

ಇಸ್ಲಮಾಬಾದ್: ಪಾಕಿಸ್ತಾನ ಸೇನಾ ವಕ್ತಾರರಾಗಿದ್ದ ಮೇಜರ್ ಜನರಲ್ ಆಸಿಫ್ ಗಫೂರ್ ಸ್ಥಾನಕ್ಕೆ ಮೇಜರ್ ಜನರಲ್ ಬಾಬರ್ ಇಫ್ತಿಖರ್ ಅವರನ್ನು ನೇಮಿಸಲಾಗಿದೆ.
ಗಫೂರ್ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸ್ಥಾನ ಬದಲಾವಣೆ ಮಾಡಲಾಗಿದೆ. ಗಫೂರ್ ಅವರನ್ನು ಸೇನಾ ವಕ್ತಾರ ಸ್ಥಾನದಿಂದ ಕೆಳಗಿಳಿಸಿ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಒಕಾರಾದಲ್ಲಿರುವ ಪಾಕ್ ಸೇನೆಯ 40ನೇ ಕಾಲಾಳು ಪಡೆಯ ಕಮಾಂಡರ್ ಆಗಿ ನೇಮಿಸಲಾಗಿದೆ.
ಅಂತರ ಸೇವೆಯ ಸಾರ್ವಜನಿಕ ಸಂಬಂಧ ವಿಭಾದ ಮುಖ್ಯಸ್ಥರಾಗಿದ್ದ ಮೇಜರ್ ಜನರಲ್ ಬಾಬರ್ ಇಫ್ತಿಖರ್ರನ್ನು ಸೇನಾ ವಕ್ತಾರ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಐಎಸ್ಪಿಆರ್ ವೆಬ್ಸೈಟ್ ಪ್ರಕಾರ ಮೇಜರ್ ಜನರಲ್ ಗಫೂರ್ 1988ರಿಂದ ಪಾಕ್ ಸೇನೆಯಲ್ಲಿ ಸೇವೆ ಆರಂಭಿಸಿದರು. ಮಾಸ್ಟರ್ ಡಿಗ್ರಿ ಪಡೆದಿರುವ ಗಫೂರ್ ಅವರನ್ನು 2016 ಡಿಸೆಂಬರ್ನಲ್ಲಿ ಐಎಸ್ಪಿಆರ್ ಡೈರೆಕ್ಟರ್ ಜನರಲ್ ಆಗಿ ನೇಮಿಸಲಾಯಿತು.
ಪಾಕ್ ಸೇನಾ ವಕ್ತಾರರಾಗಿ ಆಯ್ಕೆಯಾದ ಬಳಿಕ ಗಫೂರ್ ಸಾಕಷ್ಟು ಪ್ರಮಾದಗಳನ್ನು ಎಸಗಿರುವ ಇತಿಹಾಸವಿದೆ. ಅದರಲ್ಲೂ ಭಾರತ ಬಗ್ಗೆ ಮಾತನಾಡುವಾಗ ಸಾಕಷ್ಟು ಎಡವಟ್ಟುಗಳನ್ನು ಗಫೂರ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿಯನ್ನು ಅನೇಕ ಬಾರಿ ಶೇರ್ ಮಾಡಿಕೊಂಡು ನಗೆಪಾಟಿಲಿಗೆ ಗುರಿಯಾಗಿದ್ದಾರೆ.
ಒಮ್ಮೆ ಪಾಕಿಸ್ತಾನ ಯುವಕರನ್ನು ಹೊಗಳಲು ಹೋಗಿ ಗಫೂರ್ ಟ್ರೋಲ್ ಆಗಿದ್ದರು. ತಮ್ಮ ಟ್ವಿಟರ್ನಲ್ಲಿ "ಪಾಕಿಸ್ತಾನ ಯುವಕರು ತಮ್ಮ ತಾಯಿನೆಲದ ಬಗೆಗಿರುವ ಜವಾಬ್ದಾರಿಯನ್ನು ಚೆನ್ನಾಗಿ ಅರಿತಿದ್ದಾರೆ. ದೇಶಪ್ರೇಮವನ್ನು ಕೊಂಡುಕೊಳ್ಳಲಾಗುವುದಿಲ್ಲ. ಅದು ಅನುವಂಶೀಯವಾಗಿರುತ್ತದೆ ಎಂದು ಬರೆದುಕೊಂಡಿದ್ದರು. ಅದರಲ್ಲೂ ಇಂಗ್ಲಿಷ್ನಲ್ಲಿ "Genes" ಎಂದು ಬರೆಯಲು "Jeans" ಎಂದು ಬರೆದು ಟ್ರೋಲ್ಗೆ ಗುರಿಯಾಗಿದ್ದರು. (ಏಜೆನ್ಸೀಸ್)