

ಪಾಕಿಸ್ತಾನ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರವಾದ ರಂಜಾನ್ ತಿಂಗಳು ಆರಂಭವಾಗುತ್ತಿದೆ. ಆದರೆ ನೆರೆಯ ಪಾಕಿಸ್ತಾನದಲ್ಲಿ ಎಲ್ಲಿಯೂ ಹಬ್ಬದ ವಾತಾವರಣವಿಲ್ಲ. ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬಡ ಮತ್ತು ಮಧ್ಯಮ ಆದಾಯ ವರ್ಗದ ಜನರು ಅಗತ್ಯ ವಸ್ತುಗಳ ಖರೀದಿಗೂ ಪರದಾಡುವಂತಾಗಿದೆ ಎಂದು ದೂರಿದ್ದಾರೆ.
ತರಕಾರಿ, ಹಾಲು, ಸಕ್ಕರೆ, ಅಡುಗೆ ಎಣ್ಣೆ, ತುಪ್ಪ, ಮಾಂಸ, ಮೊಟ್ಟೆ ಮತ್ತು ಬೇಳೆಕಾಳುಗಳ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಎಲ್ಲಾ ರೀತಿಯ ಆಹಾರ ಪದಾರ್ಥಗಳು ಮತ್ತು ಉತ್ಪನ್ನಗಳು ದುಬಾರಿಯಾಗುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ.
ಕೆಲವು ತಿಂಗಳ ಹಿಂದೆ, ಪಾಕಿಸ್ತಾನದಾದ್ಯಂತ ತರಕಾರಿಗಳು ಮತ್ತು ಸರಕುಗಳ ಸರಾಸರಿ ಹೆಚ್ಚಳವು ಶೇಕಡಾ 31.5 ರಷ್ಟಿತ್ತು. ಆದರೆ ಹಬ್ಬದ ತಿಂಗಳಲ್ಲಿ ಶೇ.60ಕ್ಕೆ ಏರಿಕೆಯಾಗಿದೆ. ತರಕಾರಿಗಳ ಬೆಲೆಯೊಂದಿಗೆ ವಿವಿಧ ಹಣ್ಣುಗಳ ಬೆಲೆಯೂ ಭಾರಿ ಏರಿಕೆಯಾಗಿದೆ.
ಸದ್ಯ ಪಾಕಿಸ್ತಾನದಲ್ಲಿ ಈರುಳ್ಳಿ ಬೆಲೆ ಕೆಜಿಗೆ 150 ರಿಂದ 300 ರೂಪಾಯಿಗೆ ಏರಿಕೆಯಾಗಿದೆ. ರಂಜಾನ್ಗೆ ಮೊದಲು ಕೆಜಿಗೆ 50 ರೂಪಾಯಿ ಇದ್ದ ಆಲೂಗಡ್ಡೆ ಬೆಲೆ ಈಗ 80 ರೂಪಾಯಿಗೆ ಏರಿಕೆಯಾಗಿದೆ. ಪಾಕಿಸ್ತಾನಿ ಕರೆನ್ಸಿ(pkr) ಪ್ರಕಾರ ಎಲೆಕೋಸು ಬೆಲೆ 80-100 ನಿಂದ 150 pkr ಗೆ ಹೆಚ್ಚಾಗಿದೆ.
ಹಸಿಮೆಣಸಿನಕಾಯಿ ಕೆಜಿಗೆ 200 ರಿಂದ 320 ರೂ. ಕ್ಯಾಪ್ಸಿಕಂ ಬೆಲೆ ಕೆಜಿಗೆ 400 ರೂ. ಸಾಮಾನ್ಯವಾಗಿ ರಂಜಾನ್ ತಿಂಗಳಲ್ಲಿ ಹಣ್ಣುಗಳ ಮಾರಾಟ ಹೆಚ್ಚುತ್ತದೆ. ಚಿಕ್ಕ ಗಾತ್ರದ ಬಾಳೆಹಣ್ಣಿನ ಬೆಲೆ ಡಜನ್ ಗೆ 80ರಿಂದ 120ಕ್ಕೆ ಏರಿಕೆಯಾಗಿದೆ. ಉತ್ತಮ ಗುಣಮಟ್ಟದ ದೊಡ್ಡ ಬಾಳೆಹಣ್ಣು ಡಜನ್ಗೆ 200 ರೂ.ಗೆ ಮಾರಾಟವಾಗುತ್ತಿದೆ. ಕಲ್ಲಂಗಡಿ ಕೂಡ 150 ರಿಂದ 200 ರೂ. ಆಗಿದೆ. ಅಗತ್ಯ ವಸ್ತುಗಳ ಬೆಲೆಯಲ್ಲಿನ ಈ ಹಠಾತ್ ತೀವ್ರ ಏರಿಕೆಯು ಕಡಿಮೆ-ಮಧ್ಯಮ-ಆದಾಯದ ಗ್ರಾಹಕರ ಆರ್ಥಿಕ ತೊಂದರೆಗಳನ್ನು ಹೆಚ್ಚಿಸಿದೆ.