ಪಾಕಿಸ್ತಾನದಲ್ಲಿ ಕರೊನಾದಿಂದ ಮೃತಪಟ್ಟವರು 3 ಸಾವಿರಕ್ಕೂ ಹೆಚ್ಚು ಜನ! ನಿಜಾಂಶ ಮುಚ್ಚಿಡುತ್ತಿದೆಯೇ ಪಾಕ್ ಸರ್ಕಾರ?

Pak Corona
Published on

ಕರಾಚಿ: ಸಾಕಷ್ಟು ಆಸ್ಪತ್ರೆಗಳು ಇದ್ದೇ ಮುಂದುವರಿದ ರಾಷ್ಟ್ರಗಳು ಕರೊನಾ ಸೋಂಕಿತರನ್ನು ನಿರ್ವಹಿಸಲು ಏದುಸಿರು ಬಿಡುತ್ತಿವೆ. ಅಂಥದ್ದರಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯಗಳೇ ಇಲ್ಲದ ಪಾಕಿಸ್ತಾನದಲ್ಲಿ ಕರೊನಾ ಹಾವಳಿಯನ್ನು ನಿರ್ವಹಿಸಲು ಅಲ್ಲಿನ ಸರ್ಕಾರ ಏನು ಮಾಡುತ್ತಿದೆ? ಪಾಕ್ ಸರ್ಕಾರದ ಈ ಹಿಂದಿನ ಅವಾಂತರಗಳನ್ನು ಗಮನಿಸುತ್ತ ಬಂದವರಿಗೆ ಇಂತಹುದೊಂದು ಪ್ರಶ್ನೆ ಮನಸ್ಸಿನಲ್ಲಿ ಮೂಡಿದ್ದರೆ ಅಚ್ಚರಿಯೇನಿಲ್ಲ.

ಭಯೋತ್ಪಾದನೆಯೂ ಸೇರಿದಂತೆ ಎಲ್ಲ ವಿಷಯಗಳಲ್ಲಿಯೂ ವಿಶ್ವ ಸಮುದಾಯಕ್ಕೆ ಸುಳ್ಳು ಹೇಳುವುದನ್ನೇ ಕೆಲಸ ಮಾಡಿಕೊಂಡಿರುವ ಪಾಕ್ ಸರ್ಕಾರ ಕರೊನಾ ಸಾವಿನ ವಿಷಯದಲ್ಲಿಯೂ ಸುಳ್ಳು ಹೇಳುತ್ತಿರಬಹುದೇ? ಹೌದು ಎನ್ನುತ್ತಿವೆ ಮಾಧ್ಯಮ ವರದಿಗಳು. ಪಾಕಿಸ್ತಾನದಿಂದಲೇ ಪ್ರಕಟವಾಗುವ ಇಂಗ್ಲಿಷ್ ಪತ್ರಿಕೆಯೊಂದರ ಪ್ರಕಾರ, ಕಳೆದ 42 ದಿನಗಳಲ್ಲಿ ಪಾಕಿಸ್ತಾನದಲ್ಲಿ ಕರೊನಾದಿಂದ ಮೃತಪಟ್ಟವರ ಸಂಖ್ಯೆ 3265! ಕರಾಚಿಯಲ್ಲಿನ ಅಂತ್ಯಸಂಸ್ಕಾರ ಸ್ಥಳದಲ್ಲಿ ಕಳೆದ 42 ದಿನಗಳಲ್ಲಿ ಒಟ್ಟು 3,265 ಶವಗಳನ್ನು ದನ್ ಮಾಡಲಾಗಿದೆ ಎನ್ನುತ್ತಿದೆ ಈ ವರದಿ. ಆದರೆ ಪಾಕಿಸ್ತಾನದ ಸರ್ಕಾರ ಅಧಿಕೃತವಾಗಿ ಹೇಳುವುದು - ಸುಮಾರು 7 ಸಾವಿರ ಜನರು ಸೋಂಕಿಗೆ ಒಳಗಾಗಿದ್ದು, ಮೃತರ ಸಂಖ್ಯೆ 143 ಮಾತ್ರ ಎಂದು!

ಉತ್ತಮ ಆಸ್ಪತ್ರೆ ಸೌಲಭ್ಯ, ಪಿಪಿಇ ಕಿಟ್‌ಗಳು, ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳು ಸೇರಿ ಕರೊನಾ ನಿಯಂತ್ರಣಕ್ಕೆ ಬೇಕಾದ ಯಾವುದೇ ಸೌಲಭ್ಯ ಹೊಂದಿರದ ಪಾಕ್‌ನಲ್ಲಿ ಕರೊನಾ ಸಾವು-ನೋವಿನ ಸಂಖ್ಯೆ ಕಡಿಮೆ ಇರಲು ಸಾಧ್ಯವೇ ಇಲ್ಲ ಎಂದು ಹಲವರು ಅಭಿಪ್ರಾಯಪಡುತ್ತಾರೆ.

ಕರೊನಾದಿಂದಾಗಿ ಕರಾಚಿಯಲ್ಲಿನ ಆಸ್ಪತ್ರೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಜನರು ಸಾಯುತ್ತಿದ್ದಾರೆ. ಈ ಮಾಹಿತಿಯನ್ನು ಸರ್ಕಾರ ಮುಚ್ಚಿಡುತ್ತಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ಈ ಹಿಂದೆಯೂ ವರದಿ ಮಾಡಿದ್ದವು. ಸಾವಿರಾರು ಜನರ ಶವಗಳನ್ನು ದನ್ ಮಾಡಿದ್ದರ ಬಗ್ಗೆ ಹಾಗೂ ಅವರು ಹೇಗೆ ಸತ್ತರು ಎಂಬ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅವರು ಉತ್ತರಿಸಲು ನಿರಾಕರಿಸಿದ್ದರು. ಹೀಗಾಗಿ ಇಮ್ರಾನ್ ಖಾನ್ ಸರ್ಕಾರ ಕೆಲ ವಾಸ್ತವಾಂಶಗಳನ್ನು ಮುಚ್ಚಿಟ್ಟಿರುವುದು ಸ್ಪಷ್ಟವಾಗಿದೆ.

ಪಾಕ್‌ನಲ್ಲಿ ವಿಳಂಬವಾಗಿ ಲಾಕ್‌ಡೌನ್ ಘೋಷಿಸಲಾಗಿದ್ದು, ಅಲ್ಲಿ ಕೂಡ ತಬ್ಲಿ ಜಮಾತ್‌ನ ಸಭೆಗಳು ನಡೆದಿವೆ. ಸಾವಿರಾರು ಜನರು ಅವುಗಳಲ್ಲಿ ಭಾಗಿಯಾಗಿ ಇತರೆಡೆ ಸಂಚರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net