ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ ಪಹಲ್ಗಾಮ್​! ಲಾಭವೂ ಇಲ್ಲ, ಆದಾಯವೂ ಇಲ್ಲ; ಕ್ಯಾಬ್​ ಮಾರಲು ಚಿಂತನೆ | Pahalgam

ವಿಜಯವಾಣಿ (49)
Published on

Pahalgam: ಉಗ್ರರ ಭೀಕರ ಗುಂಡಿನ ದಾಳಿ ಘಟನೆ ನಡೆದು ಇಂದಿಗೆ 45 ದಿನಗಳು ಕಳೆದಿದ್ದೇ ಆದರೂ ಪ್ರವಾಸಿಗರ ಆಗಮನವಿಲ್ಲದೆ ಪಹಲ್ಗಾಮ್​ ಬಿಕೋ ಎನ್ನುತ್ತಿದೆ. 26 ಅಮಾಯಕರು ಜೀವ ಕಳೆದುಕೊಂಡ ಸ್ಥಳಕ್ಕೆ ಇದೀಗ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿಲ್ಲ. ಸದ್ಯ ಇದೇ ಅಲ್ಲಿನ ಕ್ಯಾಬ್​ ಚಾಲಕರು, ಸ್ಥಳೀಯ ವ್ಯಾಪಾರಸ್ಥರಿಗೆ ದೊಡ್ಡ ತಲೆನೋವಾಗಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಜೂನ್​ ಮತ್ತು ಜುಲೈ ತಿಂಗಳಲ್ಲಿ ಪ್ರವಾಸಿಗರಿಂದಲೇ ತುಂಬಿ ತುಳುಕುವ ಪಹಲ್ಗಾಮ್​ ಟ್ಯಾಕ್ಸಿ ಸ್ಟಾಂಡ್, ಸದ್ಯ ಉಗ್ರರ ದಾಳಿ ಹಿನ್ನೆಲೆ ಜನರಿಲ್ಲದೆ ಖಾಲಿಯಾಗಿದೆ. ​ಇದರ ಪರಿಣಾಮ ನೂರಾರು ಸ್ಥಳೀಯ ವ್ಯಾಪಾರಿಗಳು ಮತ್ತು ಕ್ಯಾಬ್ ಚಾಲಕರು, ಗೈಡ್​ಗಳು ಆದಾಯವಿಲ್ಲದೆ ತೀರ ಹೆಣಗಾಡುವಂತ ಪರಿಸ್ಥಿತಿ ತಲುಪಿದ್ದಾರೆ. ಇತ್ತ ಲಾಭವೂ ಇಲ್ಲ, ಸರಿಯಾದ ಆದಾಯವೂ ಇಲ್ಲ. ಕಾರಿನ ಸಾಲ ತೀರಿಸಲು ಆಗ್ತಿಲ್ಲ ಎಂದು ಕೆಲವರು ತಮ್ಮ ಕ್ಯಾಬ್​ ಮಾರಾಟ ಮಾಡಲು ಮುಂದಾಗಿದ್ದಾರೆ.

ಕ್ಯಾಬ್ ಚಾಲಕನ ಅಳಲು

ಕಳೆದ 4 ವರ್ಷಗಳಿಂದ ಪಹಲ್ಗಾಮ್​ನಲ್ಲೇ ಕ್ಯಾಬ್​ ಚಾಲಕನಾಗಿ ಕೆಲಸ ಮಾಡುತ್ತಿರುವ ನಜೀರ್ ಅಹ್ಮದ್​ ಮಾತನಾಡಿ, "ಒಂದು ದಿನಕ್ಕೆ 500ಕ್ಕೂ ಹೆಚ್ಚು ವಾಹನಗಳು ಮತ್ತು 1200ಕ್ಕೂ ಅಧಿಕ ಪ್ರವಾಸಿಗರಿಂದಲೇ ತುಂಬಿರುತ್ತಿದ್ದ ಸ್ಥಳ ಈಗ ಮರುಭೂಮಿಯಂತಾಗಿದೆ. ಸದ್ಯ ನಾವೆಲ್ಲ ಅಮರನಾಥ ಯಾತ್ರೆಗಾಗಿ ಕಾಯುತ್ತಿದ್ದೇವೆ. ಪ್ರಸ್ತುತ ಬಿಕ್ಕಟ್ಟಿನಿಂದ ಒಂದು ದಿನಕ್ಕೆ ಲಕ್ಷಾಂತರ ರೂ. ಹಣವನ್ನು ಕಳೆದುಕೊಳ್ಳುತ್ತಿದ್ದೇವೆ. ಮಕ್ಕಳ ಸ್ಕೂಲ್​ ಫೀಜ್​ ಮತ್ತು ಮನೆಯವರಿಗೆ ಊಟ ಹಾಕಲು ಗೋಳಾಡುವ ಪರಿಸ್ಥಿತಿ ಎದುರಾಗಿದೆ" ಎಂದು ಅಳಲು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net