ಏ.24ಕ್ಕೆ ವಾಪಾಸ್​ ಆಗಬೇಕಿತ್ತು; ಬಂದೂಕು ಹಣೆಗಿಟ್ಟು ಗುಂಡು ಹಾರಿಸಿದ್ರು; ಮೃತ ಮಂಜುನಾಥ್ ಪತ್ನಿ ಅಳಲು | Pahalgam

ವಿಜಯವಾಣಿ (50)
Published on

Pahalgam Terror Attack: ಇಂದು (ಏ.22) ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಭೀಕರ ಗುಂಡಿನ ದಾಳಿಗೆ 27ಕ್ಕೂ ಅಧಿಕ ಪ್ರವಾಸಿಗರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಇವರಲ್ಲಿ ಕರ್ನಾಟಕದ ಶಿವಮೊಗ್ಗದ ವಿಜಯನಗರ ನಿವಾಸಿ ರಿಯಲ್​​ ಎಸ್ಟೇಟ್​ ಉದ್ಯಮಿ ಮಂಜುನಾಥ್​ ಎಂಬುವರು ಉಗ್ರರ ಗುಂಡೇಟಿಗೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಭಯೋತ್ಪಾದಕರ ದಾಳಿಯಲ್ಲಿ ಪತ್ನಿ ಮತ್ತು ಪುತ್ರನೊಂದಿಗೆ ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗದ ಉದ್ಯಮಿಯೊಬ್ಬರು ಧಾರುಣವಾಗಿ ಮೃತಪಟ್ಟ ಸುದ್ದಿ ಸದ್ಯ ಕುಟುಂಬಸ್ಥರಲ್ಲಿ ಕಂಗಾಲಾಗಿಸಿದೆ. ವಿಜಯನಗರದ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದ ಮಂಜುನಾಥ್ ರಾವ್ (47) ಮೃತ ದುರ್ಧೈವಿ. ಮಂಜುನಾಥ್ ಅವರು ಪತ್ನಿ ಪಲ್ಲವಿ ಹಾಗೂ ಪುತ್ರ ಅಭಿಜೇಯ ಜತೆ ಶನಿವಾರ (ಏ.19) ಜಮ್ಮು-ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದ ವೇಳೆ ಕಾಶ್ಮೀರದ ಪಹಲ್ಗಾಮ್ ಬಳಿ ಉಗ್ರರ ಗುಂಡಿನ ದಾಳಿ ಸಂಭವಿಸಿದೆ.

ಈ ಭೀಕರ ದಾಳಿಯಲ್ಲಿ ಮಂಜುನಾಥ್ ರಾವ್ ಸ್ಥಳದಲ್ಲೇ ಅಸುನೀಗಿದ್ದಾರೆ. ಮಂಜುನಾಥ್ ಪತ್ನಿ ಹಾಗೂ ಪುತ್ರರನ್ನು ಸ್ಥಳೀಯರು ರಕ್ಷಿಸಿದ್ದೇ ಆದರೂ ಪತಿಯನ್ನು ಕಳೆದುಕೊಂಡ ನೋವು ಪಲ್ಲವಿ ಅವರನ್ನು ಅಕ್ಷರಶಃ ಕುಸಿಯುವಂತೆ ಮಾಡಿದೆ. ಪ್ರವಾಸಕ್ಕೆ ತೆರಳಿದ್ದವರ ಬಳಿ ಬಂದ ಉಗ್ರನೊಬ್ಬ ಮಂಜುನಾಥ್‌ ರಾವ್ ಅವರ ಧರ್ಮ ಮತ್ತು ಹೆಸರು ಕೇಳಿದ್ದಾನೆ. ತನ್ನ ಹೆಸರು, ಧರ್ಮ ಹೇಳುತ್ತಿದ್ದಂತೆ ಏಕಾಏಕಿ ಬಂದೂಕು ತಲೆಗಿಟ್ಟು ಗುಂಡು ಹಾರಿಸಿದ ಉಗ್ರ, ನಿಂತಲ್ಲೇ ಮಂಜುನಾಥ್​ರನ್ನು ಹತ್ಯೆಗೈದಿದ್ದಾನೆ.

ಅಂದುಕೊಂಡಂತೆ ಮಂಜುನಾಥ್​ ತಮ್ಮ ಕುಟುಂಬ ಸಮೇತ ಏ.24ರಂದು ಶಿವಮೊಗ್ಗಕ್ಕೆ ವಾಪಾಸ್​ ಆಗಬೇಕಿತ್ತು. ಆದರೆ, ಅಷ್ಟರೊಳಗೆ ಈ ದುರ್ಘಟನೆ ಸಂಭವಿಸಿದೆ. ಘಟನೆಯ ಕರಾಳತೆ ಬಿಚ್ಚಿಟ್ಟ ಪಲ್ಲವಿ, ನನ್ನನ್ನು ಮತ್ತು ನನ್ನ ಮಗನನ್ನೂ ಕೊಲ್ಲುವಂತೆ ಆ ಉಗ್ರರನನ್ನು ಕೇಳಿಕೊಂಡೆ. ಆದರೆ, ಆತ ನಾನು ನಿಮ್ಮನ್ನು ಕೊಲ್ಲುವುದಿಲ್ಲ. ನೀನು ಹೋಗಿ ಮೋದಿಗೆ ಈ ಘಟನೆ ಬಗ್ಗೆ ಹೇಳುವಂತೆ ಹೇಳಿ ಅಲ್ಲಿಂದ ಕಾಲ್ಕಿತ್ತ ಎಂದು ವಿವರಿಸಿದರು.

ಪಲ್ಲವಿ ಮ್ಯಾಮ್ಕೋಸ್ ಉದ್ಯೋಗಿ

ಮಂಜುನಾಥ ರಾವ್ ಅವರ ಪತ್ನಿ ಪಲ್ಲವಿ ಬಿರೂರಿನ ಮ್ಯಾಮ್ಕೋಸ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಅಲ್ಲದೆ, ಮಂಜುನಾಥ ಅವರ ತಂದೆ ಕೂಡ ಮ್ಯಾಮ್ಕೋಸ್ ಉದ್ಯೋಗಿಯಾಗಿದ್ದರು. ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ದೂರವಾಣಿ ಮೂಲಕ ಭಯೋತ್ಪಾದಕರ ದಾಳಿಗೆ ಮಂಜುನಾಥ ಬಲಿ ಆಗಿರುವ ವಿಷಯ ತಿಳಿದಿದೆ. ಅವರ ಮೃತದೇಹವನ್ನು ಶಿವಮೊಗ್ಗಕ್ಕೆ ಕರೆತರುವ ಸಂಬಂಧ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್‌ಪಿ ಜಿ.ಕೆ. ಮಿಥುನ್‌ ಕುಮಾರ್ ಅವರೊಂದಿಗೆ ಮಾತನಾಡಿದ್ದೇವೆ. ಬುಧವಾರ ಮೃತದೇಹ ಶಿವಮೊಗ್ಗಕ್ಕೆ ತರುವ ನಿರೀಕ್ಷೆ ಇದೆ ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net