್ ಸ್ಫೋಟ ತನಿಖೆ ಚುರುಕು:

ಬೆಂಗಳೂರಿನ ಕುಂದಲಹಳ್ಳಿ ಬಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಎನ್‌ಐಎ ಹಾಗೂ ಎನ್‌ಎಸ್‌ಜಿ ತಂಡಗಳು ಆಗಮಿಸಿ ತನಿಖೆ ನಡೆಸುತ್ತಿವೆ. ಬಾಂಬ್ ಸ್ಫೋಟ ಘಟನೆ ನಡೆದ ಬಳಿಕ ಎನ್‌ಐಎ ಮತ್ತು ಎನ್‌ಎಸ್‌ಜಿ ತಂಡಗಳು ತನಿಖೆ ನಡೆಸುತ್ತಿವೆ. ನಮ್ಮ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಹೇಳಿದರು.

ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, ಸಲಹೆ, ಸೂಚನೆಗಳನ್ನು ನೀಡಲಾಗಿದೆ. ಪ್ರಕರಣ ತನಿಖೆ ನಡೆಯುತ್ತಿರುವುದರಿಂದ ಕೆಲವು ವಿಚಾರಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲಾಗುವುದಿಲ್ಲ ಎಂದರು.

ಸ್ಫೋಟ ಪ್ರಕರಣದ ಮೂಲ ಪತ್ತೆ ಹಚ್ಚಬೇಕಾಗಿದೆ. ವೈಯಕ್ತಿಕ ವಿಚಾರಕ್ಕೆ ಬಾಂಬ್ ಸ್ಫೋಟ ಮಾಡಲಾಗಿದೆಯೆ? ಯಾವುದಾದರೂ ಸಂಘಟನೆ ಕೈವಾಡ ಅದರ ಹಿಂದೆ ಇದೆಯೆ? ಎಂಬುದು ತನಿಖೆ ಪೂರ್ಣಗೊಂಡ ನಂತರ ಗೊತ್ತಾಗಲಿದೆ ಎಂದು ಡಾ.ಪರಮೇಶ್ವರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net