

ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ(ಪಿಒಕೆ) ನಡೆಯುತ್ತಿದ್ದ ಪ್ರತಿಭಟನೆಗೆ ಮಣಿದಿರುವ ಪಾಕಿಸ್ತಾನ ಸರ್ಕಾರ, ಪ್ರತಿಭಟನಾಕಾರರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಪ್ರತಿಭಟನೆಯ ನೇತೃತ್ವ ವಹಿಸಿರುವ ಜಮ್ಮು ಕಾಶ್ಮೀರ ಜಂಟಿ ಆವಾಮಿ ಕ್ರಿಯಾ ಸಮಿತಿ (ಜೆಎಎಸಿ) ಮುಂದಿಟ್ಟಿರುವ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಸಮ್ಮತಿಸಿದೆ. ಸರ್ಕಾರಿ ಪ್ರತಿನಿಧಿಗಳು ಮತ್ತು ಜೆಎಎಸಿ ಪ್ರಮುಖರ ನಡುವೆ ನಡೆದ ಮಾತುಕತೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ. ಈ ಪ್ರತಿಭಟನೆಯ ವೇಳೆ ಆದ ಸಾವುಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಮತ್ತು ಬಂಧಿತ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಲು ಸರ್ಕಾರ ಒಪ್ಪಿಕೊಂಡಿದೆ. ಜಮ್ಮು-ಕಾಶ್ಮೀರದ ನಿರಾಶ್ರಿತರಿಗೆಂದು ಮೀಸಲಾಗಿರುವ 12 ಶಾಸನಸಭಾ ಸ್ಥಾನಗಳ ರದ್ದತಿ ಬಗ್ಗೆ ಕಾನೂನಾತ್ಮಕ ಸಾಧ್ಯತೆ ಕುರಿತು ಪರಿಶೀಲಿಸಲು ಉನ್ನತಾಧಿಕಾರ ಸಮಿತಿ ರಚಿಸಲಾಗುತ್ತದೆ.
ಪ್ರತಿಭಟನಾಕಾರರು 38 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆ.29ರಂದು ಪ್ರತಿಭಟನೆ ಆರಂಭಿಸಿದ್ದರು. ಕನಿಷ್ಠ ಆರು ಮಂದಿ ನಾಗರಿಕರು ಮತ್ತು ಮೂವರು ಪೊಲೀಸರು ಮೃತಪಟ್ಟಿದ್ದಾರೆ ಹಾಗೂ 172 ಪೊಲೀಸ್ ಸಿಬ್ಬಂದಿ ಮತ್ತು 50ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ. ಪಿಒಕೆಯಲ್ಲಿ ಪ್ರತಿಭಟನೆ ಭುಗಿಲೇಳುತ್ತಿದ್ದಂತೆ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಬುಧವಾರ ಸಚಿವರ ತಂಡ ಕಳಿಸಿಕೊಟ್ಟಿದ್ದರು. ಮಾಜಿ ಪ್ರಧಾನಿ ರಾಜಾ ಪರ್ವೆಜ್ ಅಶ್ರಫ್ ನೇತೃತ್ವದ ಈ ಸಮಿತಿ, ಎರಡು ದಿನ ನಿರಂತರವಾಗಿ ಮಾತುಕತೆ ನಡೆಸಿ, ಶುಕ್ರವಾರ ತಡರಾತ್ರಿ ಸಹಮತಕ್ಕೆ ಬರಲಾಯಿತು. ಪಾಕ್ ಸಂಸದೀಯ ವ್ಯವಹಾರಗಳ ಸಚಿವ ತಾರಿಖ್ ಫಜಲ್ ಚೌಧರಿ ಈ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿ, ಒಪ್ಪಂದಕ್ಕೆ ಬರಲಾದ 25 ಅಂಶಗಳ ದಾಖಲೆಯನ್ನು ಲಗತ್ತಿಸಿದ್ದಾರೆ.
ಮುಜಾಫರಾಬಾದ್ ಮತ್ತು ಪೂಂಚ್ ವಿಭಾಗಗಳಲ್ಲಿ ಎರಡು ಹೆಚ್ಚುವರಿ ಇಂಟರ್ವಿುೕಡಿಯಟ್ ಮತ್ತು ಸೆಕೆಂಡರಿ ಶಿಕ್ಷಣ ಮಂಡಳಿ ಸ್ಥಾಪನೆ ಉಚಿತ ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರದಿಂದ 15 ದಿನಗಳಲ್ಲಿ ಆರೋಗ್ಯ ಕಾರ್ಡ್ ವಿತರಣೆ. ಪಿಒಕೆಯಲ್ಲಿ ವಿದ್ಯುತ್ ವ್ಯವಸ್ಥೆ ಸುಧಾರಣೆಗಾಗಿ ಪಾಕ್ ಸರ್ಕಾರದಿಂದ 10 ಶತಕೋಟಿ ರೂಪಾಯಿ ್ಞಒಕೆಯಲ್ಲಿ ಸಂಪುಟದ ಗರಿಷ್ಠ ಗಾತ್ರ 20ಕ್ಕೆ ಇಳಿಕೆ
‘ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ಪಾಕ್ ಸರ್ಕಾರ ದಬ್ಬಾಳಿಕೆ ನಡೆಸಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ. ಪಾಕಿಸ್ತಾನದ ದಮನಕಾರಿ ನೀತಿಯ ಸಹಜ ಪರಿಣಾಮ ಈ ಪ್ರತಿಭಟನೆ’ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಹೇಳಿದ್ದಾರೆ.