

ಇಸ್ಲಮಾಬಾದ್: ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗ (ಎಚ್ಇಸಿ)ವು ಯೂನಿವರ್ಸಿಟಿಗಳಲ್ಲಿ ಹೋಳಿ ಆಚರಣೆಯನ್ನು ಬ್ಯಾನ್ ಮಾಡಿ ಸುತ್ತೋಲೆ ಹೊರಡಿಸಿದೆ.
ಜೂನ್ 12ರಂದು ಕ್ವೈಡ್-ಐ-ಅಜಮ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹೋಳಿಯನ್ನು ಆಚರಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಎಚ್ಇಸಿ ಸುತ್ತೋಲೆಯನ್ನು ಹೊರಡಿಸಿದೆ. ಸಾಮಾಜಿಕ ಸಾಂಸ್ಕೃತಿಕ ಮೌಲ್ಯಗಳನ್ನು ಅನುಸರಿಸಲು ವಿದ್ಯಾರ್ಥಿಗಳು ಈ ಉತ್ಸವವನ್ನು ಆಚರಿಸುವುದನ್ನು ನಿಷೇಧಿಸಲಾಗಿದೆ ಎಂದು ಆಯೋಗವು ನೋಟಿಸ್‌ನಲ್ಲಿ ತಿಳಿಸಿದೆ.
ಹೋಳಿಯಂತಹ ಚಟುವಟಿಕೆಗಳು ದೇಶದ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳಿಂದ ಜನರ ಸಂಪರ್ಕವನ್ನು ಕಡಿತಗೊಳಿಸುತ್ತದೆ ಮತ್ತು ದೇಶದ ಇಸ್ಲಾಮಿಕ್ ಗುರುತು ಮಾಸುತ್ತದೆ ಎಂದು ಎಚ್ಇಸಿ ಹೇಳಿದೆ. ಅಲ್ಲದೆ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಶೈಕ್ಷಣಿಕ ಅನ್ವೇಷಣೆಗಳು, ಬೌದ್ಧಿಕ ಚರ್ಚೆಗಳು ಮತ್ತು ಅರಿವಿನ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮತ್ತು ತರ್ಕಬದ್ಧ ಪ್ರವಚನದಲ್ಲಿ ತೊಡಗಿಸಿಕೊಳ್ಳಲು ಸೂಚಿಸಿದೆ.
ಈ ತಿಂಗಳ ಆರಂಭದಲ್ಲಿ ಇಸ್ಲಾಮಾಬಾದ್‌ನ ಕ್ವೈಡ್-ಐ-ಅಜಮ್ ವಿಶ್ವವಿದ್ಯಾಲಯದಲ್ಲಿ ಹೋಳಿ ಆಚರಣೆಯ ವಿಡಿಯೋಗಳು ವೈರಲ್ ಆಗಿದ್ದವು. ವಿಡಿಯೋಗಳಲ್ಲಿ, ವಿದ್ಯಾರ್ಥಿಗಳು ಬಣ್ಣಗಳಿಂದ ಹೋಳಿ ಆಡುವುದನ್ನು ಮತ್ತು ಕಾಲೇಜು ಆವರಣದಲ್ಲಿ ಸಂಭ್ರಮಾಚರಣೆಯನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ವಿಶ್ವವಿದ್ಯಾನಿಲಯದ ರಾಜಕೀಯೇತರ ಸಾಂಸ್ಕೃತಿಕ ಸಂಘಟನೆಯಾದ ಮೆಹ್ರಾನ್ ವಿದ್ಯಾರ್ಥಿಗಳ ಮಂಡಳಿಯು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್)