ಹಿಜಾಬ್ ವಿವಾದಕ್ಕೆ ಕಿಡಿಹಚ್ಚಿದ ಪಾಕ್!; ನೂರಕ್ಕೂ ಹೆಚ್ಚು ನಕಲಿ ಟ್ವಿಟರ್ ಖಾತೆ ಆರಂಭ..

Front Hijab
Published on

ನವದೆಹಲಿ: ಜಾಗತಿಕ ಮಟ್ಟದಲ್ಲಿ ಭಾರತದ ಹೆಸರಿಗೆ ಮಸಿ ಬಳಿಯಲು ಕರ್ನಾಟಕದ ಹಿಜಾಬ್ ವಿವಾದವನ್ನು ಪಾಕಿಸ್ತಾನ ಬಳಸಿಕೊಳ್ಳುತ್ತಿದೆ ಎಂಬ ಮಾಹಿತಿಯನ್ನು ಗುಪ್ತಚರ ದಳಗಳ ಅಧಿಕಾರಿಗಳು ಹೊರಗೆಡವಿದ್ದಾರೆ. ಅಲ್ಲದೆ ಈ ವಿವಾದದ ಕಿಚ್ಚು ಹರಡಲು ಪಾಕಿಸ್ತಾನದ ಕುಮ್ಮಕ್ಕು ಕಾರಣವಿರಬಹುದೆಂದೂ ಅವರು ಅನುಮಾನಿಸಿದ್ದಾರೆ. ಫೆ.9ರಂದು ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ್ದ ವಿಡಿಯೋ ವೈರಲ್ ಆದ ನಂತರ ಆಕೆಯ ಹೆಸರಿನಲ್ಲಿ 100ಕ್ಕೂ ಹೆಚ್ಚು ನಕಲಿ ಟ್ವಿಟರ್ ಖಾತೆಗಳನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆ ಖಾತೆಗಳ ಪೈಕಿ ಒಂದು ನಕಲಿ ಖಾತೆಯ ಮೂಲ ಪಾಕಿಸ್ತಾನದ್ದಾಗಿದ್ದು ಅದಕ್ಕೆ ಸುಮಾರು 5,000 ಹಿಂಬಾಲಕರಿದ್ದಾರೆ. ನಂತರ ಆ ಖಾತೆಯ ಭೌಗೋಳಿಕ ನೆಲೆ ವಿವಾದದ ಕೇಂದ್ರವಾದ ಕರ್ನಾಟಕಕ್ಕೆ ಸ್ಥಳಾಂತರಗೊಂಡಿದೆ.

ತಾಲಿಬಾನ್ ಬೆಂಬಲ?: ಮುಸ್ಕಾನ್ ಹೆಸರಿನಲ್ಲಿರುವ ಒಂದು ಖಾತೆ ಫೆ.11ರಂದು ತಾಲಿಬಾನ್ ನೀಡಿದ ‘ಬೆಂಬಲ’ಕ್ಕಾಗಿ ಕೃತಜ್ಞತೆ ಸಲ್ಲಿಸಿದೆ. ನಕಲಿ ಖಾತೆಗಳು ಹಿಜಾಬ್ ವಿವಾದ ಕುರಿತ ಜನಪ್ರಿಯ ಹ್ಯಾಷ್​ಟ್ಯಾಗ್​ಗಳನ್ನು ಬಳಸಿಕೊಂಡಿದ್ದು ಆ ಪೈಕಿ ಬಹುತೇಕ ಟ್ವೀಟ್​ಗಳು ಪಾಕ್ ಮೂಲದ್ದಾಗಿವೆ. 2019ರ ಡಿಸೆಂಬರ್​ನಿಂದಲೇ ಮುಸ್ಕಾನ್ ಹೆಸರಿನಲ್ಲಿ ಅಸ್ತಿತ್ವದಲ್ಲಿರುವ ಇನ್ನೊಂದು ಟ್ವಿಟರ್ ಹ್ಯಾಂಡಲ್ ಸುಮಾರು 37,000 ಫಾಲೋವರ್​ಗಳನ್ನು ಹೊಂದಿದೆ. ಹಿಜಾಬ್ ವಿವಾದ ಭುಗಿಲೆದ್ದ ನಂತರ ಅದರ ಎಲ್ಲ ಟ್ವೀಟ್​ಗಳನ್ನು ಡಿಲೀಟ್ ಮಾಡಲಾಗಿದೆ.

ಉರ್ದುಸ್ತಾನ್​ಗೆ ಜನಮತಗಣನೆ: ‘ಸಿಖ್ಸ್ ಫಾರ್ ಜಸ್ಟಿಸ್’ನಂಥ ಖಲಿಸ್ತಾನ್-ಪರ ಗುಂಪುಗಳು ಹಿಜಾಬ್ ಜನಮತಗಣನೆಗೆ ಒತ್ತಾಯಿಸುವಂತೆ ಭಾರತದ ಮುಸ್ಲಿಮರಿಗೆ ಕರೆ ನೀಡಿವೆ ಎಂದು ಪಾಕ್​ನ ಸರ್ಕಾರಿ ಸ್ವಾಮ್ಯದ ‘ರೇಡಿಯೊ ಪಾಕಿಸ್ತಾನ್’ ಹೇಳಿದೆ. ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ, ಬಿಹಾರ ಮತ್ತು ಬಂಗಾಳದ ಪ್ರದೇಶಗಳನ್ನು ಒಳಗೊಂಡ ‘ಉರ್ದುಸ್ತಾನ್’ ರಚಿಸುವುದು ಜನಮತಗಣನೆ ಚಳವಳಿಯ ಉದ್ದೇಶವಾಗಿದೆ. ಎಸ್​ಎಫ್​ಜೆ ನಾಯಕ ಗುರ್​ಪತ್ವಂತ್ ಸಿಂಗ್ ಈ ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ಬೆದರಿಕೆ ಹಾಕಿದ್ದು ಹೊಸ ಮುಸ್ಲಿಂ ದೇಶದ ಬೇಡಿಕೆ ಮುಂದಿಟ್ಟಿದ್ದಾನೆ.

ಸಂಪೂರ್ಣ ಚಿತ್ರಣ: ಪಾಕಿಸ್ತಾನದ ಪ್ರಮುಖ ಸಾಮಾಜಿಕ ಮಾಧ್ಯಮವಾದ ಹಕೀಕತ್ ಟಿವಿ ಭಾರತದ ಹಿಜಾಬ್ ವಿವಾದದ ಸಂಪೂರ್ಣ ವಿವರಗಳನ್ನು ಪ್ರಸಾರ ಮಾಡುತ್ತಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಪುತ್ರಿ ಮರಿಯಂ ತನ್ನ ಟ್ವಿಟರ್ ಖಾತೆಯ ಪ್ರೊಫೈಲ್ ಚಿತ್ರದಲ್ಲಿ ಮುಸ್ಕಾನ್ ಹೋಲುವ ಹುಡುಗಿಯ ಚಿತ್ರ ಹಾಕಿಕೊಂಡಿದ್ದಾರೆ. ಹಿಜಾಬ್ ಧರಿಸಿದ ಹುಡುಗಿ ಘೋಷಣೆ ಕೂಗುವ ಭಂಗಿಯಲ್ಲಿ ಕೈ ಮೇಲೆ ಎತ್ತಿರುವ ಚಿತ್ರ ಅದಾಗಿದೆ. ಹಿಜಾಬ್ ವಿವಾದದ ಬಗ್ಗೆ ಭಾರತ ಸರ್ಕಾರದ ನಿಲುವನ್ನು ಪಾಕ್ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಫವಾದ್ ಹುಸೇನ್ ಟೀಕಿಸಿದ್ದಾರೆ.

ಆಂಧ್ರದಲ್ಲಿ ಹಿಜಾಬ್ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಣೆ

ವಿಜಯವಾಡ: ಕರ್ನಾಟಕದ ಹಿಜಾಬ್ ವಿವಾದ ಆಂಧ್ರ ಪ್ರದೇಶಕ್ಕೂ ಕಾಲಿಟ್ಟಿದ್ದು ವಿಜಯವಾಡದ ಆಂಧ್ರ ಲೊಯೋಲಾ ಕಾಲೇಜ್ ಗುರುವಾರ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕಾಲೇಜ್ ಪ್ರವೇಶಿಸಲು ಅನುಮತಿ ನಿರಾಕರಿಸಿದೆ. ಆದರೆ ತಾವು ಪ್ರಥಮ ವರ್ಷದಿಂದಲೂ ಬುರ್ಕಾ ಅಥವಾ ಹಿಜಾಬ್ ಧರಿಸಿಯೇ ಕಾಲೇಜ್​ಗೆ ಹೋಗುತ್ತಿರುವುದಾಗಿ ವಿದ್ಯಾರ್ಥಿನಿಯರು ವಾದಿಸಿದ್ದಾರೆ. ಕಾಲೇಜ್ ಐಡಿ ಕಾರ್ಡ್​ಗಾಗಿ ಬುರ್ಕಾದೊಂದಿಗೆ ಫೊಟೋ ತೆಗೆಸಿಕೊಂಡಿದ್ದನ್ನೂ ಅವರು ಉಲ್ಲೇಖಿಸಿದ್ದಾರೆ. ಕೆಲವರು ಹಿಜಾಬ್ ಮತ್ತು ಬುರ್ಕಾ ಧರಿಸಿ ಬಂದಿರುವುದಕ್ಕೆ ಪದವಿ ಕಾಲೇಜ್​ನ ಪ್ರಿನ್ಸಿಪಾಲ್ ಫಾದರ್ ಕಿಶೋರ್ ಅಡ್ಡಿಪಡಿಸಿದ್ದರಿಂದ ಸಮಸ್ಯೆ ಸೃಷ್ಟಿಯಾಗಿತ್ತು. ವಿಷಯ ತಿಳಿದು ಕಾಲೇಜ್​ಗೆ ಧಾವಿಸಿದ ಕೆಲವು ಮುಸ್ಲಿಂ ಮುಖಂಡರು ಆಡಳಿತ ವರ್ಗದೊಂದಿಗೆ ಮಾತುಕತೆ ನಡೆಸಿದ ನಂತದ ವಿವಾದ ತಣ್ಣಗಾಗಿದ್ದು ವಿದ್ಯಾರ್ಥಿನಿಯರು ತರಗತಿಗಳಿಗೆ ತೆರಳಲು ಬಿಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net