ಪಾಕ್​ ಮಾಜಿ ಪ್ರಧಾನಿಗೆ ಕರೊನಾ ಸೋಂಕು: ಸಚಿವರಿಗೂ ಬಿಡದ ಮಹಾಮಾರಿ!

abbasi
Published on

ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಪ್ರಧಾನಿ ಶಾಹಿದ್‌ ಖಾನ್‌ ಅಬ್ಬಾಸಿ‌ ಮತ್ತು ಪಾಕ್​ನ ರೈಲ್ವೆ ಸಚಿವ ಶೇಖ್‌ ರಶೀದ್‌ಗೆ ಕರೊನಾ ಸೋಂಕು ತಗುಲಿದೆ.

ಕರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಇವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸೋಂಕು ದೃಢಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಬ್ಬರು ಕ್ವಾರಂಟೈನ್‌ನಲ್ಲಿದ್ದಾರೆ.

ಪಾಕಿಸ್ತಾನದಲ್ಲಿ ಇದುವರೆಗೆ ನಾಲ್ಕು ಮಂದಿ ಜನಪ್ರತಿನಿಧಿಗಳು ವೈರಸ್‌ನಿಂದಾಗಿ ಸಾವಿಗೀಡಾಗಿದ್ದಾರೆ. 2017 ರಿಂದ 2018ರವರೆಗೂ ಪ್ರಧಾನಿಯಾಗಿದ್ದ 61 ವರ್ಷದ ಅಬ್ಬಾಸಿಗೆ, ಸೋಂಕಿನ ಲಕ್ಷಣ ಗೋಚರವಾಗುತ್ತಿದ್ದಂತೆ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಪಾಕಿಸ್ತಾನದ ಹಾಲಿ ಪ್ರಧಾನಿ ಇಮ್ರಾನ್​ ಖಾನ್​ ಕೂಡ ಕರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು. ಈದಿ ಫೌಂಡೇಶನ್‌ನ ಮುಖ್ಯಸ್ಥ ಹಾಗೂ ಪ್ರಸಿದ್ಧ ಸಮಾಜ ಸೇವಕ ಅಬ್ದುಲ್‌ ಸತ್ತಾರ ಈದಿ ಅವರ ಪುತ್ರ ಫೈಸಲ್‌ ಅವರನ್ನು ಇಮ್ರಾನ್‌ ಖಾನ್‌ ಭೇಟಿ ಮಾಡಿದ್ದರು. ಈ ಭೇಟಿಯ ನಮತರ ಫೈಸಲ್​ಗೆ ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಇಮ್ರಾನ್​ ಖಾನ್​ ಕೂಡ ಗಾಬರಿಗೊಂಡು ಪರೀಕ್ಷೆ ಮಾಡಿಸಿಕೊಂಡಿದ್ದರು. ಅದರೆ ಅವರಿಗೆ ಸೋಂಕು ತಗುಲಿಲ್ಲ ಎಂದು ದೃಢಪಡಿಸಲಾಗಿತ್ತು.

ಸೋಮವಾರದವರೆಗೆ ಪಾಕಿಸ್ತಾನದಲ್ಲಿ 1.8 ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆ. 35,018 ಮಂದಿ ಗುಣಮುಖರಾಗಿದ್ದರೆ, ಇದಾಗಲೇ 2,172 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net