ಮುಂಬೈ: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದ ರೆಡ್ ಅಲರ್ಟ್ ಅನ್ನು ಉಲ್ಲೇಖಿಸಿ ಮುಂಬೈ ನಿವಾಸಿಗಳಿಗೆ ಮನೆಯೊಳಗೆ ಇರುವಂತೆ ಪೊಲೀಸರು ಶುಕ್ರವಾರ (ಜುಲೈ 26) ಸೂಚಿಸಿದ್ದಾರೆ. ಅಗತ್ಯವಿದ್ದಲ್ಲಿ ಮಾತ್ರ ಹೊರಗಡೆ ಬರುವಂತೆ ಹೇಳಿದ್ದಾರೆ. ಅಲ್ಲದೆ ತನ್ನ ವ್ಯಾಪ್ತಿಯ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳು ಎಂದಿನಂತೆ ನಡೆಯಲಿವೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಹೇಳಿದೆ.
ಇದನ್ನು ಓದಿ: ಮಾನನಷ್ಟ ಮೊಕದ್ದಮೆ; ಉತ್ತರ ಪ್ರದೇಶ ಕೋರ್ಟ್ಗೆ ಹಾಜರಾಗಲಿರುವ ರಾಹುಲ್ಗಾಂಧಿ
ರೆಡ್ ಅಲರ್ಟ್ ನೀಡಿರುವ ಐಎಂಡಿ ದಿನವಿಡೀ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಮಹಾಮಳೆಯಿಂದಾಗಿ ನಗರದಲ್ಲಿ ಸಂಚಾರ ದಟ್ಟಣೆ, ಜಲಾವೃತ ಮತ್ತು ಸಾರ್ವಜನಿಕರ ಪ್ರಯಾಣಕ್ಕೆ ಅಡ್ಡಿಯುಂಟಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಅಗತ್ಯವಿರುವವರೆಗೂ ಎಲ್ಲಾ ನಿವಾಸಿಗಳು ಮನೆಯೊಳಗೆ ಇರಿ, ದಯವಿಟ್ಟು ಸುರಕ್ಷಿತವಾಗಿರಿ ಎಂದು ಮುಂಬೈ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಯಾವುದೇ ತುರ್ತು ಸಂದರ್ಭಗಳಲ್ಲಿ 100ಕ್ಕೆ ಕರೆ ಮಾಡುವಂತೆ ಸಲಹೆ ನೀಡಲಾಗಿದೆ.
ಶಾಲೆ ಮತ್ತು ಕಾಲೇಜು ರಜೆಗಳಿಗೆ ಸಂಬಂಧಿಸಿದಂತೆ ಯಾವುದೇ ಇತರ ಮಾಹಿತಿ ಅಥವಾ ವದಂತಿಗಳನ್ನು ನಂಬಬೇಡಿ. ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಹೊರಡಿಸುವ ಅಧಿಕೃತ ಮಾಹಿತಿಯನ್ನು ಮಾತ್ರ ಅವಲಂಬಿಸುವಂತೆ ಪಾಲಕರಿಗೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಶಾಲೆಗಳು ಮತ್ತು ಕಾಲೇಜುಗಳ ನಿರ್ವಹಣೆಯೊಂದಿಗೆ ಸಂಪರ್ಕದಲ್ಲಿರಲು ನಾಗರಿಕ ಆಡಳಿತವು ಸೂಚಿಸಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಮುಂಬೈ ನಗರದಲ್ಲಿ 44 ಮಿ.ಮೀ, ಪೂರ್ವ ಉಪನಗರಗಳಲ್ಲಿ 90 ಮಿ.ಮೀ ಮತ್ತು ಪಶ್ಚಿಮ ಉಪನಗರಗಳಲ್ಲಿ 89 ಮಿ.ಮೀ ಮಳೆ ದಾಖಲಾಗಿದೆ. ರಸ್ತೆಗಳು ಜಲಾವೃತಗೊಂಡಿದ್ದರಿಂದ ಮಳೆ ನೀರು ಮನೆಗಳಿಗೆ ನುಗ್ಗಿದೆ. ಜಲಾವೃತವಾದ ರಸ್ತೆಗಳು ತೀವ್ರ ಸಂಚಾರ ದಟ್ಟಣೆಗೆ ಕಾರಣವಾಯಿತು.(ಏಜೆನ್ಸೀಸ್)
ರಾಷ್ಟ್ರಪತಿ ಭವನದ ದರ್ಬಾರ್ ಹಾಲ್, ಅಶೋಕ ಹಾಲ್ನ ಮರುನಾಮಕರಣ ಮಾಡಿದ ಸರ್ಕಾರ