

ಇಸ್ಲಾಮಾಬಾದ್: ಐಎಸ್ಐ ಮುಖ್ಯಸ್ಥರ ನೇಮಕಕ್ಕೆ ಸಂಬಂಧಿಸಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ನಡುವೆ ಭಿನ್ನಮತ ಏರ್ಪಟ್ಟಿದೆ. ಐಎಸ್ಐ ಮುಖ್ಯಸ್ಥನ ಸ್ಥಾನದಿಂದ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರನ್ನು ಕೆಳಕ್ಕಿಳಿಸುವ ಸಂಬಂಧ ಬಜ್ವಾ ನೀಡಿದ ಏಕಪಕ್ಷೀಯ ಆದೇಶ ಈ ಭಿನ್ನಮತಕ್ಕೆ ಕಾರಣವಾಗಿದೆ.
ಹಮೀದ್ ಜಾಗಕ್ಕೆ ಕರಾಚಿ ಕೋರ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ನದೀಂ ಅಹಮದ್ ಅಂಜುಂ ಅವರ ನೇಮಕ ಆದೇಶ ಹೊರಡಿಸುವಂತೆ ಬಜ್ವಾ ಸರ್ಕಾರಕ್ಕೆ ಅಕ್ಟೋಬರ್ 6ರಂದು ಸೂಚಿಸಿದ್ದರು. ಇಮ್ರಾನ್ ಖಾನ್ ಇದನ್ನು ಈಡೇರಿಸದ ಕಾರಣ, ಎಲ್ಲ ನೇಮಕ ಪ್ರಕ್ರಿಯೆಗಳೂ ಬಹುತೇಕ ಸ್ಥಗಿತಗೊಂಡಿವೆ. ಹಮೀದ್ ಮುಂದುವರಿಕೆಯನ್ನು ಇಮ್ರಾನ್ ಬಯಸಿದ್ದು, ಇದಕ್ಕೆ ಬಜ್ವಾ ಸಹಮತ ಸೂಚಿಸಿಲ್ಲ. ಅಲ್ಲದೆ, ನದೀಂ ನೇಮಕದ ವಿಚಾರ ಮುಂಚಿತವಾಗಿ ರ್ಚಚಿಸಿಲ್ಲ ಎಂಬ ಅಸಮಾಧಾನವೂ ಇಮ್ರಾನ್ಗೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ, ಐಎಸ್ಐ ಮುಖ್ಯಸ್ಥರ ನೇಮಕಕ್ಕೆ ಸಂಬಂಧಿಸಿದ ಬಿಕ್ಕಟ್ಟು ಶೀಘ್ರವೇ ಕೊನೆಗೊಳ್ಳಲಿದೆ. ಈ ಸಂಬಂಧ ಸರ್ಕಾರ ಆದೇಶ ಹೊರಡಿಸಲಿದೆ ಎಂದು ಪಾಕ್ ಗೃಹ ಸಚಿವ ಶೇಖ್ ರಶೀದ್ ಅಹ್ಮದ್ ತಿಳಿಸಿದ್ದಾರೆ. ಇನ್ನೊಂದೆಡೆ, ಅಕಸ್ಮಾತ್ ಐಎಸ್ಐ ಮುಖ್ಯಸ್ಥ ಸ್ಥಾನದಿಂದ ಹಮೀದ್ ತೆರವಾಗಿ ಹೊಸಬರು ಬಂದರೆ ಇಮ್ರಾನ್ ಖಾನ್ ಸರ್ಕಾರ ಸುಂಟರಗಾಳಿಗೆ ಸಿಲುಕಿದ ತರಗೆಲೆಯಂತೆ ಪತನವಾಗಲಿದೆ. ಸೇನೆಯ ಜತೆಗೆ ಇಮ್ರಾನ್ ಖಾನ್ ಈಗ ಸಮರಕ್ಕೆ ಇಳಿದಿರುವ ಕಾರಣ, ನಾಗರಿಕ ಸರ್ಕಾರದ ಪತನವನ್ನು ಅಲ್ಲಗಳೆಯಲಾಗದು ಎಂದು ಪಿಎಂಎನ್ ಎಲ್ ಉಪಾಧ್ಯಕ್ಷೆ ಮರಿಯಂ ನವಾಜ್ ಹೇಳಿದ್ದಾರೆ.