ಪಾಕ್ ರಾಜಕೀಯ ಹೈಡ್ರಾಮ: ನ್ಯಾಷನಲ್ ಅಸೆಂಬ್ಲಿಯಲ್ಲಿ ಗದ್ದಲ, ರಾತ್ರಿವರೆಗೂ ಕಲಾಪ

Imran
Published on

ಇಸ್ಲಾಮಾಬಾದ್: ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿ ಶನಿವಾರ ರಾಜಕೀಯ ನಾಟಕಕ್ಕೆ ಸಾಕ್ಷಿಯಾಯಿತು. ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಇಮ್ರಾನ್ ಖಾನ್ ಸರ್ಕಾರ ವಿರುದ್ಧದ ಅವಿಶ್ವಾಸ ಗೊತ್ತುವಳಿ ವೇಳೆ ಭಾರಿ ಗದ್ದಲ, ಗೊಂದಲ ಉಂಟಾಯಿತು. ಪರಿಣಾಮ ರಾತ್ರಿ ತನಕವೂ ಕಲಾಪ ಮುಂದುವರಿದಿತ್ತು.

ಪಾಕಿಸ್ತಾನ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಶನಿವಾರ ನ್ಯಾಷನಲ್ ಅಸೆಂಬ್ಲಿ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ಮತಕ್ಕೆ ಇರಿಸಬೇಕಾಗಿತ್ತು. ಅಧಿವೇಶನದ ಕಾರ್ಯಸೂಚಿ ಪ್ರಕಾರ, ನಾಲ್ಕನೇ ಅಂಶ ಅವಿಶ್ವಾಸ ಗೊತ್ತುವಳಿ ಮತದಾನವಾಗಿತ್ತು. ಗದ್ದಲ, ಪ್ರತಿಭಟನೆಗಳ ಕಾರಣ ಕಲಾಪ ರಾತ್ರಿ 10 ಗಂಟೆಗೆ ಮುಂದೂಡಿಕೆಯಾಗಿತ್ತು.

ವಿದೇಶಿ ಪಿತೂರಿ ಅಂಶ ಮತ್ತೆ ಸದನದಲ್ಲಿ ಪ್ರಸ್ತಾಪವಾಗಿದ್ದು, ಸರ್ಕಾರ ಇದರ ಬಗ್ಗೆಯೇ ಚರ್ಚೆ ಆಗಲಿ ಎಂಬ ಧೋರಣೆ ಪ್ರದರ್ಶಿಸಿತ್ತು. ಆದರೆ, ವಿಪಕ್ಷಗಳು ವಿದೇಶಿ ಪಿತೂರಿ ಸಿದ್ಧಾಂತವನ್ನು ಅಲ್ಲಗಳೆದು ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಅವಿಶ್ವಾಸ ಗೊತ್ತುವಳಿ ಮತಕ್ಕೆ ಹಾಕಿ ಎಂದು ಆಗ್ರಹಿಸಿದವು.

ಬೆಳಗ್ಗೆ ಕಲಾಪ ಶುರು: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಸ್ಥಳೀಯ ಕಾಲಮಾನ ಬೆಳಗ್ಗೆ 10.30ಕ್ಕೆ ನ್ಯಾಷನಲ್ ಅಸೆಂಬ್ಲಿ ಅಧಿವೇಶನ ಶುರುವಾಗಿದೆ. ಸ್ಪೀಕರ್ ಅಸಾದ್ ಖೈಸರ್ ವಿಶೇಷ ಅಧಿವೇಶನಕ್ಕೆ ಚಾಲನೆ ನೀಡಿದರು. ವಿಪಕ್ಷ ನಾಯಕ ಶೆಹಬಾಜ್ ಷರೀಫ್ ಇದೇ ವೇಳೆ ಮಾತನಾಡಿದ್ದು, ಡೆಪ್ಯೂಟಿ ಸ್ಪೀಕರ್ ಅವರ ಆದೇಶವನ್ನು ತಳ್ಳಿ ಹಾಕಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಗುರುವಾರ ಐತಿಹಾಸಿಕ ದಿನ. ದೇಶದ ಭವಿಷ್ಯ ಉಜ್ವಲವಾಗಿದೆ ಎಂದು ವರ್ಣಿಸಿದರು. ಅಲ್ಲದೆ, ಅವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕುವಂತೆ ಸ್ಪೀಕರ್ ಅವರನ್ನು ವಿನಂತಿಸಿದರು. ಆದರೆ, ಅಧಿವೇಶನ ಕಾರ್ಯಸೂಚಿಗೆ ಅನುಗುಣವಾಗಿ ನಡೆಯಲಿದೆ. ಅಂತಾರಾಷ್ಟ್ರೀಯ ಪಿತೂರಿಯ ಆರೋಪ ಇರುವ ಕಾರಣ ಆ ಬಗ್ಗೆ ಚರ್ಚೆ ನಡೆಯಬೇಕು ಎಂದು ಸ್ಪೀಕರ್ ವಿವರಿಸಿದರು.

ವಿಪಕ್ಷಗಳಿಗೆ ಹಕ್ಕಿದೆ: ಪ್ರಧಾನಮಂತ್ರಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಮತಕ್ಕೆ ಹಾಕುವ ಹಕ್ಕು ವಿಪಕ್ಷಗಳಿಗೆ ಇದೆ. ಅದನ್ನು ತಡೆಯುವ ಬಾಧ್ಯತೆ, ಸರ್ಕಾರ ಪತನವಾಗದಂತೆ ನೋಡಿಕೊಳ್ಳುವ ಬಾಧ್ಯತೆ ಪ್ರಧಾನಿಗೂ ಇದೆ. ಸಾಂವಿಧಾನಿಕ, ರಾಜಕೀಯ, ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂದು ಮಾಜಿ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಶಿ ಹೇಳಿದರು.

ಟ್ವಿಟರ್ ಖಾತೆ ಅಪ್​ಡೇಟ್: ನ್ಯಾಷನಲ್ ಅಸೆಂಬ್ಲಿಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿ ಸರ್ಕಾರ ಪತನವಾಗುವ ಮುನ್ನವೇ ಮಾಹಿತಿ ಸಚಿವ ಫವಾದ್ ಚೌಧರಿ, ತಮ್ಮ ಟ್ವಿಟರ್ ಖಾತೆಯಲ್ಲಿ ಮಾಜಿ ಸಚಿವ ಎಂದು ಮಾಹಿತಿ ಅಪ್ಡೇಟ್ ಮಾಡಿ ಗಮನಸೆಳೆದರು.

ಕಳವಳಕಾರಿ ತೀರ್ಪು: ಪಾಕಿಸ್ತಾನ ಸುಪ್ರೀಂ ಕೋರ್ಟ್ ತೀರ್ಪು ನನ್ನಲ್ಲಿ ದುಃಖವನ್ನು ಉಂಟುಮಾಡಿದೆ. ಡೆಪ್ಯೂಟಿ ಸ್ಪೀಕರ್ ಆದೇಶದ ಉದ್ದೇಶದ ಬಗ್ಗೆ ಸುಪ್ರೀಂ ಕೋರ್ಟ್ ತನಿಖೆ ನಡೆಸಿ ತೀರ್ಪು ನೀಡಬೇಕಾಗಿತ್ತು. ಯುವಜನರೇ ಪಾಕಿಸ್ತಾನದ ಭವಿಷ್ಯ. ಅವರ ನಾಯಕರು ಮಾರಲ್ಪಡುವುದನ್ನು ನೋಡಿದರೆ ಅವರಿಗೆ ನಾವು ನೀಡುವ ಸಂದೇಶವಾದರೂ ಏನು ಎಂದು ಇಮ್ರಾನ್ ಖಾನ್ ಹೇಳಿದರು.

ರಿವ್ಯೂ ಪಿಟಿಷನ್ ಸಲ್ಲಿಕೆ: ಡೆಪ್ಯೂಟಿ ಸ್ಪೀಕರ್ ಆದೇಶ ರದ್ದುಗೊಳಿಸಿ ನೀಡಿದ ತೀರ್ಪನ್ನು ಮರುಪರಿಶೀಲಿಸುವಂತೆ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ರಿವ್ಯೂವ್ ಪಿಟಿಷನ್ ಅನ್ನು ಸಲ್ಲಿಸಿದೆ. ಡಾ.ಬಾಬರ್ ಅವಾನ್ ಮತ್ತು ಅಜರ್ ಸಿದ್ಧಿಕಿ ಈ ಪಿಟಿಷನ್ ಸಲ್ಲಿಸಿದ್ದಾರೆ. ಪಿಪಿಪಿ, ಪಿಎಂಎಲ್-ಎನ್, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್, ಸಿಂಧ್ ಹೈಕೋರ್ಟ್ ಬಾರ್ ಅಸೋಸಿಯೇಷನ್ ಮತ್ತು ಸಿಂಧ್ ಬಾರ್ ಅಸೋಸಿಯೇಷನ್ ಅನ್ನು ಪ್ರತಿವಾದಿಗಳನ್ನಾಗಿ ಉಲ್ಲೇಖಿಸಲಾಗಿದೆ.

ಕಲಾಪ ಮುಂದೂಡಿಕೆ: ಅಧಿವೇಶನದ ಕಾರ್ಯಸೂಚಿ ಪ್ರಕಾರ ಕಲಾಪ ಮುಂದುವರಿಸುವ ವಿಚಾರದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಏರ್ಪಟ್ಟ ಗದ್ದಲದ ಕಾರಣ ಕಲಾಪವನ್ನು ಮಧ್ಯಾಹ್ನ 12.30ಕ್ಕೆ ಮುಂದುಡಲಾಗಿತ್ತು. ಮೂರೂವರೆ ಗಂಟೆ ವಿರಾಮದ ಬಳಿಕ ಮತ್ತೆ ಕಲಾಪ ಶುರುವಾಗಿತ್ತು. ಖುರೇಶಿ ಮಾತು ಮುಂದುವರಿಸಲು ಪ್ರಯತ್ನಿಸಿದಾಗ ವಿಪಕ್ಷ ಸದಸ್ಯರು ಮತ್ತೆ ಅಡ್ಡಿಪಡಿಸಿದರು. ಹೀಗಾಗಿ ಕಲಾಪ ಮತ್ತೆ ಮುಂದೂಡಲ್ಪಟ್ಟಿದೆ. ಮೂರು ಗಂಟೆ ಕಾಲ ಮಾತನಾಡುವುದಕ್ಕೆ ಖುರೇಶಿಗೆ ಇಮ್ರಾನ್ ಖಾನ್ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಭಾರತ ಸುಪ್ರೀಂ ಪವರ್: ಭಾರತ ಅತ್ಯಂತ ಶಕ್ತಿಶಾಲಿ ರಾಷ್ಟ್ರ. ಅದನ್ನು ಮಣಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಯಾವುದೇ ಬಲಿಷ್ಠ ರಾಷ್ಟ್ರ ಭಾರತವನ್ನು ನಿರ್ದೇಶಿಸುವ ಧೈರ್ಯ ತೋರುವುದು ಸಾಧ್ಯವಿಲ್ಲ ಎಂದು ಇಮ್ರಾನ್ ಖಾನ್ ಹೇಳಿದರು. ಭಾರತದ ಬಗ್ಗೆ ಇಮ್ರಾನ್​ಗೆ ಅಷ್ಟು ಪ್ರೀತಿ ಇರುವುದೇ ಆದರೆ, ಅವರು ಅಲ್ಲಿಯೇ ಹೋಗಿ ನೆಲೆಸಲಿ ಎಂದು ವಿಪಕ್ಷ ನಾಯಕಿ ಮರಿಯಂ ನವಾಜ್ ಲೇವಡಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net