ಆರ್ಥಿಕ ದುಸ್ಥಿತಿ; ಪಾಕಿಸ್ತಾನದಲ್ಲಿ ಇದೀಗ ಔಷಧಕ್ಕೂ ಹಾಹಾಕಾರ!

medicine
Published on

ಇಸ್ಲಾಮಾಬಾದ್‌: ಆರ್ಥಿಕ ದುಸ್ಥಿತಿಗೆ ಸಿಲುಕಿರುವ ಪಾಕಿಸ್ತಾನ ದಿನ ಬಳಕೆ ವಸ್ತುಗಳನ್ನು ಜನರಿಗೆ ಒದಗಿಸಲಾಗ ಸ್ಥಿತಿಗೆ ಬಂದಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಬಳಿ ಸಾಲಕ್ಕೆ ಮನವಿ ಮಾಡಿದೆ. ಆದರೆ ಇದೀಗ ವೈದ್ಯಕೀಯ ಕ್ಷೇತ್ರದಲ್ಲೂ ಸಮಸ್ಯೆ ಆರಂಭವಾಗಿದೆ.

ಔಷಧಗಳಿಗಾಗಿ ಪಾಕಿಸ್ತಾನ ಬಹುತೇಕ ಹೊರದೇಶಗಳನ್ನೇ ನೆಚ್ಚಿಕೊಂಡಿದ್ದು, ಇದೀಗ ವಿದೇಶಿ ವಿನಿಮಯ ಪ್ರಮಾಣ ಕುಸಿದಿರುವುದರಿಂದ ಔಷಧಗಳನ್ನು ಆಮದು ಮಾಡಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಆಮದು ಮಾಡಿಕೊಳ್ಳಲು ವಿದೇಶಿ ವಿನಿಮಯದ ಕೊರತೆ ಇದ್ದರೆ, ಮತ್ತೊಂದೆಡೆ ಅತಿಯಾದ ಬೆಲೆ ಏರಿಕೆಯಿಂದ ದೇಶೀಯವಾಗಿಯೂ ಔಷಧಗಳನ್ನು ತಯಾರಿಸುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸ್ಥಳೀಯ ವೈದ್ಯಕೀಯ ಕಂಪನಿಗಳು ಉತ್ಪಾದನೆಯನ್ನು ನಿಲ್ಲಿಸಿದೆ. ಔಷಧಗಳ ಆಮದಿಗೆ ಬೇಕಾದ ಹಣ ನೀಡಲು ಬ್ಯಾಂಕುಗಳು ನಿರಾಕರಿಸಿವೆ ಎಂದು ಔಷಧ ಉತ್ಪಾದಕ ಕಂಪನಿಗಳು ಹೇಳಿವೆ ಎನ್ನಲಾಗಿದೆ.

ಹೃದಯ, ಕಿಡ್ನಿ ಮತ್ತು ಕ್ಯಾನ್ಸರ್‌ನಂತರ ಸೂಕ್ಷ್ಮ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಬೇಕಾದ ಅರಿವಳಿಕೆ ಚುಚ್ಚುಮದ್ದುಗಳು ಕೇವಲ 2 ವಾರಕ್ಕಾಗುವಷ್ಟು ಮಾತ್ರ ಉಳಿದಿದೆ. ಶಸ್ತ್ರಚಿಕಿತ್ಸೆಗಳನ್ನು ಮಾಡದಂತೆ ವೈದ್ಯರಿಗೆ ಸರ್ಕಾರ ಸೂಚನೆ ನೀಡಿದೆ.

ಔಷಧ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಭಾರತ ಮತ್ತು ಚೀನಾ ಸೇರಿ ಕೆಲವು ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಆದರೆ ಇದಕ್ಕೆ ಬೇಕಾದ ಹಣ ಈಗ ದೇಶದ ಬಳಿ ಇಲ್ಲದಿರುವುದರಿಂದ ಇವುಗಳಿಗೆಲ್ಲಾ ತಡೆ ಬಿದ್ದಿದೆ. ಪಾಕಿಸ್ತಾನಕ್ಕೆ ಇತರ ದೇಶಗಳಿಂದ ರಫ್ತಾಗಿರುವ ಒಂದಷ್ಟು ವಸ್ತುಗಳು ಸಹ ಕರಾಚಿ ಬಂದರಿನಲ್ಲೇ ನಿಂತಿವೆ. ಆರ್ಥಿಕ ದುಸ್ಥಿತಿಗೆ ಸಿಲುಕಿರುವ ಪಾಕಿಸ್ತಾನ ಇದರಿಂದ ಹೊರಬರಲು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಬಳಿ ಸಾಲಕ್ಕೆ ಮನವಿ ಮಾಡಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net