

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸುವ ನೆಪದಲ್ಲಿ ದೇಶಾದ್ಯಂತ ನಡೆದ ಹಿಂಸಾಚಾರದ ಹಿಂದೆ ಶತ್ರುರಾಷ್ಟ್ರ ಪಾಕಿಸ್ತಾನದ ಕೈವಾಡವಿರುವುದು ಬಟಾಬಯಲಾಗಿದೆ. ಗಲಭೆಗೆ ಸಂಚು ರೂಪಿಸುವ ಜತೆಯಲ್ಲೇ ಸಂಪೂರ್ಣ ಹಣಕಾಸು ನೆರವು ನೀಡಿರುವ ಕುರಿತಂತೆ ಭಾರತೀಯ ಗುಪ್ತಚರ ಇಲಾಖೆಗೆ ಸಾಕಷ್ಟು ಸಾಕ್ಷ್ಯಗಳೂ ಲಭ್ಯವಾಗಿರುವುದಾಗಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಜಿನೀವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ದೆಹಲಿಯಲ್ಲಿ ನಡೆದ ಗಲಭೆಯನ್ನು 2002ರಲ್ಲಿ ಗುಜರಾತ್ನಲ್ಲಿ ನಡೆದ ಗಲಭೆಯಂತೆ ಬಿಂಬಿಸಲು ಪಾಕಿಸ್ತಾನ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ ಎಂಬುದು ಗುಪ್ತದಳದ ವಾದ.
ಸಿಎಎ ಪ್ರತಿಭಟನೆ ವಿಚಾರವಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ವಿನಿಮಯವಾಗಿರುವ ದೂರವಾಣಿ ಕರೆಗಳನ್ನು ಗುಪ್ತಚರ ಇಲಾಖೆ ಪತ್ತೆ ಮಾಡಿದೆ. ಇದರಲ್ಲಿ ಮಾ.3 ಮತ್ತು 4 ರಂದು ಆಯೋಜಿಸಲಾಗಿದ್ದ ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಹೆಚ್ಚು ಜನರನ್ನು ಸೇರಿಸದಿರುವ ವಿಚಾರವಾಗಿ ಸುದೀರ್ಘ ಮಾತುಕತೆ ನಡೆದಿರುವುದಾಗಿ ತಿಳಿದು ಬಂದಿದೆ.
ಸಂಚು ವಿಫಲ, ಮುಖಭಂಗ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸದ ವೇಳೆ ಹಿಂಸಾಚಾರ ತೀವ್ರಗೊಳಿಸುವ ಮೂಲಕ ಸಿಎಎ ಪ್ರತಿಭಟನೆಯನ್ನು ಅಂತಾರಾಷ್ಟ್ರೀಯ ವಿಷಯವಾಗಿಸಬೇಕೆಂಬ ಸಂಚುಕೋರರ ಲೆಕ್ಕಾಚಾರವೂ ತಲೆಕೆಳಗಾಗಿದೆ. ಸ್ವತಃ ಟ್ರಂಪ್ ಅವರೇ ಸಿಎಎ ಭಾರತದ ಆಂತರಿಕ ವಿಚಾರವಾಗಿದ್ದು, ಅವರೇ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆಂದು ಹೇಳಿಕೆ ನೀಡಿದ ಬಳಿಕ ದೆಹಲಿ ಚಿತ್ರಣವೇ ಬದಲಾಯಿತು.
ಪೊಲೀಸರು ಹಾಗೂ ಕೇಂದ್ರ ಸರ್ಕಾರದ ಕಠಿಣ ಕ್ರಮದಿಂದಾಗಿ ಹಿಂಸೆ ಕಿಡಿ ಆರಿತಲ್ಲದೆ, ಪುಂಡರು ಹೆದರಿ ಗೂಡು ಸೇರಿಕೊಂಡರು. ಮತ್ತೊಂದೆಡೆ ರಾಷ್ಟ್ರ ರಾಜಧಾನಿಯ ವಿವಿಧೆಡೆ ನಡೆಯುತ್ತಿದ್ದ ಪ್ರತಿಭಟನೆ ಕ್ಯಾಂಪ್ಗಳು ಬಾಗಿಲು ಮುಚ್ಚಿವೆ. ಅಷ್ಟರ ಮಟ್ಟಿಗೆ ಭಾರತ ವಿರೋಧಿ ಸಂಚು ವಿಫಲಗೊಂಡಿದೆ.
ಕಾಣದ ಕೈಗಳ ಹಿಂದೆ: ದೆಹಲಿಯನ್ನು ಹೊತ್ತಿ ಉರಿಸಿದ ಹಿಂಸಾಕಿಡಿಯ ಹಿಂದೆ ಕಾಣದ ಕೈಗಳ ಕೈವಾಡವಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ಉತ್ತರ ಪ್ರದೇಶ, ಬಂಗಾಳ ಸೇರಿದಂತೆ ಬೇರೆ ರಾಜ್ಯಗಳ ಪುಂಡರ ಹೆಜ್ಜೆ ಗುರುತುಗಳು ಹಿಂಸಾ ಪ್ರದೇಶದಲ್ಲಿ ಗೋಚರಿಸಿವೆ. ಇದಲ್ಲದೆ ಹಿಂಸೆ ಪ್ರಕರಣ ಸಂಬಂಧ ಜೈಲು ಸೇರಿರುವ ಆಮ್ ಆದ್ಮಿ ಪಕ್ಷದ ಕಾಪೋರೇಟರ್ ತಾಹಿರ್ ಹುಸೇನ್ ನಿವಾಸದ ಸುತ್ತಲಿನ ಸಿಸಿ ಕ್ಯಾಮರಾಗಳು ಸೆರೆ ಹಿಡಿದಿರುವ ಪುಂಡರ ಗುರುತು ಇಡೀ ಗಲಭೆ ಉದ್ದೇಶಪೂರ್ವಕ ಎಂಬುದಕ್ಕೆ ಪುರಾವೆ ಒದಗಿಸಿವೆ.
ಪ್ರಚೋದನೆ: ಪಾಕಿಸ್ತಾನ ಹಾಗೂ ಅದರ ಆಪ್ತ ಇಸ್ಲಾಮಿಕ್ ರಾಷ್ಟ್ರಗಳು ಪ್ರಚೋದನಕಾರಿ ಭಾಷಣ ಮತ್ತು ವಿಡಿಯೋಗಳ ಮೂಲಕ ಉತ್ತರ ಭಾರತದ ಮುಸ್ಲಿಂ ಯುವಕರನ್ನು ಖಟ್ಟರ್ ಮೂಲಭೂತವಾದಿಗಳನ್ನಾಗಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಎತ್ತಿಕಟ್ಟುತ್ತಿವೆ ಎಂದು ವಿಶ್ಲೇಷಕರು ವಿವರಿಸಿದ್ದಾರೆ.
2002ರ ಗುಜರಾತ್ ಗಲಭೆಯ ನಂತರವೂ ಪಾಕಿಸ್ತಾನ ಇದೇ ರೀತಿ ವರ್ತಿಸಿತ್ತು. ಪಾಕಿಸ್ತಾನದ ಈ ದುಷ್ಕೃತ್ಯಕ್ಕಾಗಿ ಇರಾನ್ ಮತ್ತು ಟರ್ಕಿಯಂತಹ ಇತರ ದೇಶಗಳು ಸಹಾಯ ಮಾಡುತ್ತಿವೆ ಎಂಬುದು ವಿಶ್ಲೇಷಕರ ಆರೋಪ.
ವಿಶ್ಲೇಷಕರ ವಾದವೇನು?
ಆಡಿಯೋದಲ್ಲೇನಿದೆ?
ಭಾರತದಲ್ಲಿ ತನ್ನ ಸಂಪರ್ಕದಲ್ಲಿರುವ ವ್ಯಕ್ತಿ ಜತೆ ಪಾಕಿಸ್ತಾನದಿಂದ ಫೋನ್ನಲ್ಲಿ ಮಾತನಾಡುವ ವ್ಯಕ್ತಿ ಪ್ರತಿಭಟನೆಗೆ ಹೆಚ್ಚು ಜನರನ್ನು ಸೇರಿಸದಿದ್ದುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾನೆ. ಪ್ರತಿಭಟನೆ ವೈಫಲ್ಯ ಕುರಿತಂತೆ ತನ್ನ ಮೇಲಿರುವವರಿಗೆ ವಿವರಿಸಬೇಕಾಗುತ್ತದೆ ಎಂದು ಆತ ಹೇಳಿರು ವುದು ಸ್ಪಷ್ಟವಾಗಿ ದಾಖಲಾಗಿದೆ. ಆದರೆ ಈ ಸಂಭಾಷಣೆ ಯಾವಾಗ ನಡೆದಿದೆ ಹಾಗೂ ಮಾತನಾಡಿರುವ ಇಬ್ಬ ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಸಿಗದ ವಿಶ್ವ ಮನ್ನಣೆ
ದೆಹಲಿ ಸೇರಿ ಭಾರತದ ಹಲವೆಡೆ ಮುಸ್ಲಿಂರ ಸುರಕ್ಷತೆ ಖಾತ್ರಿಪಡಿಸಿಕೊಳ್ಳುವಂತೆ ವಿಶ್ವಸಂಸ್ಥೆ ಎದುರು ಮನವಿ ಮಾಡಿದ ಪಾಕಿಸ್ತಾನದ ಪ್ರತಿನಿಧಿ ಮಾತಿಗೆ ಯಾವುದೇ ಮನ್ನಣೆ ಸಿಗಲಿಲ್ಲ. ಆರೆಸ್ಸೆಸ್ ಹೆಸರು ಪ್ರಸ್ತಾಪಿಸಿ ಭಾರತದ ವಿರುದ್ಧ ವಾಗ್ದಾಳಿ ನಡೆಸಿದರೂ ವಿಶ್ವಸಂಸ್ಥೆ ಭಾರತವನ್ನು ಪ್ರಶ್ನಿಸಿಲ್ಲ. ಇದರಿಂದ ಪಾಕಿಸ್ತಾನ ಭಾರಿ ಮುಜುಗರಕ್ಕೀಡಾಗಿದೆ.