

Pahalgam attack : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಕೇಂದ್ರ ಸರ್ಕಾರ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂಬುದಕ್ಕೆ ಪುರಾವೆಗಳು ಸಿಗುತ್ತಿದ್ದಂತೆ, ತಕ್ಕ ಪಾಠ ಕಲಿಸಲು ಕೇಂದ್ರ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ, ಪಾಕಿಸ್ತಾನಿ ನಾಗರಿಕರ ವೀಸಾಗಳನ್ನು ರದ್ದುಗೊಳಿಸಿದೆ ಮತ್ತು ಅವರೆಲ್ಲರೂ ಈ ತಿಂಗಳ 27 ರೊಳಗೆ ಭಾರತವನ್ನು ತೊರೆಯಬೇಕು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಇದಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಎಲ್ಲ ರಾಜ್ಯಗಳಲ್ಲಿರುವ ಪಾಕಿಸ್ತಾನಿಗಳ ವಿವರಗಳನ್ನು ಸಂಗ್ರಹಿಸಿ ದೇಶದಿಂದ ಹೊರಗೆ ಕಳುಹಿಸಲು ಆದೇಶಿಸಿದ್ದಾರೆ. ಈ ಸಂದರ್ಭದಲ್ಲಿ, ಪಾಕಿಸ್ತಾನದ ಹಿಂದೂ ನಿರಾಶ್ರಿತರು ಚಿಂತಿತರಾಗಿದ್ದಾರೆ.
ಎಲ್ಲ ಹಿಂದೂ ನಿರಾಶ್ರಿತರು ತಾವು ಭಾರತದಲ್ಲೇ ಇರುತ್ತೇವೆ ಎಂದು ಕೇಂದ್ರ ಸರ್ಕಾರದ ಬಳಿ ಬೇಡಿಕೊಳ್ಳುತ್ತಿದ್ದಾರೆ. ಪಾಕಿಸ್ತಾನದಲ್ಲಿರುವ ಹಿಂದೂ ಅಲ್ಪಸಂಖ್ಯಾತರ ಪರಿಸ್ಥಿತಿ ಭೀಕರವಾಗಿದ್ದು, ಅಲ್ಲಿಗೆ ಹಿಂತಿರುಗಿದರೆ ಮತ್ತೆ ಕಿರುಕುಳಕ್ಕೊಳಗಾಗಬೇಕಾಗುತ್ತದೆ ಎಂದು ಹಿಂದೂ ನಿರಾಶ್ರಿತರು ಚಿಂತಿತರಾಗಿದ್ದಾರೆ.
ನರಕಯಾತನೆಯಿಂದ ಕೂಡಿದ ಪಾಕಿಸ್ತಾನಕ್ಕೆ ಹೋಗಲು ನಾವು ಸಿದ್ಧರಿಲ್ಲ ಮತ್ತು ಭಾರತದಲ್ಲೇ ಸಾಯಲು ಸಿದ್ಧರಿದ್ದೇವೆ. ಏನೇ ಆಗಲಿ ನಾವು ಪಾಕಿಸ್ತಾನಕ್ಕೆ ಹೋಗುವುದಿಲ್ಲ. ನಾವು ಬದುಕಿದರೂ ಅಥವಾ ಸತ್ತರೂ ಅದು ಭಾರತದಲ್ಲೇ ಎಂದು ಹಿಂದೂ ನಿರಾಶ್ರಿತರು ಹೇಳುತ್ತಿದ್ದಾರೆ. ಅಲ್ಲದೆ, ತಮ್ಮ ಬಳಿ ಅಲ್ಲಿ ಯಾವುದೇ ಆಸ್ತಿ ಇಲ್ಲ ಮತ್ತು ಎಲ್ಲವನ್ನೂ ಮಾರಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ
ಪಾಕಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂ ನಿರಾಶ್ರಿತರು ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಕೆಲವರು ದೆಹಲಿಯ ಮಜ್ನುಕಾ ತಿಲ್ಲಾ ಮತ್ತು ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಏಕಲವ್ಯ ಭಿಲ್ ಬಸ್ತಿಯಲ್ಲಿ ವಾಸಿಸುತ್ತಿದ್ದಾರೆ. ಇದೀಗ ಭಾರತ ಸರ್ಕಾರದ ನಿರ್ಧಾರದಿಂದ ಅವರೆಲ್ಲರೂ ದೇಶವನ್ನು ತೊರೆಯಬೇಕಾಗಿದೆ. ಅವರಲ್ಲಿ ಕೆಲವರು ವರ್ಷಗಟ್ಟಲೆ, ತಿಂಗಳುಗಟ್ಟಲೆ ಭಾರತದಲ್ಲೇ ಇದಾರೆ. ಕೆಲವರು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಕೆಲವು ದಿನಗಳ ಮೊದಲು ಭಾರತಕ್ಕೆ ಬಂದವರೂ ಇದ್ದಾರೆ.
ದೆಹಲಿಯ ಮಜ್ನಕಾ ತಿಲ್ಲಾದಲ್ಲಿರುವ ಹಿಂದೂ ನಿರಾಶ್ರಿತ ಸಮುದಾಯದ ಅಧ್ಯಕ್ಷ ಸೋನಾದಾಸ್ ಮಾತನಾಡಿ, ನಾವು ಇಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದೇವೆ. ಒಂದು ಅಥವಾ ಎರಡು ತಿಂಗಳ ಹಿಂದೆ ಇಲ್ಲಿಗೆ ಬಂದವರೂ ಇದ್ದಾರೆ. ಭಾರತ ಸರ್ಕಾರ ಪ್ರತಿ ಎರಡು ವರ್ಷಗಳಿಗೊಮ್ಮೆ ನಮ್ಮ ವೀಸಾಗಳನ್ನು ನವೀಕರಿಸುತ್ತದೆ. ಭಯೋತ್ಪಾದಕ ದಾಳಿಯ ನಂತರ, ಪೊಲೀಸರು ಎಲ್ಲ ನಿರಾಶ್ರಿತರ ದಾಖಲೆಗಳನ್ನು ಮರು ಪರಿಶೀಲಿಸುತ್ತಿದ್ದಾರೆ. ಈಗ ಏನಾಗುತ್ತದೆ ಎಂದು ತಿಳಿಯದೆ ಎಲ್ಲರೂ ಚಿಂತಿತರಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ನಾವು ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ಈಗ ನಮ್ಮನ್ನು ಗಡೀಪಾರು ಮಾಡಬೇಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)