

ಲಡಾಖ್: ಪಾಕಿಸ್ತಾನವು ತನ್ನ ಈ ಹಿಂದಿನ ಎಲ್ಲಾ ಕೆಟ್ಟ ಪ್ರಯತ್ನಗಳಲ್ಲಿ ವಿಫಲವಾಗಿದೆ. ಆದರೆ ಅದರ ಇತಿಹಾಸದಿಂದ ಪಾಕ್ ಏನನ್ನೂ ಕಲಿತಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತವು 25ನೇ ಕಾರ್ಗಿಲ್ ವಿಜಯ ದಿವಸವನ್ನು ಶುಕ್ರವಾರ (ಜುಲೈ 26) ಆಚರಿಸುತ್ತಿದೆ. ವಾರ್ಷಿಕೋತ್ಸವದ ಅಂಗವಾಗಿ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ಯೋಧರಿಗೆ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಪಾಕಿಸ್ತಾನವು ಈ ಹಿಂದೆ ಮಾಡಿದ ಎಲ್ಲಾ ಪ್ರಯತ್ನಗಳನ್ನು ಎದುರಿಸಬೇಕಾಗಿತ್ತು. ಅದು ಭಯೋತ್ಪಾದನೆಯ ಸಹಾಯದಿಂದ ಪ್ರಾಕ್ಸಿ ಯುದ್ಧದ ಸಹಾಯದಿಂದ ತನ್ನನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಆದರೆ ಇಂದು ನಾನು ಮಾತನಾಡುವಾಗ ಭಯೋತ್ಪಾದನೆಯ ಮಾಸ್ಟರ್ಸ್ ಈ ಧ್ವನಿಯನ್ನು ನೇರವಾಗಿ ಕೇಳುತ್ತಿದ್ದಾರೆ. ಭಯೋತ್ಪಾದನೆಯ ಪೋಷಕರಿಗೆ ನಾನು ಹೇಳಲು ಬಯಸುತ್ತೇನೆ ಅವರ ದುಷ್ಕೃತ್ಯಗಳು ಎಂದಿಗೂ ಯಶಸ್ವಿಯಾಗುವುದಿಲ್ಲ. ನಮ್ಮ ಸೈನಿಕರು ಅದನ್ನು ಹತ್ತಿಕ್ಕುವ ಮೂಲಕ ಶತ್ರುಗಳಿಗೆ ತಕ್ಕ ಉತ್ತರ ಕೊಡುತ್ತಾರೆ ಎಂದು ಎಚ್ಚರಿಸಿದರು.
1999ರ ಕಾರ್ಗಿಲ್ ಯುದ್ಧವನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಕಾರ್ಗಿಲ್‌ನಲ್ಲಿ ನಾವು ಯುದ್ಧವನ್ನು ಗೆದ್ದಿದ್ದೇವೆ ಮಾತ್ರವಲ್ಲ, ಸತ್ಯ, ಸಂಯಮ ಮತ್ತು ಶಕ್ತಿಯ ಅದ್ಭುತ ಪ್ರದರ್ಶನವನ್ನೂ ನೀಡಿದ್ದೇವೆ ಎಂದು ಹೇಳಿದರು. ಆ ಸಮಯದಲ್ಲಿ ಭಾರತ ಶಾಂತಿಗಾಗಿ ಪ್ರಯತ್ನಿಸುತ್ತಿತ್ತು ಎಂಬುದು ತಿಳಿದಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಮತ್ತೊಮ್ಮೆ ತನ್ನ ಅಪನಂಬಿಕೆಯ ಮುಖವನ್ನು ತೋರಿತು. ಆದರೆ ಸತ್ಯದ ಮುಂದೆ ಅಸತ್ಯ ಮತ್ತು ಭಯೋತ್ಪಾದನೆಗೆ ಸೋಲಾಯಿತು ಎಂದು ಹೇಳಿದರು.
ಲಡಾಖ್ನ ಕಾರ್ಗಿಲ್ನ ಹಿಮಾವೃತ ಎತ್ತರದ ಮೇಲೆ ಸುಮಾರು ಮೂರು ತಿಂಗಳ ಸುದೀರ್ಘ ಯುದ್ಧದ ನಂತರ ಪಾಕಿಸ್ತಾನದ ವಿರುದ್ಧ ಭಾರತವು ವಿಜಯ ಸಾಧಿಸಿತು. ಭಾರತೀಯ ಸೇನೆಯು ಆಪರೇಷನ್ ವಿಜಯ್ನ ಯಶಸ್ಸನ್ನು 1999 ಜುಲೈ 26ರಂದು ಘೋಷಿಸಿತು. ಭಾರತವು ವಿಜಯ ಸಾಧಿಸಿದ ಸ್ಮರಣಾರ್ಥ ಈ ದಿನವನ್ನು ಕಾರ್ಗಿಲ್ ವಿಜಯ ದಿವಸ್ ಎಂದು ಆಚರಿಸಲಾಗುತ್ತದೆ.(ಏಜೆನ್ಸೀಸ್)