ದಯವಿಟ್ಟು ಆಕೆಯನ್ನು ಮಾತ್ರ ಪಾಕಿಸ್ತಾನಕ್ಕೆ ಕಳುಹಿಸಬೇಡಿ... ವಿಡಿಯೋ ಮಾಡಿ ಬೇಡಿಕೊಂಡ ರಾಖಿ ಸಾವಂತ್​! Rakhi Sawant

Rakhi Sawant
Published on

Rakhi Sawant : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ಪಾಕಿಸ್ತಾನದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಪಾಕಿಸ್ತಾನಿಗಳು ಭಾರತವನ್ನು ತೊರೆಯುವಂತೆ ಆದೇಶಿಸಿದೆ. ಅಲ್ಲದೆ, ಪಾಕಿಸ್ತಾನಿಗಳಿಗೆ ವೀಸಾಗಳನ್ನು ಸಹ ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ 2023ರಲ್ಲಿ ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ತನ್ನ ಭಾರತೀಯ ಪ್ರೇಮಿ ಸಚಿನ್ ಮೀನಾರನ್ನು ಮದುವೆಯಾಗಿರುವ ಪಾಕ್​ ಮೂಲದ ಸೀಮಾ ಹೈದರ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಸದ್ಯ ಸೀಮಾ ಹೈದರ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಸೀಮಾ ಕೂಡ ಪಾಕಿಸ್ತಾನಕ್ಕೆ ಹಿಂತಿರುಗುತ್ತಾರಾ? ಎಂಬುದು ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಆದಾಗ್ಯೂ, ಬಾಲಿವುಡ್​ ಸಿನಿಮಾ ರಂಗದ ವಿವಾದಾತ್ಮಕ ನಟಿ ರಾಖಿ ಸಾವಂತ್, ಸೀಮಾರನ್ನು ಬೆಂಬಲಿಸಿ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಸೀಮಾ ಹೈದರ್ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸದಂತೆ ಭಾರತ ಸರ್ಕಾರವನ್ನು ರಾಖಿ ಸಾವಂತ್​ ವಿನಂತಿಸಿದ್ದಾರೆ. ಪಹಲ್ಗಾಮ್​ ದಾಳಿಗೂ ಸೀಮಾ ಹೈದರ್​ಗೂ ಯಾವುದೇ ಸಂಬಂಧವಿಲ್ಲ ಮತ್ತು ಆಕೆ ನಿರಪರಾಧಿ ಎಂದು ರಾಖಿ ಸಾವಂತ್​ ಹೇಳಿದ್ದಾರೆ.

ಸೀಮಾ ಈಗಾಗಲೇ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸಚಿನ್​ಗೆ ಹುಟ್ಟಿದ ಓರ್ವ ಮಗಳು ಕೂಡ ಇದ್ದಾಳೆ. ಅಲ್ಲದೆ, ತನ್ನ ಮಗುವಿಗೆ ಭಾರತಿ ಮೀನಾ ಎಂದು ಹೆಸರು ಸಹ ಇಟ್ಟಿದ್ದಾರೆ. ಸೀಮಾ ಒಬ್ಬ ತಾಯಿ, ಸಚಿನ್ ಅವರ ಪತ್ನಿ ಮತ್ತು ಸಚಿನ್​ ಮಗುವಿನ ತಾಯಿ ಕೂಡ ಹೌದು ಎಂದು ರಾಖಿ ಹೇಳಿದ್ದಾರೆ. ಸದ್ಯ, ಸೀಮಾ ಹೈದರ್​ ಭಾರತದ ಸೊಸೆಯಾಗಿರುವುದರಿಂದ, ಅವರನ್ನು ಅನ್ಯಾಯವಾಗಿ ನಡೆಸಿಕೊಳ್ಳಬಾರದು ಮತ್ತು ಗೌರವಿಸಬೇಕು ಎಂದು ರಾಖಿ ಸಾವಂತ್​ ಆಗ್ರಹಿಸಿದ್ದಾರೆ.

ಭಾರತವು ವೀಸಾ ಸೇವೆಗಳನ್ನು ರದ್ದುಗೊಳಿಸಲು ನಿರ್ಧರಿಸಿದ ನಂತರ ಮತ್ತು ಪಾಕಿಸ್ತಾನಿಗಳು 48 ಗಂಟೆಗಳ ಒಳಗೆ ಭಾರತವನ್ನು ತೊರೆಯುವಂತೆ ಕಟ್ಟುನಿಟ್ಟಿನ ಆದೇಶಗಳನ್ನು ನೀಡಿದ ನಂತರ, ರಾಖಿ ಅವರು ಸೀಮಾರವನ್ನು ಬೆಂಬಲಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸೀಮಾ ಹೈದರ್​ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಮತ್ತೊಂದೆಡೆ, ಸೀಮಾ ಅವರ ವಕೀಲ ಎಪಿ ಸಿಂಗ್ ಇದೇ ವಿಚಾರವಾಗಿ ಇತ್ತೀಚೆಗೆ ಮಾತನಾಡಿದ್ದು, ಸೀಮಾ ಪಾಕಿಸ್ತಾನಿ ಪ್ರಜೆಯಲ್ಲದ ಕಾರಣ ಆಕೆಗೆ ಭಾರತದಲ್ಲಿ ವಾಸಿಸಲು ಅವಕಾಶ ನೀಡಲಾಗುವುದು ಎಂದಿದ್ದಾರೆ. ಸೀಮಾ ಅವರು ಗ್ರೇಟರ್ ನೋಯ್ಡಾ ನಿವಾಸಿ ಸಚಿನ್ ಮೀನಾ ಅವರನ್ನು ವಿವಾಹವಾಗಿದ್ದು, ಇತ್ತೀಚೆಗೆ ಒಂದು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಅವರ ಪೌರತ್ವವು ಭಾರತೀಯ ಪತಿಗೆ ಸಂಬಂಧಿಸಿರುವುದರಿಂದ, ಕೇಂದ್ರದ ಆದೇಶಗಳು ಅವರಿಗೆ ಅನ್ವಯಿಸುವ ಸಾಧ್ಯತೆಯಿಲ್ಲ ಎಂದು ವಾದಿಸುತ್ತಾರೆ. ಪ್ರಸ್ತುತ, ಸೀಮಾ ಹೈದರ್ ಅವರ ಪೌರತ್ವ ಮತ್ತು ಅಕ್ರಮ ವಲಸೆ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದೆ.

ಅಂದಹಾಗೆ, 32 ವರ್ಷದ ಸೀಮಾ 2023ರಲ್ಲಿ ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ, ಗ್ರೇಟರ್ ನೋಯ್ಡಾದ ರಬುಪುರ ನಿವಾಸಿ 24 ವರ್ಷದ ಸಚಿನ್ ಮೀನಾ ಅವರನ್ನು ವಿವಾಹವಾದರು. ಮೊದಲ ಪತಿ ಗುಲಾಮ್ ಹೈದರ್ ಕಿರುಕುಳದಿಂದಾಗಿ ಸೀಮಾ ಅವರು ಪಾಕಿಸ್ತಾನವನ್ನು ತೊರೆದು, ಭಾರತಕ್ಕೆ ಬಂದು ಸಚಿನ್​ರನ್ನು ಮದುವೆಯಾಗಿ ಜೀವನ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net