

ಕಾಸರಗೋಡು: ಎನ್ಐಎಯಿಂದ ಬಂಧಿಸಲ್ಪಟ್ಟಿರುವ ಪಾಕ್ ಗೂಢಚಾರಿಣಿ ಜ್ಯೋತಿ ಮಲ್ಹೋತ್ರಾ, ಕಾಸರಗೋಡಿನಿಂದ ತಿರುವನಂತಪುರಕ್ಕೆ ಆರಂಭಗೊಂಡಿದ್ದ ವಂದೇಭಾರತ್ ಎಕ್ಸ್ಪ್ರೆಸ್ ರೈಲಿನ ಉದ್ಘಾಟನೆ ಸಂದರ್ಭ ಕಾಸರಗೋಡಿಗೂ ಭೇಟಿ ನೀಡಿದ್ದಾಳೆ.
ವಂದೇಭಾರತ್ ರೈಲಿನ ಹೊರ, ಒಳಭಾಗದ ದೃಶ್ಯಾವಳಿ ಬಗ್ಗೆ ಸಂಪೂರ್ಣ ವಿಡಿಯೋ ಚಿತ್ರೀಕರಿಸಿರುವುದಲ್ಲದೆ, ರೈಲಿನಲ್ಲಿ ಮೊದಲ ಪ್ರಯಾಣ ನಡೆಸಿದ ಕೇಂದ್ರ ಸಚಿವ ವಿ.ಮುರಳೀಧರನ್, ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ರೈಲ್ವೆ ಸಲಹಾ ಸಮಿತಿ ಸದಸ್ಯ ಪಿ.ಕೆ.ಕೃಷ್ಣದಾಸ್ ಅವರಿಂದ ಹೇಳಿಕೆ ದಾಖಲಿಸಿಕೊಂಡಿದ್ದಳು.
ವಿವಿಧ ನಿಲ್ದಾಣಗಳಲ್ಲಿ ರೈಲಿಗೆ ಸ್ವಾಗತ ನೀಡುವ ಸಂದರ್ಭ ಹಾರಾರ್ಪಣೆ ನಡೆಸುವ ಚಿತ್ರ ಈಕೆಯ ಸಂಗ್ರಹದಲ್ಲಿದೆ. ವಿ.ಮುರಳೀಧರನ್ ಪತ್ರಕರ್ತರಿಗೆ ನೀಡುತ್ತಿರುವ ಸಂದರ್ಶನದ ಎಲ್ಲ ಮಾಹಿತಿ ಈಕೆಯ ವಿಡಿಯೋದಲ್ಲಿದೆ. 2023 ಏ.25ರಂದು ಮೊದಲ ವಂದೇಭಾರತ್ ಕಾಸರಗೋಡಿನಿಂದ ತಿರುವನಂತಪುರಕ್ಕೆ ಸಂಚಾರ ಆರಂಭಿಸಿದ್ದು, ಆಗ ಎಲ್ಲ ಕಾರ್ಯಕ್ರಮಗಳಲ್ಲಿ ಆಕೆ ಪಾಲ್ಗೊಂಡಿದ್ದಳು. ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಈಕೆಯನ್ನು ಕರೆಸಿಕೊಂಡು ಆತಿಥ್ಯ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.