ಪಾಕಿಸ್ತಾನ ನಾಲ್ಕು ಭಾಗವಾಗುತ್ತಿತ್ತು...

rajna
Published on

ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತೀಯ ಸೇನೆ, ವಾಯುಪಡೆಯ ದಾಳಿಗೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ನೌಕಾಪಡೆಯೂ ಕಾರ್ಯಾಚರಣೆಗೆ ಇಳಿದಿದ್ದರೆ ಪಾಕಿಸ್ತಾನ ನಾಲ್ಕು ಭಾಗಗಳಾಗಿ ವಿಭಜನೆಯಾಗುತ್ತಿತ್ತು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಗೋವಾದ ಪಣಜಿಯಲ್ಲಿ ಇತ್ತೀಚೆಗೆ ನೌಕಾಪಡೆಗೆ ಸೇರ್ಪಡೆಯಾಗಿರುವ ಯುದ್ಧ ವಿಮಾನ ವಾಹಕ ನೌಕೆ ಐಎನ್​ಎಸ್ ವಿಕ್ರಾಂತ್​ನಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಮಾತನಾಡಿದ ರಕ್ಷಣಾ ಸಚಿವರು ‘1971ರ ಯುದ್ಧದ ಗೆಲುವಿನಲ್ಲಿ ಭಾರತೀಯ ನೌಕಾಪಡೆ ಪ್ರಮುಖ ಪಾತ್ರ ವಹಿಸಿತ್ತು. ಅಂದು ನೌಕಾಪಡೆಯ ಪರಾಕ್ರಮದಿಂದಾಗಿಯೇ ಪಾಕಿಸ್ತಾನ ಎರಡು ಭಾಗಗಳಾಗಿ ವಿಭಾಗವಾಗಿ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂದಿತ್ತು. ಈಗ ಆಪರೇಷನ್ ಸಿಂಧೂರ ವೇಳೆ ವಾಯುಪಡೆಯೂ ಪಾಕ್ ವಿರುದ್ಧ ದಾಳಿ ನಡೆಸಿದ್ದರೆ ಪಾಕಿಸ್ತಾನ ಎರಡಲ್ಲ, ನಾಲ್ಕು ಭಾಗಗಳಾಗಿ ವಿಭಜನೆಯಾಗುತ್ತಿತ್ತು. ಆಪರೇಷನ್ ಸಿಂಧೂರದ ಫಲಿತಾಂಶ ನಮ್ಮ ಮಿಲಿಟರಿ ಪರಾಕ್ರಮದ ‘ವಾಮ್ರ್ ಅಪ್’ ಮಾತ್ರ’. ಪಾಕಿಸ್ತಾನ ಮತ್ತೆ ನಮ್ಮ ದಾಳಿಯನ್ನು ಬಯಸಿದರೆ, ನೌಕಾಪಡೆಯೂ ದಾಳಿಯ ಮುಂದಾಳತ್ವ ವಹಿಸಲಿದೆ. ಆಗ ಪಾಕಿಸ್ತಾನದ ಪಾಡು ಏನಾಗಲಿದೆ ಎಂಬುದು ದೇವರಿಗೆ ಮಾತ್ರ ತಿಳಿದಿದೆ ಎಂದು ತಿಳಿಸಿದರು.

ನಮ್ಮ ಸಾವಿರಾರು ಕಿ.ಮೀ. ಉದ್ದದ ಕಡಲ ಗಡಿಯನ್ನು ರಕ್ಷಿಸುತ್ತಿರುವ ನೀವು, ಹಿಂದೂ ಮಹಾಸಾಗರದಲ್ಲಿನ ಪ್ರತಿಯೊಂದು ಚಲನವಲನವನ್ನೂ ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಿದ್ದೀರಿ. ಆಪರೇಷನ್ ಸಿಂಧೂರ ವೇಳೆ ನಿಮ್ಮ ಸಾಮರ್ಥ್ಯವನ್ನೂ ಪ್ರದರ್ಶಿಸಿದ್ದರೆ ಪಾಕಿಸ್ತಾನದ ಸ್ಥಿತಿ ಏನಾಗುತ್ತಿತ್ತು ಎಂದು ಹೇಳಬೇಕಿಲ್ಲ. ಆಪರೇಷನ್ ಸಿಂಧೂರ ವೇಳೆ ನಮ್ಮ ನೌಕಾಪಡೆ ತನ್ನ ಶೌರ್ಯವನ್ನು ಪ್ರದರ್ಶಿಸದಿರುವುದು ಪಾಕಿಸ್ತಾನದ ಅದೃಷ್ಟ ಎಂದು ರಾಜನಾಥ್ ಸಿಂಗ್ ನೌಕಾಪಡೆಯ ಸಾಮರ್ಥ್ಯವನ್ನು ಹೊಗಳಿದರು. ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ 96 ಗಂಟೆಗಳಲ್ಲಿ ನೌಕಾಪಡೆ ಅರಬ್ಬಿ ಸಮುದ್ರದಲ್ಲಿ ಕ್ಷಿಪಣಿಗಳ ಮತ್ತು ಟಾರ್ಪಿಡೋಗಳನ್ನು ಪರೀಕ್ಷೆ ನಡೆಸುವ ಮೂಲಕ ಹಲವು ಸುತ್ತಿನ ಸಮರಾಭ್ಯಾಸ ನಡೆಸಿತು. ಅತ್ಯಂತ ಕಡಿಮೆ ಸಮಯದಲ್ಲಿ ನೌಕಾಪಡೆ ಸಮರಾಭ್ಯಾಸಕ್ಕೆ ಸಿದ್ಧವಾಗಿದ್ದು, ನೌಕಾಪಡೆ ಮತ್ತು ಅದರ ಯೋಧರ ಸಮರ ಸನ್ನದ್ಧತೆಯನ್ನು ತೋರುತ್ತದೆ. ನಿಮ್ಮ ಯುದ್ಧ ಸನ್ನದ್ಧತೆಯನ್ನು ನೋಡಿಯೇ ಪಾಕಿಸ್ತಾನ ದಿಗ್ಭŠಮೆಗೊಂಡಿದೆ, ನಿಮ್ಮ ಸಿದ್ಧತೆ ಈಗಾಗಲೇ ಶತ್ರುಗಳ ನೈತಿಕ ಸ್ಥೈರ್ಯವನ್ನು ಮುರಿದಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.

2022 ರಲ್ಲಿ ಸ್ವದೇಶಿ ನಿರ್ವಿುತ ಐಎನ್​ಎಸ್ ವಿಕ್ರಾಂತ್ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿತ್ತು. ಪ್ರಸ್ತುತ ಮಿಗ್ 29 ಕೆ ಯುದ್ಧ ವಿಮಾನಗಳು ನೌಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ರಫೇಲ್ ಮರೈನ್ (ಎಂ) ಯುದ್ಧ ವಿಮಾನಗಳು ಯುದ್ಧ ನೌಕೆಯಲ್ಲಿ ನಿಯೋಜನೆಯಾಗಲಿವೆ. ಈ ಸಂಬಂಧ 26 ರಫೇಲ್ ವಿಮಾನ (1 ಆಸನದ 22 ಮತ್ತು 2 ಆಸನದ 4 ವಿಮಾನ)ಗಳ ಖರೀದಿ ಸಂಬಂಧ ಭಾರತ ಸರ್ಕಾರ ಫ್ರಾನ್ಸ್ ಜತೆ ಒಪ್ಪಂದ ಮಾಡಿಕೊಂಡಿದೆ. ರಫೇಲ್ ಯುದ್ಧ ವಿಮಾನಗಳು ಸೇರ್ಪಡೆಯಾದರೆ ವಿಕ್ರಾಂತ್ ನೌಕೆಯ ಬಲ ಮತ್ತಷ್ಟು ಹೆಚ್ಚಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net