

ನವದೆಹಲಿ: ಪಶ್ಚಿಮ ಗಡಿಯಲ್ಲಿ ಭಾರತೀಯ ಸೇನೆ ಅ. 30ರಿಂದ ನ. 10ರ ವರೆಗೆ ಬೃಹತ್ ಯುದ್ಧಾಭ್ಯಾಸ ನಡೆಸಲಿದ್ದು, ಈ ಬೆನ್ನಲ್ಲೇ ಪಾಕಿಸ್ತಾನ ಹೈಅಲರ್ಟ್ ಘೋಷಣೆ ಮಾಡಿದೆ. ಭಾರತದ ಭೂ, ವಾಯು ಮತ್ತು ನೌಕಾಪಡೆಗಳು ಇದರಲ್ಲಿ ಭಾಗಿಯಾಗಲಿವೆ. ಇದಕ್ಕೆ ತ್ರಿಶೂಲ್ ಎಂದು ನಾಮಕರಣ ಮಾಡಲಾಗಿದೆ. ಭಾರತ ಈ ಬಗ್ಗೆ ಅಧಿಸೂಚನೆ ಹೊರಡಿಸಿರುವ ಬೆನ್ನಲ್ಲೇ ಪಾಕಿಸ್ತಾನ ತನ್ನ ಮಧ್ಯ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಹಲವಾರು ವಾಯು ಸಂಚಾರ ಮಾರ್ಗಗಳನ್ನು ನಿರ್ಬಂಧಿಸಿದೆ. ಜಂಟಿ ಯುದ್ಧಾಭ್ಯಾಸವು ಆಕ್ರಮಣಕಾರಿ ಕುಶಲತೆ, ಉಭಯಚರ ಕಾರ್ಯಾಚರಣೆಗಳು, ಎಲೆಕ್ಟ್ರಾನಿಕ್ ಯುದ್ಧ, ಸೈಬರ್ ಕಾರ್ಯಾಚರಣೆ ಸೇರಿದಂತೆ ಹಲವು ರೀತಿಯ ಸಶಸ್ತ್ರ ಸಾಮರ್ಥ್ಯ ಬಳಕೆಯನ್ನು ಒಳಗೊಂಡಿರುತ್ತದೆ. ಇದಕ್ಕಾಗಿ 28,000 ಅಡಿಗಳ ವಾಯು ಪ್ರದೇಶವನ್ನು ಕಾಯ್ದಿರಿಸಲಾಗಿದೆ. ಇದು ನಿಯಮಿತ ಅಭ್ಯಾಸಕ್ಕೆ ದೊಡ್ಡ ಪ್ರದೇಶವಾಗಿದೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.
ಮಹತ್ವ ಏಕೆ?: ಗುಜರಾತ್ ಮತ್ತು ಸಿಂಧ್ ನಡುವಿನ 96 ಕಿ.ಮೀ ಜೌಗು ಪ್ರದೇಶವಾದ ಸರ್ ಕ್ರೀಕ್ನ ವ್ಯಾಪ್ತಿಯಲ್ಲಿ ಈ ಸಮರಾಭ್ಯಾಸ ನಡೆಯುತ್ತಿರುವುದು ಮಹತ್ವ ಪಡೆದುಕೊಂಡಿದೆ. ‘ಪಾಕಿಸ್ತಾನ ಸರ್ ಕ್ರೀಕ್ ವಲಯದಲ್ಲಿ ಕಾರ್ಯನಿರ್ವಹಿಸಲು ಧೈರ್ಯ ಮಾಡಿದರೆ ಭಾರತ ತಕ್ಕ ಉತ್ತರ ನೀಡಲಿದೆ. ಈ ಉತ್ತರವು ಇತಿಹಾಸ ಮತ್ತು ಭೌಗೋಳಿಕತೆ ಎರಡನ್ನೂ ಬದಲಾಯಿಸುವಷ್ಟು ಬಲವಾಗಿರುತ್ತದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಇತ್ತೀಚೆಗೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ಯುದ್ಧಾಭ್ಯಾಸ ಆರಂಭ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ಸೇನೆ, ತ್ರಿಶೂಲ್ ಸಮರಾಭ್ಯಾಸವು ಸಾಮಾನ್ಯ ಪ್ರಕ್ರಿಯೆ. ಭಾರತೀಯ ಸೇನೆಯ ಜಂಟಿ ಕಾರ್ಯಾಚರಣೆ ಸಾಮರ್ಥ್ಯಗಳ ಪರೀಕ್ಷೆಗಾಗಿ ಇದನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದೆ.