ಮತ್ತಷ್ಟು ಸಾಲಕ್ಕೆ ಪಾಕಿಸ್ತಾನ ಮನವಿ; ಚೀನಾ ಬ್ಯಾಂಕ್​ನಿಂದ 700 ದಶಲಕ್ಷ ಡಾಲರ್ ಸಾಲ

Pak Loan
Published on

ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಪಾಕಿಸ್ತಾನ, ಚೀನಾ ಅಭಿವೃದ್ಧಿ ಬ್ಯಾಂಕ್​ನಿಂದ (ಸಿಡಿಬಿ) ಮಂಜೂರಾಗಿರುವ 700 ದಶಲಕ್ಷ ಡಾಲರ್ ಸಾಲದ ಹಣವನ್ನು ಪಡೆದುಕೊಂಡಿದೆ. ಆದರೆ ದೇಶದ ವಿದೇಶಿ ವಿನಿಮಯ ಸಂಗ್ರಹವನ್ನು (ಫೊರೆಕ್ಸ್) ಸುಧಾರಿಸಲು ಇದು ಸಾಲದಾಗಿದ್ದು ಇನ್ನೂ 1,300 ದಶಲಕ್ಷ ಡಾಲರ್ ಸಾಲವನ್ನು ಪಾಕ್ ನಿರೀಕ್ಷಿಸುತ್ತಿದೆ. ವಿದೇಶಿ ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕ್​ನ ಫೊರೆಕ್ಸ್ ಫೆಬ್ರವರಿ 17ರಲ್ಲಿದ್ದಂತೆ 3.25 ಶತಕೋಟಿ ಡಾಲರ್ ಆಗಿದ್ದು ಕೇವಲ ಮೂರು ವಾರದ ಆಮದಿಗೆ ಸಾಕಾಗುತ್ತದೆ.

ಫೊರೆಕ್ಸ್ ಏರಿಸಲು ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸಮ್ಮಿಶ್ರ ಸರ್ಕಾರ ಹರಸಾಹಸ ಪಡುತ್ತಿದ್ದು, ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) 6.5 ಶತಕೋಟಿ ಡಾಲರ್ ಮೊತ್ತದ ಸಾಲ ಯೋಜನೆಯ ಪುನರುಜ್ಜೀವನ ವಿಳಂಬವಾಗಿರುವುದರಿಂದ ಯತ್ನಗಳಿಗೆ ಅಡ್ಡಿಯುಂಟಾಗಿದೆ. ಚೀನಾದ ಸಾಲಗಳ ಮರುಪಾವತಿಗಾಗಿ ಫೆಬ್ರವರಿ ಕೊನೆ ವಾರ ಅಥವಾ ಮಾರ್ಚ್ ಮೊದಲ ವಾರದೊಳಗೆ 800 ದಶಲಕ್ಷ ಡಾಲರ್ ಮತ್ತು 500 ದಶಲಕ್ಷ ಡಾಲರ್​ಗಳ ಎರಡು ವಾಣಿಜ್ಯ ಸಾಲಗಳನ್ನು ಪಡೆಯಲೂ ಪಾಕ್ ಪ್ರಯತ್ನಿಸುತ್ತಿದೆ. ಪ್ರಸಕ್ತ ಚೀನಾ ಬ್ಯಾಂಕ್​ನಿಂದ ಬಂದಿರುವ ಸಾಲದ ಹಣ ಕರೊನಾ ಸಾಂಕ್ರಾಮಿಕತೆ ಮತ್ತು ವಿದೇಶಿ ಸಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ಪಾಕ್​ನ ಆರ್ಥಿಕ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ನಿರೀಕ್ಷೆಯಿದೆ.

ಪಾಕ್ ಉಗ್ರರ ಆಶ್ರಯ ತಾಣ

ಪಾಕಿಸ್ತಾನ ಡಜನ್​ಗಟ್ಟಲೆ ಭಯೋತ್ಪಾದನೆ ಸಂಘಟನೆಗಳ ಆಶ್ರಯ ತಾಣವಾಗಿದೆ ಎಂದು ಭಾರತೀಯ ಮೂಲದ ಅಮೆರಿಕನ್ ಹಾಗೂ 2024ರ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ನಿಕ್ಕಿ ಹ್ಯಾಲಿ ಹೇಳಿದ್ದಾರೆ. ತಾವು ಅಧ್ಯಕ್ಷರಾಗಿ ಆಯ್ಕೆಯಾದರೆ ಚೀನಾ ಮತ್ತು ಪಾಕ್​ನಂಥ ದೇಶಗಳಿಗೆ ವಿದೇಶಿ ನೆರವನ್ನು ಕಡಿತ ಮಾಡುವುದಾಗಿ ಪ್ರಚಾರ ಅಭಿಯಾನದಲ್ಲಿ ಘೋಷಿಸಿದ್ದಾರೆ. 51 ವರ್ಷದ ನಿಕ್ಕಿ, ಎರಡು ಬಾರಿ ದಕ್ಷಿಣ ಕ್ಯಾರೊಲಿನಾದ ಗವರ್ನರ್ ಹಾಗೂ ವಿಶ್ವ ಸಂಸ್ಥೆಯಲ್ಲಿ ಅಮೆರಿಕದ ಮಾಜಿ ರಾಯಭಾರಿ ಆಗಿದ್ದಾರೆ.

ಪಾಕ್ ಜನರಿಗೆ ವಿದ್ಯುತ್ ಶಾಕ್

ಜುಲೈ 1ರಿಂದ ದೇಶಾದ್ಯಂತ ವಿದ್ಯುತ್ ದರವನ್ನು ಪ್ರತಿ ಯೂನಿಟ್​ಗೆ 3.23 ರೂ. ಏರಿಕೆ ಮಾಡುವುದಾಗಿ ಪಾಕಿಸ್ತಾನ ಘೋಷಣೆ ಮಾಡಿದೆ. ವಿದ್ಯುತ್ ಕ್ಷೇತ್ರದ ಸಾಲ ಮತ್ತು ಹೊಣೆಗಾರಿಕೆಗಳಿಗೆ ಹಣಕಾಸು ಒದಗಿಸಲು ಮುಂದಿನ ಆರ್ಥಿಕ ವರ್ಷದಲ್ಲಿ 335 ಶತಕೋಟಿ ರೂ. ಅಗತ್ಯವಿದೆ. ಜತೆಗೆ ಹೊಸ ಸಾಲ ಮಂಜೂರಾತಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಹಲವು ಶರತ್ತುಗಳನ್ನು ವಿಧಿಸಿದ್ದು, ಇದರಲ್ಲಿ ವಿದ್ಯುತ್ ದರ ಏರಿಕೆ ಕೂಡ ಸೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net