

ಮಾನವತ್ವದಿಂದ ಮಾಧವನ ಕಡೆಗೆ ಸಾಗುವುದೇ ಜೀವನದ ಸಾಧನೆಯಾಗಿದ್ದು, ಧಾರ್ಮಿಕ ಶಿಕ್ಷಣ ಪಡೆಯುವ ನೀಡುವ ಮೂಲಕ ನಮ್ಮನ್ನು ನಾವು ಅರಿತುಕೊಳ್ಳಬೇಕು. ಸಾಧನೆಗಳಿಗೆ ಶರೀರವೇ ಮೂಲಧಾತುವಾಗಿರುವುದರಿಂದ ಶರೀರಕ್ಕೆ ಧರ್ಮ ಶಿಕ್ಷಣ ಮೂಲಕ ಸಂಸ್ಕಾರ ಒದಗಿಸುವ ಕೆಲಸ ಆಗಬೇಕು ಎಂದು ಪುತ್ತೂರು ತಾಲೂಕು ಧರ್ಮ ಶಿಕ್ಷಣ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್ ಹೇಳಿದರು.
ಪುತ್ತೂರಿನಲ್ಲಿ ತಾಲೂಕಿನಾದ್ಯಂತ ಧರ್ಮ ಶಿಕ್ಷಣ ಜಾರಿಗೊಳಿಸುವ ಹಿನ್ನೆಲೆಯಲ್ಲಿ ರಚಿಸಲಾದ ತಾಲೂಕು ಧರ್ಮ ಶಿಕ್ಷಣ ಸಮಿತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕು ಧರ್ಮ ಶಿಕ್ಷಣ ಸಮಿತಿ ಅಧ್ಯಕ್ಷ ದಂಬೆಕಾನ ಸದಾಶಿವ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದು ಧರ್ಮ ಶಿಕ್ಷಣದ ಬಗೆಗೆ ಯಾರಿಗೂ ಅರಿವಿಲ್ಲ. ನಮಗೆ ತೋಚಿಂದಂತೆ ಆಚರಣೆಗಳನ್ನು ಮಾಡುತ್ತಿದ್ದೇವೆ. ನಮ್ಮ ಗ್ರಾಮಗಳಲ್ಲಿ ನಮ್ಮ ಮಕ್ಕಳಿಗೆ ಶಿಕ್ಷಣ ಬೇಕೆಂದು ಹೇಳುವ ಅನೇಕ ತಾಯಂದಿರು ಇದ್ದಾರೆ. ಹಿರಿಯರ ಪೀಳಿಗೆ ಧರ್ಮ ಶಿಕ್ಷಣದಿಂದ ವಂಚಿತರಾದರೂ ಮುಂದಿನ ಪೀಳಿಗೆ ಬಗೆಗೆ ತಿಳಿಸುವ ಅವಕಾಶ ಸಿಕ್ಕಿದೆ ಎಂದರು.
ಧರ್ಮ ಶಿಕ್ಷಣ ತಾಲೂಕು ಸಮಿತಿಯನ್ನು ಹಿಂದು ಸಮಾಜದ ಮಾತೆಯರು ಉದ್ಘಾಟಿಸಿದರು. ಸಮಿತಿಯ ಕಾರ್ಯದರ್ಶಿ ಶೈಲೇಶ್ ಜೆ.ರಾವ್, ತಾಲೂಕು ಮಹಿಳಾ ಪ್ರಮುಖ್ ಪ್ರಭಾವತಿ, ಖಜಾಂಚಿ ಮಾಧವ ಸ್ವಾಮಿ ಉಪಸ್ಥಿತರಿದ್ದರು. ಪ್ರಭಾವತಿ ಪ್ರಾರ್ಥಿಸಿದರು. ಸುಬ್ರಹ್ಮಣ್ಯ ನಟ್ಟೋಜ ವಂದಿಸಿದರು. ಸಾಮಾಜಿಕ ಕಾರ್ಯಕರ್ತ ದಿನೇಶ್ ಕುಮಾರ್‌ಜೈನ್ ನಿರೂಪಿಸಿದರು.
ಹಿಂದುಗಳಿಗೆ ಧರ್ಮ ಶಿಕ್ಷಣ ದೊರೆಯುತ್ತಿಲ್ಲ ಎಂಬುದನ್ನು ಮನಗಂಡ ಶೃಂಗೇರಿ ಶ್ರೀಗಳು ಪ್ರತಿ ಗ್ರಾಮದಲ್ಲೂ ಧರ್ಮ ಶಿಕ್ಷಣ ನೀಡುವ ಯೋಚನೆ ಮಾಡಿದ್ದಾರೆ. ಶಿಕ್ಷಣ ಸಂಸ್ಥೆಗಳು, ಭಜನಾ ಮಂದಿರ, ದೇವಸ್ಥಾನ, ದೈವಸ್ಥಾನಗಳಲ್ಲಿ ಧರ್ಮ ಶಿಕ್ಷಣಕ್ಕೆ ಮಹತ್ವ ನೀಡಬೇಕು. ಕರ್ನಾಟಕದಲ್ಲಿಯೇ ಮೊತ್ತ ಮೊದಲ ಬಾರಿಗೆ ಎಂಬಂತೆ ಧರ್ಮ ಶಿಕ್ಷಣದ ಯೋಚನೆ ಪುತ್ತೂರಿನಲ್ಲಿ ಸಾಕಾರಗೊಳ್ಳುತ್ತಿದೆ.
| ಸುಬ್ರಹ್ಮಣ್ಯ ನಟ್ಟೋಜ
ಧರ್ಮ ಶಿಕ್ಷಣ ಸಮಿತಿ ಸಮಿತಿ ಸಂಚಾಲಕ