ಭಾರತಕ್ಕೆ ಸವಾಲು ಹಾಕುವ ಪಾಕ್​ಗೆ ಒಂದೆರೆಡಲ್ಲ ಸಂಕಷ್ಟ! ಭಯಾನಕ ಪರಿಸ್ಥಿತಿಯ ಮಧ್ಯೆಯೂ ಯುದ್ಧದ ಮಾತು | Pahalgam

ವಿಜಯವಾಣಿ (82)
Published on

Pahalgam Terror Attack: ಏಪ್ರಿಲ್​ 22ರಂದು ಕಾಶ್ಮೀರದ ಪಹಲ್ಗಾಮ್​ನಲ್ಲಿ ಸಂಭವಿಸಿದ ಉಗ್ರರ ಭೀಕರ ಗುಂಡಿನ ದಾಳಿಗೆ 26 ಅಮಾಯಕರು ಜೀವಬಿಟ್ಟಿದ್ದಾರೆ. ಕರ್ನಾಟಕದ ಮೂವರು ಸೇರಿದಂತೆ ಒಟ್ಟು 26 ಮಂದಿಪ್ರಾಣವನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯಿಂದ ಇಡೀ ದೇಶವೇ ಕೆರಳಿದೆ. 2019, ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಯೋಧರು ವೀರ ಮರಣ ಹೊಂದಿದ ಬಳಿಕ ಜಮ್ಮು ಮತ್ತು ಕಾಶ್ಮೀರವನ್ನು ಬೆಚ್ಚಿಬೀಳಿಸಿದ ಮತ್ತೊಂದು ಹತ್ಯಾಕಾಂಡ ಮಂಗಳವಾರ ಪಹಲ್ಗಾಮ್‌ನ ಪ್ರವಾಸಿ ತಾಣದಲ್ಲಿ ನಡೆದಿದೆ. ಉಗ್ರರ ಹುಟ್ಟನ್ನು ಅಡಗಿಸಲು ಪಣತೊಟ್ಟಿರುವ ಭಾರತ, ಉಗ್ರರ ಮನೆಗಳನ್ನು ಛಿದ್ರಗೊಳಿಸುವ ಮೂಲಕ ಖಡಕ್ ಎಚ್ಚರಿಕೆ ರವಾನಿಸಿದೆ.

ಸೊಕ್ಕಿನ ಮಾತು

ಬುಧವಾರ ಏ.​23ರ ಸಂಜೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯ ಲೋಕ ನಾಯಕ್ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಗಡಿಯಾಚೆಗಿನ ಭಯೋತ್ಪಾದನೆಯನ್ನು ಕೊನೆಗೊಳಿಸುವವರೆಗೆ ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತ, ಅಟ್ಟಾರಿ-ವಾಘಾ ಗಡಿ ಬಂದ್​, ಪಾಕಿಸ್ತಾನಿ ಪ್ರಜೆಗಳ ವೀಸಾ ರದ್ದು ಸೇರಿದಂತೆ ಹಲವು ಕಠಿಣ ನಿರ್ಣಯಗಳನ್ನು ಭಾರತ ತೆಗೆದುಕೊಂಡಿದೆ. ಇವು ಈಗಾಗಲೇ ಪಾಕ್​ಗೆ ದೊಡ್ಡ ಮಟ್ಟದಲ್ಲಿ ಹೊಡೆತ ನೀಡಿದೆ. ಇಷ್ಟಾದರೂ ಬುದ್ಧಿ ಕಲಿಯದ 'ಪಾಪಿಸ್ತಾನ', ತನ್ನ ಸೊಕ್ಕಿನ ನಡೆಯನ್ನು ಎಂದಿನಂತೆ ಮುಂದುವರಿಸಿದೆ.

ಸಿಂಧೂ ಜಲ ಒಪ್ಪಂದ ರದ್ದು, ಪಾಕಿಸ್ತಾನಿ ಪ್ರಜೆಗಳಿಗೆ ಎಲ್ಲಾ ರೀತಿಯ ವೀಸಾ ಸೇವೆಗಳು ತಕ್ಷಣವೇ ರದ್ದುಗೊಳಿಸುವಂತೆ ಘೋಷಿಸಲಾಗಿದೆ. ಈಗಾಗಲೇ ನೀಡಲಾದ ವೀಸಾಗಳು ಇಂದಿಗೆ (ಏ.27) ಮಾತ್ರ ಮಾನ್ಯವಾಗಿರುತ್ತವೆ. ವೈದ್ಯಕೀಯ ವೀಸಾಗಳು ಏಪ್ರಿಲ್ 29ರವರೆಗೆ ಮಾತ್ರ ಮಾನ್ಯವಾಗಿರುತ್ತವೆ ಮತ್ತು ಅವಧಿ ಮುಗಿಯುವ ಮೊದಲು ಪಾಕ್ ಪ್ರಜೆಗಳು ಭಾರತ ಬಿಟ್ಟು ತೊಲಗಬೇಕು. ಇದು ವಿದೇಶಾಂಗ ಸಚಿವಾಲಯ ಹೊರಡಿಸಿರುವ ಅತ್ಯಂತ ಕಟು ಆದೇಶವಾಗಿದೆ. ಮತ್ತೊಂದೆಡೆ, ಕೇಂದ್ರ ಸರ್ಕಾರವು ಪಾಕಿಸ್ತಾನದೊಂದಿಗಿನ ವ್ಯಾಪಾರ ಸಂಬಂಧಗಳನ್ನು ಸಹ ಸ್ಥಗಿತಗೊಳಿಸಿದ್ದು, ಈ ನಿರ್ಧಾರ ಅಲ್ಲಿನ ಷೇರುಪೇಟೆ ಕುಸಿತಕ್ಕೂ ದೊಡ್ಡ ಹೊಡೆತ ನೀಡಿದೆ.

ಔಷಧ ಪೂರೈಕೆಯಲ್ಲೂ ತೊಂದರೆ

ಪಾಕಿಸ್ತಾನದ ಔಷಧ ನಿಯಂತ್ರಣ ಪ್ರಾಧಿಕಾರ (DRAP) ಆಕಸ್ಮಿಕ ಯೋಜನೆಗಳು ಜಾರಿಯಲ್ಲಿವೆ ಎಂದು ದೃಢಪಡಿಸಿದೆ. "2019ರ ಬಿಕ್ಕಟ್ಟಿನ ಬಳಿಕ ನಾವು ಅಂತಹ ತುರ್ತು ಪರಿಸ್ಥಿತಿಗಳಿಗೆ ತಯಾರಿ ಮಾಡಲು ಒಗ್ಗಿಕೊಂಡಿದ್ದೇವೆ. ನಮ್ಮ ಔಷಧೀಯ ಅಗತ್ಯಗಳನ್ನು ಪೂರೈಸಲು ನಾವು ಪ್ರಸ್ತುತ ಪರ್ಯಾಯ ಮಾರ್ಗಗಳನ್ನು ಸಕ್ರಿಯವಾಗಿ ಅನ್ವೇಷಿಸುತ್ತಿದ್ದೇವೆ" ಎಂದು ಹಿರಿಯ DRAP ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ರೇಬೀಸ್ ವಿರೋಧಿ ಲಸಿಕೆಗಳು, ಹಾವಿನ ವಿರೋಧಿ ವಿಷ, ಕ್ಯಾನ್ಸರ್ ಚಿಕಿತ್ಸೆಗಳು, ಮೊನೊಕ್ಲೋನಲ್ ಪ್ರತಿಕಾಯಗಳು ಮತ್ತು ಇತರ ಪ್ರಮುಖ ಜೈವಿಕ ಉತ್ಪನ್ನಗಳು ಸೇರಿದಂತೆ ಅಗತ್ಯ ವೈದ್ಯಕೀಯ ಸರಬರಾಜುಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸುವುದು DRAPF ಗುರಿಯಾಗಿದೆ. ಪ್ರಸ್ತುತ ಭಾರತ-ಪಾಕಿಸ್ತಾನ ನಡುವಿನ ವ್ಯಾಪಾರ-ವಹಿವಾಟು ಸಂಪರ್ಕಗಳು ಸಂಪೂರ್ಣ ಸ್ಥಗಿತಗೊಂಡಿರುವುದರಿಂದ, ಔಷಧಿಗಳ ಪೂರೈಕೆಯನ್ನು ಮುಂದುವರಿಸಲು ಚೀನಾ, ರಷ್ಯಾ ಮತ್ತು ಹಲವಾರು ಯುರೋಪಿಯನ್ ದೇಶಗಳಿಂದ ಪರ್ಯಾಯ ಮಾರ್ಗಗಳನ್ನು ಅನ್ವೇಷಿಸಲಾಗುತ್ತಿದೆ ಎಂದು DRAP ಅಧಿಕಾರಿಗಳು ತಿಳಿಸಿದ್ದಾರೆ.

ಬಿಕ್ಕಟಿನ ಇಕ್ಕಟ್ಟು

ಈಗಿರುವ ಬಿಕ್ಕಟ್ಟಿನ ಪರಿಸ್ಥಿಗಳ ನಡುವೆ ಔಷಧಿಗಳನ್ನು ಆಮದು ಮಾಡಿಕೊಳ್ಳುವಲ್ಲಿ ಎದುರಾಗುವ ತೊಂದರೆಗಳ ಕುರಿತು ಪಾಕಿಸ್ತಾನದ ಆರೋಗ್ಯ ಸಚಿವಾಲಯವು ಇನ್ನೂ ಅಧಿಕೃತ ಆದೇಶಗಳನ್ನು ಸ್ವೀಕರಿಸಿಲ್ಲ. ಆದಾಗ್ಯೂ, ಈ ವಲಯದಲ್ಲಿ ತೀವ್ರ ಕೊರತೆಯ ಭೀತಿ ಹೆಚ್ಚುತ್ತಿದೆ ಎಂಬುದು ಗಮನಾರ್ಹ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net